18ರಂದು ತಾಲೂಕು ಆಡಳಿತದಿಂದ ಕನಕ ಜಯಂತಿ

| Published : Nov 14 2024, 12:46 AM IST

ಸಾರಾಂಶ

ಚನ್ನಗಿರಿ ತಾಲೂಕು ಆಡಳಿತ ವತಿಯಿಂದ ನ.18ರಂದು ದಾಸಶ್ರೇಷ್ಠ ಕನಕದಾಸ ಜಯಂತ್ಯುತ್ಸವ ಕಾರ್ಯಕ್ರಮದ ಆಯೋಜಿಸುವ ಕುರಿತು ಬುಧವಾರ ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.

- ಚನ್ನಗಿರಿ ತಹಸೀಲ್ದಾರ್‌ ಶಂಕರಪ್ಪ ಅಧ್ಯಕ್ಷತೆ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕು ಆಡಳಿತ ವತಿಯಿಂದ ನ.18ರಂದು ದಾಸಶ್ರೇಷ್ಠ ಕನಕದಾಸ ಜಯಂತ್ಯುತ್ಸವ ಕಾರ್ಯಕ್ರಮದ ಆಯೋಜಿಸುವ ಕುರಿತು ಬುಧವಾರ ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಪಟ್ಟಣದ ಕುರುಬ ಸಮಾಜ ಅಧ್ಯಕ್ಷ ಕೆ.ಆರ್.ಗೋಪಿ ಮಾತನಾಡಿ, ಸರ್ಕಾರದ ವತಿಯಿಂದ ಆಚರಿಸುವ ಜಯಂತಿ ಕಾರ್ಯಕ್ರಮಗಳಿಗೆ ಮತ್ತು ಪೂರ್ವಭಾವಿ ಸಭೆಗಳಿಗೆ ತಾಲೂಕುಮಟ್ಟದ ಯಾವ ಅಧಿಕಾರಿಗಳು ಬರುವುದೇ ಇಲ್ಲ. ಕೇವಲ ಎರಡು ಮೂರು ಇಲಾಖೆಗಳ ಅಧಿಕಾರಿಗಳು ಆಗಮಿಸುತ್ತಾರೆ. ಇನ್ನು ಕೆಲ ಅಧಿಕಾರಿಗಳು ಕಚೇರಿಯಲ್ಲಿಯೇ ಇದ್ದರೂ ತಮ್ಮ ಸಿಬ್ಬಂದಿಯನ್ನೇ ಕಳಿಸುತ್ತಾರೆ. ಇದಕ್ಕೆ ಕಾರಣ ಏನು? ಶೋಷಿತ, ಅಲ್ಪಸಂಖ್ಯಾತ ಸಮುದಾಯಗಳ ದಾರ್ಶನಿಕರ, ಕವಿಗಳು, ಮಹಾಪುರುಷರ ಜಯಂತಿಗಳೆಂದರೆ ಅಧಿಕಾರಿಗಳಿಗೆ ಬೇಜವಾಬ್ದಾರಿಯೇ ಎಂದು ತಹಸೀಲ್ದಾರರನ್ನು ಪ್ರಶ್ನಿಸಿದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಪ್ರತಿಕ್ರಿಯಿಸಿ, ಸಭೆಗೆ ಹಾಜರಾದ ಅಧಿಕಾರಿಗಳ ಹಾಜರಾತಿಯನ್ನು ಪಡೆದುಕೊಂಡಿದ್ದು, ತರಬೇತಿ, ಮೀಟಿಂಗ್‌ಗಳಿಗೆ ಹೋದ ಅಧಿಕಾರಿಗಳನ್ನು ಹೊರತುಪಡಿಸಿ, ಕಚೇರಿಯಲ್ಲಿಯೇ ಇದ್ದು ಸಭೆಗೆ ಬಾರದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು ಎಂದು ಕಚೇರಿ ಸಿಬ್ಬಂದಿಗೆ ಸೂಚನೆ ನೀಡಿದರು.

ಸರ್ಕಾರದ ನಿಯಮಾನುಸಾರ ಕಾನೂನಿನ ಚೌಕಟ್ಟಿನಲ್ಲಿ ಕನಕದಾಸರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಬೇಕಾಗಿದೆ. ಯಾವುದೇ ದಾರ್ಶನಿಕರು, ಕವಿಗಳು, ಮಹಾಪುರುಷರು, ಸ್ವಾತಂತ್ರ್ಯ ಹೋರಾಟಗಾರರನ್ನು ಜಾತಿಗೆ ಸೀಮಿತಗೊಳಿಸಬಾರದು. ಎಲ್ಲ ಜಾತಿ, ಧರ್ಮಗಳ ಜನರೂ ಒಗ್ಗಟ್ಟಿನಿಂದ ಸೇರಿ ಹಬ್ಬದ ರೀತಿಯಲ್ಲಿ ಜಯಂತಿ ಆಚರಿಸೋಣ ಎಂದರು.

ನ.18ರಂದು ಕನಕದಾಸ ಜಯಂತ್ಯುತ್ಸವ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಬೀರಲಿಂಗೇಶ್ವರ ದೇವಾಲಯದಿಂದ ಶ್ರೀ ಕನಕದಾಸರ ಭಾವಚಿತ್ರವನ್ನು ಅಲಂಕೃತಗೊಂಡ ವಾಹನದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಸಮಾರಂಭ ನಡೆಯುವ ಸ್ಥಳಕ್ಕೆ ಆಗಮಿಸಲಾಗುವುದು ಎಂದು ಸಭೆಗೆ ಕುರುಬ ಸಮಾಜದ ಮುಖಂಡರು ತಿಳಿಸಿದರು. ಆಗ ಸಭೆಯು ಒಪ್ಪಿಗೆ ಸೂಚಿಸಿತು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಬಿ.ಕೆ.ಉತ್ತಮ, ತಾಲೂಕು ಆರೋಗ್ಯಾಧಿಕಾರಿ ಶಿವಕುಮಾರ್, ಪಿಎಸ್‌ಐ ರೋಪ್ಲಿಬಾಯಿ, ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅರುಣ್, ಪುರಸಭೆ ಸದಸ್ಯ ಪಟ್ಲಿ ನಾಗರಾಜ್, ಧನಂಜಯ್, ಕನಕ ಸೇವಾ ಟ್ರಸ್ಟಿನ ಅಧ್ಯಕ್ಷ ನಾಗರಾಜ್ ಮೊದಲಾದವರು ಸಭೆಯಲ್ಲಿ ಹಾಜರಿದ್ದರು.

- - -

ಬಾಕ್ಸ್ * ರಾಯಣ್ಣ ಮೂರ್ತಿ ಸ್ಥಾಪನೆಗೆ ಅನುಮತಿ ನೀಡಲು ಮನವಿ ನಗರ ಘಟಕ ಅಧ್ಯಕ್ಷ ಕೆ.ಆರ್.ಗೋಪಿ ಮಾತನಾಡಿ, ಚನ್ನಗಿರಿ ಪಟ್ಟಣದ ಬಸ್ ನಿಲ್ದಾಣ ಮುಂಭಾಗದ ವೃತ್ತಕ್ಕೆ ಸುಮಾರು 20 ವರ್ಷಗಳಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಎಂದು ನಾಮಕರಣ ಮಾಡಿ, ರಾಯಣ್ಣ ಜನ್ಮದಿನದಂದು ಅದ್ಧೂರಿಯಾಗಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ವೃತ್ತದಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಅಧಿಕಾರಿಗಳು ಗಮನಹರಿಸುತ್ತಿಲ್ಲ. ಮುಂಬರುವ ಜನವರಿ 26ರೊಳಗೆ ಈ ವೃತ್ತದಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಲು ಅನುಮತಿ ನೀಡಬೇಕು ಎಂದು ಸಭೆಯಲ್ಲಿ ಮನವಿ ಮಾಡಿದರು.

- - - -13ಕೆಸಿಎನ್‌ಜಿ1:

ಚನ್ನಗಿರಿ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಕನಕದಾಸ ಜಯಂತ್ಯುತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯು ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.