ಕನಕ ಜಯಂತಿ ಕಾರ್ಯಕ್ರಮ ಅರ್ಥಪೂರ್ಣವಾಗಿರಲಿ

| Published : Oct 24 2025, 01:00 AM IST

ಸಾರಾಂಶ

ಯುವಕರು ಹಾಗೂ ಸಮಾಜದ ಹಿರಿಯರು ತಮ್ಮ ಸ್ವಯಂ ಪ್ರೇರಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು

ಕೊಪ್ಪಳ: ನ. 8 ರಂದು ನಡೆಯುವ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯಲ್ಲಿ ಹೆಚ್ಚಿನ ಜನರನ್ನು ಸೇರಿಸುವುದರ ಜತೆಗೆ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜನೆ ಮಾಡಬೇಕೆಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ಅವರು ಗುರುವಾರ ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂತಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಯುವಕರು ಹಾಗೂ ಸಮಾಜದ ಹಿರಿಯರು ತಮ್ಮ ಸ್ವಯಂ ಪ್ರೇರಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.ಯಾರನ್ನೂ ಕರೆ ತರುವ ಕೆಲಸ ಆಗಬಾರದು. ಈ ಸಲ ಕನಕದಾಸರ ಪುತ್ಥಳಿ ಹೊಸದಾಗಿ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಉದ್ಘಾಟನೆ ಆಗಿರುವುದರಿಂದ ಅಲ್ಲಿಂದಲೇ ಕನಕದಾಸರ ಭಾವಚಿತ್ರದ ಮೆರವಣಿಗೆ ಆರಂಭವಾಗಬೇಕು.ನ. 8 ರಂದು ಬೆಳಗ್ಗೆ 10 ಗಂಟೆಗೆ ಮೆರವಣಿಗೆ ಆರಂಭವಾಗಿ ಸಾಹಿತ್ಯ ಭವನದವರೆಗೆ ನಡೆಯಲಿದ್ದು, ಸಾಹಿತ್ಯ ಭವನದಲ್ಲಿ 11 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಕನಕದಾಸರ ಕುರಿತು ಒಳ್ಳೆಯ ಸಂದೇಶ ನೀಡುವ ಉಪನ್ಯಾಸಕರನ್ನು ಕಾರ್ಯಕ್ರಮಕ್ಕೆ ಕರೆಸಬೇಕು. ಕನಕದಾಸರ ಭಾವಚಿತ್ರದ ಮೆರವಣಿಗೆ ಸಂದರ್ಭದಲ್ಲಿ ಡೊಳ್ಳು ಕುಣಿತ ಸೇರಿದಂತೆ ಇತರೆ ಒಳ್ಳೆಯ ಕಲಾತಂಡಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮಕ್ಕೆ ತರಿಸಬೇಕೆಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ ಮಾತನಾಡಿ, ಕನಕದಾಸರ ಜಯಂತಿ ದಿನದಂದು ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು.ಕನಕದಾಸರ ಕುರಿತು ಶಾಲಾ-ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ವಿಜೇತರಾದ ಮಕ್ಕಳಿಗೆ ಸನ್ಮಾನಿಸಬೇಕೆಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಕ್ಯಾ.ಮಹೇಶ್ ಮಾಲಗಿತ್ತಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್. ಹೇಮಂತಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರ, ಕನಕದಾಸ ಸಮಾಜದ ಮುಖಂಡ ಕೆ.ಬಸವರಾಜ ಹಿಟ್ನಾಳ, ಹನುಮಂತಪ್ಪ ಕೌದಿ, ಮುದ್ದಣ್ಣ ಬೇವಿನಹಳ್ಳಿ, ಜಂಬಣ್ಣ ನಂದಾಪೂರ, ಕುಬೇರ ಮಜ್ಜಿಗಿ, ಪರಶುರಾಮ ಅಣ್ಣಿಗೇರಿ, ಆನಂದ ಕಿನ್ನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.