ದಾಸ ಶ್ರೇಷ್ಠರಾಗಿ ಇತಿಹಾಸ ನಿರ್ಮಿಸಿದ ಕನಕ

| Published : Nov 19 2024, 12:47 AM IST

ಸಾರಾಂಶ

16ನೇ ಶತಮಾನದಲ್ಲಿ ಸಮಾಜದ ಅಸ್ಪೃಶ್ಯತೆ, ಮೂಢನಂಬಿಕೆ, ಡಂಬಾಚಾರಗಳನ್ನು ವಿರೋಧಿಸಿ ಸಮಾಜದ ಸುಧಾರಣೆಗೆ ಹೋರಾಟ ಮಾಡಿ ದಾಸಶ್ರೇಷ್ಠರಾಗಿ ಇತಿಹಾಸ ನಿರ್ಮಿಸಿದವರು ಕನಕದಾಸರು ಎಂದು ಪುರಸಭೆ ಅಧ್ಯಕ್ಷೆ ವನಿತಮಧು ಹೇಳಿದರು.

ಕನ್ನಡಪ್ರಭ ವಾರ್ತೆ ಬೀರೂರು

16ನೇ ಶತಮಾನದಲ್ಲಿ ಸಮಾಜದ ಅಸ್ಪೃಶ್ಯತೆ, ಮೂಢನಂಬಿಕೆ, ಡಂಬಾಚಾರಗಳನ್ನು ವಿರೋಧಿಸಿ ಸಮಾಜದ ಸುಧಾರಣೆಗೆ ಹೋರಾಟ ಮಾಡಿ ದಾಸಶ್ರೇಷ್ಠರಾಗಿ ಇತಿಹಾಸ ನಿರ್ಮಿಸಿದವರು ಕನಕದಾಸರು ಎಂದು ಪುರಸಭೆ ಅಧ್ಯಕ್ಷೆ ವನಿತಮಧು ಹೇಳಿದರು.

ಅವರು ಪುರಸಭಾ ಸಭಾಂಗಣಲ್ಲಿ ಏರ್ಪಡಿಸಿದ್ದ 537ನೇ ಕನಕ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕನಕರು ರಚಿಸಿದ ಕಾವ್ಯಗಳು ಕನ್ನಡವನ್ನು ಶ್ರೀಮಂತಗೊಳಿಸಿದೆ. ಕನಕರು ಸಮಾಜದಲ್ಲಿ ಪರಿವರ್ತನೆಯ ಹಾದಿ ತೋರಿದವರು. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅನುಸರಿಸಿ ಜೀವನಸಾರ್ಥಕ ಪಡಿಸಿಕೊಳ್ಳೋಣ ಎಂದರು.ಪುರಸಭೆ ಸದಸ್ಯ ಬಿ.ಆರ್. ಮೋಹನ್‌ಕುಮಾರ್ ಮಾತನಾಡಿ, ಭಕ್ತಿಯಿಂದಲೇ ಭಗವಂತನನ್ನು ಕಾಣಬಹುದು ಎಂಬುದನ್ನು ತಿಳಿಸಿ ಕೊಟ್ಟವರು ಕನಕದಾಸರು. ಕನಕರ ಜೀವನ ಚರಿತ್ರೆಯಲ್ಲಿ ಹರಿ ಮತ್ತು ಹರನಿಗೆ ಒಂದೇ ಪ್ರಾಮುಖ್ಯತೆ ಕೊಟ್ಟಿದ್ದರು. ಕನಕರು ಸಂಸ್ಕೃತಿ ಮತ್ತು ಸಮಾನತೆ ಅವುಗಳನ್ನು ಅಳವಡಿಸಿಕೊಂಡಿದ್ದವರು ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಜಿ. ಪ್ರಕಾಶ್ ಮಾತನಾಡಿ, ತಂದೆ ಮರಣದ ನಂತರ ವಿಜಯನಗರ ದಂಡನಾಯಕರಾದ ಕನಕರು ಬಂಕಾಪುರದ ಯುದ್ಧದಲ್ಲಿ ಸೈನ್ಯ ಸೋತ ಪರಿಣಾಮ ಆಧ್ಯಾತ್ಮಿಯಾಗಿ ಮಾರ್ಪಟ್ಟರು. ಅವರು ರಚಿಸಿದ ಕೀರ್ತನೆಗಳು ಇಂದಿಗೂ ಸಹ ಮಾದರಿ. ಅವರು ತಿಳಿಸಿದ ಸಂದೇಶ ‘ನಾನು” ಎನ್ನುವುದನ್ನು ಕಳೆದುಕೊಂಡವನು ಮಾತ್ರ ಮೋಕ್ಷಕ್ಕೆ ಹೋಗುತ್ತಾನೆಂದು ಕನಕದಾಸರು ಪ್ರತಿಪಾದಿಸಿದ್ದರು ಎಂದರು.

ಪುರಸಭೆ ಉಪಾಧ್ಯಕ್ಷ ಎನ್.ನಾಗರಾಜ್, ಕುರುಬ ಸಮಾಜ ಕೆ.ಎನ್.ವಿನಾಯಕ್, ಪುರಸಭೆ ಸದಸ್ಯರಾದ ರೋಹಿಣಿ ವಿನಾಯಕ್, ಜ್ಯೋತಿ ಸಂತೋಷ್ ಕುಮಾರ್, ಮಾತನಾಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ. ಸುದರ್ಶನ್, ಹಿರಿಯ ಆರೋಗ್ಯ ನಿರೀಕ್ಷಕ ಲಕ್ಷ್ಮಣ್, ಪುರಸಭೆ ಸದಸ್ಯರಾದ ಭಾಗ್ಯಲಕ್ಷ್ಮೀಮೋಹನ್, ಸುಮಿತ್ರ ಕೃಷ್ಣಮೂರ್ತಿ, ಕುರುಬ ಸಮಾಜದ ಯೋಗೀಶ್, ಉಮೇಶ್, ಬಾವಿಮನೆಮಧು, ಗಂಟೆಕುಮಾರ್, ಪುರಸಭೆ ಮಾಜಿ ಸದಸ್ಯ ಬಿ.ಎಂ. ರುದ್ರಪ್ಪ, ಸೋಮಶೇಖರ್, ಸೇರಿದಂತೆ ಸಾರ್ವಜನಿಕರು ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.