ಸಾರಾಂಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಸಮಾಜದಲ್ಲಿ ತಾಂಡವವಾಡುತ್ತಿದ್ದ ಜಾತಿ, ಮತ, ಕುಲ ಎನ್ನುವ ಅಸಮಾನತೆಯ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಕೀರ್ತನೆಗಳ ಮೂಲಕ ಕ್ರಾಂತಿಯನ್ನೇ ಮಾಡಿದ ಕನಕದಾಸರು. ದಾಸ ಸಾಹಿತ್ಯದ ಮೂಲಕ ಸಮಾಜಕ್ಕೆ ಜೀವನಪಾಠ ಸಾರಿದ್ದಾರೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.ತಾಲೂಕಿನ ರಾಂಪುರ ಪತ್ತಿ ಬಸಪ್ಪ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಾಸ ಪರಂಪರೆಯಲ್ಲಿ ಕನಕದಾಸರು ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿದ್ದಾರೆ. ಸರಳ ಮತ್ತು ಸಹಜ ಬದುಕು ಬಾಳಿದ ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದರು. ಅಸಮಾನತೆಯ ವಿರುದ್ಧ ಆಗಿನ ಕಾಲ ಘಟ್ಟದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಬಾಳುವಂತೆ ತಿಳಿಸಿದರು.ಪಟ್ಟಣದಲ್ಲಿ ಕನಕ ಭವನ ನಿರ್ಮಾಣಕ್ಕೆ ಈಗಾಗಲೇ ಎರಡು ಎಕರೆ ಜಮೀನು ಗುರುತಿಸಿ ಸರ್ಕಾರಕ್ಕೆ ಕಳಿಸಲಾಗಿದೆ. ಸರ್ಕಾರ ಮಟ್ಟದಲ್ಲಿ ಈಗಾಗಲೇ ಚರ್ಚಿಸಲಾಗಿದೆ. ಬರುವ ದಿನಗಳಲ್ಲಿ ತಾಲೂಕು ಕೇಂದ್ರ ಸ್ಥಾನದಲ್ಲಿ ಸುಸಜ್ಜಿತ ಕನಕ ಭವನ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಇದೇ ಸಂದರ್ಭದಲ್ಲಿ ಭರವಸೆ ವ್ಯಕ್ತ ಪಡಿಸಿದರು.
ಸಂದರ್ಭದಲ್ಲಿ ಹೊಸದುರ್ಗದ ಕನಕ ಪೀಠದ ಈಶ್ವರನಂದ ಪುರಿ ಸ್ವಾಮೀಜಿ ಮಾತನಾಡಿ ಭಕ್ತಿ ಇದ್ದಲ್ಲಿ ದೇವರು ಒಲಿಯುತ್ತಾನೆ ಎನ್ನುವುದಕ್ಕೆ ಕನಕದಾಸರೇ ಪ್ರಮುಖ ಸಾಕ್ಷಿಯಾಗಿದ್ದಾರೆ. ದೇವರು ಶ್ರೀಮಂತರಿಗೆ ಅಥವಾ ಮೇಲ್ಜಾತಿಯವರಿಗೆ ಮಾತ್ರ ಸೀಮಿತವಾಗದೆ ಅಂತರಂಗದಲ್ಲಿ ಭಕ್ತಿ ಇದ್ದವರು ಯಾರೇ ಆಗಲಿ ಅವರಿಗೆ ದೇವರು ಒಲಿಯುತ್ತಾನೆ. ಅನೇಕ ಸವಾಲುಗಳ ನಡುವೆಯೂ ಕನಕ ದಾಸರು ಸಮಾಜದ ಅಸಮಾನತೆಯನ್ನು ಬಲವಾಗಿ ವಿರೋಧಿಸಿದರು. ಹಾಗಾಗಿ ಜಾತಿಯ ಆಧಾರದಲ್ಲಿ ವ್ಯಕ್ತಿಯನ್ನು ಗುರುತಿಸದೇ ಜ್ಞಾನದ ಮೂಲಕ ಗೌರವಿಸುವಂತ ಕೆಲಸ ಅಗತ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಮಾತನಾಡಿ ಕನಕ ದಾಸರು ಒಂದು ವರ್ಗಕ್ಕೆ ಸೀಮಿತರಾಗಿಲ್ಲ.ಮನು ಕುಲದ ಒಳತಿಗಾಗಿ ಬಿಟ್ಟು ಹೋಗಿರುವ ಅವರ ಆದರ್ಶದಂತೆ ಪ್ರತಿಯೊಬ್ಬರು ಸಾಗಬೇಕು.ಕೀರ್ತನರಾರರಾಗಿ, ತತ್ತ್ವ ಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅನನ್ಯ ಕೊಡುಗೆ ನೀಡಿರುವ ಕನಕದಾಸರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳುವಂತೆ ಹೇಳಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡ ಕುಮಾರ ಗೌಡ ಎಸ್.ಕೆ.ಗುರುಲಿಂಗಪ್ಪ, ಕುಮಾರ ಗೌಡ, ಹಿರಿಯ ಮುಖಂಡ ತಿಮ್ಮಪ್ಪ, ಕಲ್ಲಪ್ಪ, ಗಾಳಿ ಸಿದ್ದಯ್ಯ, ತಾಲೂಕು ಅಧ್ಯಕ್ಷ ಜಿ.ಎನ್.ಜಗದೀಶ್, ತಿಮ್ಲಾಪುರ ಮೂರ್ತಿ.ಆಂಜಿನಪ್ಪ, ಜಿಂಕಾ ಶ್ರೀನಿವಾಸ, ರಾಮಣ್ಣ, ಶಿಕ್ಷಕ ನಾಗರಾಜ, ಎನ್.ಕುಮಾರ್ ಸ್ವಾಮಿ, ನಾಗಾರ್ಜುನ, ಗಿರೀಶ್ ಇದ್ದರು.ಜನಗಣತಿ ವರದಿ ಬಿಡುಗಡೆಗೆ ವಿರೋಧ: ಈಶ್ವರನಂದ ಪುರಿ ಶ್ರೀ
ಬಹು ನಿರೀಕ್ಷಿತ ಜನಗಣತಿ ವರದಿ ಬಿಡುಗಡೆಯಾದಲ್ಲಿ ರಾಜ್ಯದ ಎಲ್ಲಾ ಹಿಂದುಳಿದ ಸಮುದಾಯಗಳು ಜನಸಂಖ್ಯೆ ಆದಾರದಲ್ಲಿ ನಂಬರ್ 1ನೇ ಸ್ಥಾನಕ್ಕೆ ಬರಲಿವೆ ಎನ್ನುವ ಆತಂಕದಿಂದ ಕೆಲವರು ಜನಗಣತಿ ವರದಿ ಬಿಡುಗಡೆಗೆ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಅಂತವರಿಗೆ ಮುಂದಿನ ಚುನಾವಣೆಯಲ್ಲಿ ಮತ ನೀಡಬಾರದು ಎಂದು ಹೊಸದುರ್ಗ ಕನಕ ಗುರು ಪೀಠದ ಈಶ್ವರನಂದ ಪುರಿ ಸ್ವಾಮೀಜಿ ಕರೆ ನೀಡಿದ್ದಾರೆ.
ತಾಲೂಕಿನ ರಾಂಪುರ ಪತ್ತಿ ಬಸಪ್ಪ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಜನಗಣತಿ ವರದಿ ಬಹಿರಂಗಗೊಂಡರೆ ಹಿಂದುಳಿದ ಸಮುದಾಯಗಳು ಜನಸಂಖ್ಯೆ ಆದಾರದಲ್ಲಿ ನಂಬರ್ ಒನ್ ಸ್ಥಾನಕ್ಕೆ ಬರಲಿವೆ. ಅಲ್ಲದೆ ಅಭಿವೃದ್ಧಿಯಾಗಲಿವೆ ಎನ್ನುವ ಆತಂಕ ಕೆಲವರಲ್ಲಿದೆ. ಎಲ್ಲಾ ವರ್ಗದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿಯ ಸಂಪೂರ್ಣ ಮಾಹಿತಿ ಇರುವ ಜನಗಣತಿ ವರದಿ ಮಂಡಿಸದಂತೆ ಕೆಲ ಶಾಸಕರು ಮುಖ್ಯಮಂತ್ರಿಗಳಿಗೆ ಒತ್ತಡ ತಂದಿದ್ದಾರೆ. ಹಿಂದುಳಿದ ಆಯೋಗದ ವರದಿ ಮಂಡನೆಗೆ ವಿರೋಧ ವ್ಯಕ್ತ ಪಡಿಸುತ್ತಿರುವ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಮತ ನೀಡದಂತೆ ಕರೆ ನೀಡಿದರು.
ಸಿಎಂ ಸಿದ್ದರಾಮಯ್ಯ ನಂತರ ಹಿಂದುಳಿದ ವರ್ಗದ ಜನಗಣತಿ ವರದಿ ಬಿಡುಗಡೆಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲಾ ಸಮುದಾಯಗಳ ಆರ್ಥಿಕ ಪ್ರಗತಿ ಇರುವ ವರದಿ ಬಿಡುಗಡೆಗೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಬೆಂಬಲ ನೀಡಬೇಕು. ವರದಿ ಬಿಡುಗಡೆಯಾದಲ್ಲಿ ಹಿಂದುಳಿದ ವರ್ಗದ ಅಭಿವೃದ್ಧಿ ಸಾಧ್ಯವಿದೆ ಎಂದು ತಿಳಿಸಿದರು.