ಕನಕಗಿರಿ: ಮಾ. 11ರಂದು ನಡೆಯುವ ಐತಿಹಾಸಿಕ ಶ್ರೀ ಕನಕಾಚಲಪತಿ ಜಾತ್ರೆ ನಿಮಿತ್ತ ಶೇಷೋತ್ಸವ ಸೋಮವಾರ ಅದ್ಧೂರಿಯಾಗಿ ನಡೆಯಿತು.

ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಆರಂಭಗೊಂಡ ಉತ್ಸವ ಮೆರವಣಿಗೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ಪುಷ್ಪ, ತೆಂಗಿನಕಾಯಿ, ಆರತಿ ಹೀಗೆ ನಾನಾ ಸೇವೆ ಸಲ್ಲಿಸಿ, ನಾನಾ ಬಗೆಯ ಹರಿಕೆ ತೀರಿಸುವ ಮೂಲಕ ಕನಕಾಚಲಪತಿಗೆ ಅನುಗ್ರಹಕ್ಕೆ ಪಾತ್ರರಾದರು. ಇನ್ನೂ ಮೆರವಣಿಗೆ ನಡೆದ ರಾಜಬೀದಿಯಲ್ಲಿ ಗೋವಿಂದಾ ಗೋವಿಂದ... ನಾಮಸ್ಮರಣೆಗೆ ರಾಜಬೀದಿಯಲ್ಲಿ ನೆರದಿದ್ದ ಭಕ್ತ ಸಮೂಹವು ಧ್ವನಿಗೂಡಿಸಿ ಭಕ್ತಿ-ಭಾವ ಮೆರೆಯಿತು.

ಜಾತ್ರೆ ಹಿನ್ನೆಲೆಯಲ್ಲಿ ಶ್ರೀ ಸ್ವಾಮಿಗೆ ಪಂಚಾಮೃತ, ಜಲ, ಪುಷ್ಪ, ಕುಂಕುಮಾರ್ಚನೆ, ನೈವೇದ್ಯ, ಅನ್ನಬಲಿ ಹಾಕುವುದು ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ತಹಸೀಲ್ದಾರ್‌ ವಿಶ್ವನಾಥ ಮುರುಡಿ, ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ದೇವಸ್ಥಾನ ಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ, ಅರ್ಚಕರಾದ ವಿಜಯಪ್ರಸಾದ, ಪುರುಷೋತ್ತಮ, ಮಧುರಕವಿ, ಸಿಂಗ್ರಾಚಾರ್, ದೇಶಿಕಾಚಾರ್, ಪ್ರಮುಖರಾದ ಕನಕರೆಡ್ಡಿ ಮಹಲಿನಮನಿ, ನಜೀರಸಾಬ ಗೋರಳ್ಳಿ, ಸೋಮನಾಥ ತಿಮ್ಮಾಪುರ, ಶಾಮಸಿಂಗ್ ರಜಪೂತ, ರಂಗಪ್ಪ ನಾಯಕ, ಸುದರ್ಶನ ರೆಡ್ಡಿ, ಆಂಜನೇಯ ರೆಡ್ಡಿ ಚಿತ್ರಿಕಿ, ಕನಕರೆಡ್ಡಿ ಚಿತ್ರಿಕಿ ಇತರರಿದ್ದರು.

ಕನಕಾಚಲಪತಿ ಜಾತ್ರೆ ಹಿನ್ನೆಲೆ ಮೊಳಗಿದ ಶಂಖ, ಜಾಗಟೆ ನಾದ:


ಕನಕರಾಯನ ಜಾತ್ರೆ ಪ್ರಯುಕ್ತ ದಾಸಪ್ಪನ ಪೂಜಾ ಕಾರ್ಯಕ್ರಮ ಓಣಿ, ಓಣಿಯಲ್ಲೂ ಸೋಮವಾರ ಭಕ್ತಿಪೂರ್ವಕವಾಗಿ ನಡೆಯಿತು.ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ಸೇರಿದ ದಾಸಪ್ಪನವರು ತಮ್ಮ ಶಂಖ, ಜಾಗಟೆ ನಾದ ಮೊಳಗಿಸಿ ಮನೆ-ಮನೆಯಲ್ಲೂ ದಾಸಪ್ಪನ ಕಾರ್ಯಕ್ರಮ ಮಾಡುವುದು ಸಂಪ್ರದಾಯ. ಈ ವಿಶಿಷ್ಟ ಪದ್ದತಿಯೂ ಮನೆ-ಮನೆಯಲ್ಲೂ ಕನಕಾಚಲನ ಜಾತ್ರೆ ಸಂದರ್ಭದಲ್ಲಿ ಆಚರಿಸುವುದು ಪೂರ್ವಜರಿಂದಲೂ ನಡೆದುಕೊಂಡು ಬಂದಿದೆ.ಪ್ರತಿ ಮನೆಯಲ್ಲೂ ಗೋಪಾಳಕ್ಕೆ ಧಾನ್ಯ ತುಂಬಿ ದೀಪ ಬೆಳಗಿಸಿ ಪೂಜೆ ಸಲ್ಲಿಸುವ ಭಕ್ತರು, ಕಡುಬು ಸಿಹಿಬೇಳೆ, ಸಂಡಿಗೆ, ಪಲ್ಯವನ್ನು ನೈವೇದ್ಯ ಮಾಡುತ್ತಾರೆ. ಆನಂತರ ದಾಸಪ್ಪನವರು ಎಡಗೈಯಲ್ಲಿ ಜಾಗಟೆ ಬಲಗೈಯಲ್ಲಿ ಶಂಖನಾದ ಮೊಳಗಿಸಿ ಕನಕಾಚಲಪತಿ, ತಿರುಪತಿ ತಿಮ್ಮಪ್ಪನ ಧ್ಯಾನಿಸುತ್ತಾರೆ. ಹೀಗೆ ಇಡೀ ಊರಿಗೆ ಊರೇ ಈ ಸಾಂಪ್ರದಾಯಿಕ ಆಚರಣೆ ಮಾಡುವುದು ವಿಭಿನ್ನತೆಗೆ ಸಾಕ್ಷಿಯಾಗಿದೆ.

ಈ ವೈಶಿಷ್ಟ್ಯ ಹಬ್ಬದ ಆಚರಣೆಗೆ ತನ್ನದೆ ಆದ ಪಾವಿತ್ರ್ಯ ಹೊಂದಿದ್ದು, ದಾಸಪ್ಪನವರಿಂದ ಈ ಆಚರಣೆಗೆ ಮಹತ್ವ ಬಂದಿದೆ. ಈಗಲೂ ಈ ಪರಂಪರೆ ಕನಕಗಿರಿಯಲ್ಲಿ ಕನಕಾಚಲಪತಿ ಜಾತ್ರೆ ವೇಳೆ ಅನೇಕ ಸಮುದಾಯದವರು ಮನೆ-ಮನೆಯಲ್ಲಿಯೂ ನಡೆಸುತ್ತಾರೆ.