ಸಾರಾಂಶ
ಮೊದಲು ಕಲಿಯಾಗಿ ಜೀವನ ಮಾಡಿದರೆ, ಅನಂತರದ ಉತ್ತರದ ಬದುಕಿನಲ್ಲಿ ಕವಿಯಾಗಿ ಚರಿತ್ರೆಯಲ್ಲಿ ದಾಖಲಾದರು. ಕನಕದಾಸರ ಸಾಹಿತ್ಯ ಕೃತಿಗಳಂತೆಯೇ ಅವರ ಜೀವನವೂ ಕೂಡ ಮಹಾ ಕೃತಿ. ತಿಮ್ಮಪ್ಪ, ತಿಮ್ಮಪ್ಪ ನಾಯಕ ,ಕನಕ ನಾಯಕ, ಕನಕದಾಸ ಹೀಗೆ ನಾಲ್ಕು ಅವಸ್ಥೆಗಳಲ್ಲಿ ಅವರ ಬದುಕು ಅರಳಿದೆ. ಅವರು ದಂಡನಾಯಕರಾಗಿದ್ದರೆ ಚರಿತ್ರೆಯಲ್ಲಿ ಅವರದು ಕೇವಲ ಎರಡು ಸಾಲಿನ ಬರಹವಾಗುತ್ತಿತ್ತು.
ಕನ್ನಡಪ್ರಭ ವಾರ್ತೆ ಮೈಸೂರು
ವ್ಯಕ್ತಿ ಶ್ರೇಷ್ಠನಾಗಬೇಕಾದರೆ ಜಾತಿ, ಕುಲ, ಧರ್ಮ, ಸಂಪತ್ತು, ಅಧಿಕಾರ, ಅಂತಸ್ತು ಇತ್ಯಾದಿಗಳ ಹಂಗಿಲ್ಲ ಎಂದು ತಮ್ಮ ಜೀವನದಲ್ಲಿ ಸಾಧಿಸಿ ತೋರಿಸಿದ ಆದರ್ಶ ವ್ಯಕ್ತಿ ಕನಕದಾಸರು. ಭಕ್ತಿ, ಸಾಹಿತ್ಯ ,ಜ್ಞಾನ, ಸಂಗೀತ ,ವೈರಾಗ್ಯ, ವಿಚಾರ, ವಿವೇಕ, ಕನ್ನಡತನಗಳ ಒಟ್ಟು ಸಂಗಮವೇ ಕನಕದಾಸರು. ಇವರ ಜ್ಞಾನ ಮಾನವ ಕುಲಕ್ಕೆ ಬೆಳಕಾಗಿದೆ ಎಂದು ಡಾ. ಮಹೇಂದ್ರ ಮೂರ್ತಿ ದೇವನೂರು ಹೇಳಿದರು.ಜೆಎಸ್ಎಸ್ ಮಹಿಳಾ ಕಾಲೇಜು ಸರಸ್ವತಿಪುರಂನಲ್ಲಿ ಕನಕದಾಸರ ಜಯಂತಿಯಲ್ಲಿ ಅವರು ಮಾತನಾಡಿದರು.
ಕನಕದಾಸರು ಎರಡು ಬದುಕುಗಳನ್ನು ಬದುಕಿದವರು. ಮೊದಲು ಕಲಿಯಾಗಿ ಜೀವನ ಮಾಡಿದರೆ, ಅನಂತರದ ಉತ್ತರದ ಬದುಕಿನಲ್ಲಿ ಕವಿಯಾಗಿ ಚರಿತ್ರೆಯಲ್ಲಿ ದಾಖಲಾದರು. ಕನಕದಾಸರ ಸಾಹಿತ್ಯ ಕೃತಿಗಳಂತೆಯೇ ಅವರ ಜೀವನವೂ ಕೂಡ ಮಹಾ ಕೃತಿ. ತಿಮ್ಮಪ್ಪ, ತಿಮ್ಮಪ್ಪ ನಾಯಕ ,ಕನಕ ನಾಯಕ, ಕನಕದಾಸ ಹೀಗೆ ನಾಲ್ಕು ಅವಸ್ಥೆಗಳಲ್ಲಿ ಅವರ ಬದುಕು ಅರಳಿದೆ. ಅವರು ದಂಡನಾಯಕರಾಗಿದ್ದರೆ ಚರಿತ್ರೆಯಲ್ಲಿ ಅವರದು ಕೇವಲ ಎರಡು ಸಾಲಿನ ಬರಹವಾಗುತ್ತಿತ್ತು. ಆದರೆ ಕವಿಯಾಗಿ ಅವರು ಮಾಡಿದ ಸಾಧನೆಗಳು ಅವರನ್ನು ಇತಿಹಾಸದ ಮಹಾ ಪುಟಗಳಲ್ಲಿ ಬರೆದಿಟ್ಟಿದೆ ಎಂದರು.ದಾಸ ಸಾಹಿತ್ಯದ ಧ್ರುವ ನಕ್ಷತ್ರವಾಗಿ ಕನ್ನಡ ಸಾಹಿತ್ಯಕ್ಕೆ ಹೊಸ ಧ್ವನಿಯಾದವರು. ಜನಪರ ಮತ್ತು ಜೀವ ಪರವಾದ ಸಾಹಿತ್ಯವನ್ನು ರಚಿಸಿದವರು. ಖಡ್ಗಕ್ಕಿಂತ ಲೇಖನಿ ಹರಿತ ಎಂಬುದನ್ನು ತೋರಿಸಿದರು. ಕನ್ನಡವನ್ನು ದೇವರ ಭಾಷೆಯನ್ನಾಗಿ ಮಾಡಿದರು. ಸಮಾಜದ ಅಂಕು ಡೊಂಕುಗಳನ್ನು ಕಂಡಾಗ ಬಂಡಾಯಕಾರರಾದರು ಸಾಮರಸ್ಯದ ಬದುಕು ಅವರದಾಗಿತ್ತು ಎಂದರು.
ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೃತಿಗಳನ್ನು ಕೊಡುಗೆಯಾಗಿಸಿದ್ದಾರೆ. ರಾಮಧಾನ್ಯ ಚರಿತ್ರೆ ,ನಳ ಚರಿತ್ರೆ , ಮೋಹನ ತರಂಗಿಣಿ, ಹರಿಭಕ್ತಿಸಾರ ಈ ಕೃತಿಗಳ ಮೂಲಕ ಕನಕದಾಸರ ಸಾಹಿತ್ಯಕ ಕೊಡುಗೆ ಅಪಾರ. ಕೀರ್ತನೆಗಳು, ಸುಳಾದಿ, ಮುಂಡಿಗೆಗಳು ರಚನೆಯ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ ವಿಶಿಷ್ಟ ಕವಿ ಕನಕದಾಸರು. ಅನುಭವ ಮತ್ತು ಅನುಭಾವವನ್ನು ಕನ್ನಡ ಸಾಹಿತ್ಯದಲ್ಲಿ ಧಾರೆ ಎರೆದಿದ್ದಾರೆ ಎಂದು ಅವರು ಹೇಳಿದರು.ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.