ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಮಾಜದಲ್ಲಿದ್ದ ಅಸಮಾನತೆ, ಜಾತಿ ಪದ್ಧತಿ, ಮೌಢ್ಯಗಳಂಥಹ ಅನಿಷ್ಟ ಪದ್ಧತಿಗಳ ವಿರುದ್ಧ 15ನೇ ಶತಮಾನದಲ್ಲಿಯೇ ಅರಿವು ಮೂಡಿಸಿದ್ದ ಮಹಾನ್ ವ್ಯಕ್ತಿ ಕನಕದಾಸರು ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ದಾಸ ಶ್ರೇಷ್ಠ ಕನಕದಾಸರ 537 ನೇ ಜಯಂತಿ ಉದ್ಘಾಟಿಸಿ ಮಾತನಾಡಿ, ಮಾನವ ಕುಲದ ಉದ್ದಾರಕ್ಕಾಗಿ ಸರ್ವವನ್ನೂ ತ್ಯಾಗ ಮಾಡಿದ ಕನಕರ ಆದರ್ಶಗಳು ನಮ್ಮೆಲ್ಲರಿಗೂ ಮಾದರಿಯಾಗಿವೆ ಎಂದರು.
ತಮ್ಮ ಸರಳ ಕೀರ್ತನೆಗಳ ಮೂಲಕ ಸಮಾಜದ ಕಂದಾಚಾರಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಸಾಮಾಜಿಕ ಬದಲಾವಣೆ ತರಲು ಹೊರಟ ಸಾಮಾಜಿಕ ಹೋರಾಟಗಾರ ಕನಕರು ಒಂದು ಜಾತಿಗೆ ಸೀಮಿತವಾದವರಲ್ಲ. ದುರಂತ ಎಂದರೆ ಅವರನ್ನು ಇತ್ತೀಚಿಗೆ ಒಂದು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಪ್ರಧಾನ ಭಾಷಣ ಮಾಡಿದ ಮಮತಾ ಚಂದ್ರಶೇಖರ್, ಕನಕದಾಸರು 20ನೇ ಶತಮಾನದಿಂದ ಪ್ರಕಾಶಮಾನಕ್ಕೆ ಬಂದರು. ಕನಕರು ಕೇವಲ ಕೀರ್ತನೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಪವಾಡ ಸದೃಶ ವ್ಯಕ್ತಿತ್ವ ಹೊಂದಿದ್ದರು. ಭಕ್ತಿಪ್ರಧಾನರಾಗಿದ್ದ ಕನಕರ ಭಕ್ತಿಗೆ ಶ್ರೀಕೃಷ್ಣ ಪರಮಾತ್ಮ ಕೂಡ ಗೋಡೆಯನ್ನು ಬೇಧಿಸಿ ಹಿಂತಿರುಗಿ ದರ್ಶನವನ್ನು ನೀಡಿದಂಥಹ ಅಪರೂಪದ ವ್ಯಕ್ತಿತ್ವ ಎಂದರು.ಕನಕದಾಸರು ರಚಿಸಿದ ಅನೇಕ ಗ್ರಂಥಗಳಲ್ಲಿ ಸಾಮಾಜಿಕ ಕಳಕಳಿಯನ್ನು ಹಾಗೂ ಸಾಮಾಜಿಕ ಬದಲಾವಣೆಯ ಅಂಶಗಳು ಅಡಕವಾಗಿವೆ. ಇಂತಹ ವ್ಯಕ್ತಿತ್ವ ಇರುವ ಕನಕರನ್ನು ಜಗದ್ಗುರು ಎಂದು ಕರೆಯಬೇಕಿದೆ. ಆದರ್ಶ ಪುರುಷರಾಗಿದ್ದ ಕನಕದಾಸರನ್ನು ಕುರಿತಂತೆ ಕನಕ ಸಾಹಿತ್ಯ ಪರಿಷತ್ ರಚಿಸಲು ಸರ್ಕಾರ ಮುಂದಾಗಬೇಕು ಎಂದರು.
ಸಮಾಜ ಸೇವಕ ಮಲ್ಲಿಕಾರ್ಜುನ್ ಮಾತನಾಡಿ, ಸಮಾಜದ ಸುಧಾರಣೆಯಲ್ಲಿ ಇಂದಿಗೂ ನಾವು ನೆನೆಸಿಕೊಳ್ಳುವ ಕಾರ್ಯಗಳನ್ನು ಮಾಡಿದದ್ದ ಮಹಾನ್ ವ್ಯಕ್ತಿ ಕನಕದಾಸರು ಎಂದರು. ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿಮಂದಿರದ ಮುಖ್ಯ ರಸ್ತೆಯಲ್ಲಿ ಜಾನಪದ ಕಲಾ ತಂಡಗಳ ಮೂಲಕ ಕನಕದಾಸರ ಭಾವಚಿತ್ರವನ್ನು ಮೆರವಣಿಗೆ ಮೂಲಕ ಕೆಪಿಎಸ್ ಶಾಲಾ ಆವರಣಕ್ಕೆ ತರಲಾಯಿತು.ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷೆ ಪಂಕಜ, ಜಿಲ್ಲಾ ಕುರುಬರ ಸಂಘದ ಕಾರ್ಯದರ್ಶಿ ಎಂ.ಜೆ.ಶಶಿಧರ್, ತಹಸೀಲ್ದಾರ್ ಲೆ. ಕರ್ನಲ್ ಡಾ.ಎಸ್.ಯು.ಅಶೋಕ್, ಜಿಪಂ ಮಾಜಿ ಸದಸ್ಯ ದೇವರಾಜು, ರಾಮದಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಂದ್‌ಕುಮಾರ್, ತಾಲೂಕು ಕುರುಬರ ಸಂಘಧ ಆದ್ಯಕ್ಷ ಪುರುಷೋತ್ತಮ, ಪುರಸಭಾ ಸದಸ್ಯ ರವೀಂದ್ರಬಾಬು, ಬಿಇಒ ವೈ.ಕೆ.ತಿಮ್ಮೇಗೌಡ, ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಡಾ.ಎಚ್.ಎಸ್.ದೇವರಾಜು, ಬಿಸಿಎಂ ಅಧಿಕಾರಿ ಎಂ.ಎನ್. ವೆಂಕಟೇಶ್, ದಿವಾಕರ್. ಪ್ರಸನ್ನ, ರಾಯಪ್ಪ, ಪೊಲಿಸ್ ನಿರೀಕ್ಷಕಿ ಸುಮಾರಾಣಿ, ನಿವೃತ್ತ ಪ್ರಾಂಶುಪಾಲ ರಾಜಯ್ಯ, ಸುಜೇಂದ್ರಕುಮಾರ್, ಬಸ್ತಿರಂಗಪ್ಪ ಸೇರಿದಂತೆ ಹಲವರಿದ್ದರು.