ಸಾರಾಂಶ
ಚೌಳಹಿರಿಯೂರಲ್ಲಿ ನಡೆದ 537ನೇ ಕನಕ ಜಯಂತ್ಯುತ್ಸವದಲ್ಲಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ
ಕನ್ನಡಪ್ರಭ ವಾರ್ತೆ, ಕಡೂರುದಾರ್ಶನಿಕರಾದ ಕನಕದಾಸರು ಸಾಹಿತ್ಯದ ಮೂಲಕ ಸಮಸಮಾಜ ನಿರ್ಮಾಣದ ಆಶಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ತಿಳಿದರು.
ಚೌಳಹಿರಿಯೂರು ಗ್ರಾಮದಲ್ಲಿ ನಡೆದ 537ನೇ ಕನಕ ಜಯಂತ್ಯುತ್ಸವ ಹಾಗೂ ಮೂಲ ದೇವಸ್ಥಾನ ನಿರ್ಮಾಣಕ್ಕೆ ಕೊಡುಗೆ ನೀಡಿದ ದಾನಿಗಳಿಗೆ ಗೌರವ ಸಮರ್ಪಣೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ಕನಕದಾಸರು ಕೇವಲ ತಮ್ಮ ಕೀರ್ತನೆಗಳಲ್ಲಿ ಭಕ್ತಿ, ವೈರಾಗ್ಯ, ಭಜನೆಗಳಷ್ಟೇ ಅಲ್ಲದೆ 16 ನೇ ಶತಮಾನದ ಸಾಮಾಜಿಕ ವ್ಯವಸ್ಥೆ ವಿರುದ್ಧ ಕ್ರಾಂತಿಕಾರಿ ಸಮರ ಸಾರಿದ್ದರು. ಸಾಮಾಜಿಕ ಮಡಿವಂತಿಕೆ ಕುರಿತು ತಮ್ಮ ಕೀರ್ತನೆಗಳಲ್ಲಿ ವಿಡಂಬನೆಯಾಗಿ ಬಿಂಬಿಸಿದ್ದಾರೆ. ಸಮಾಜದ ಅಸಮಾನತೆ ಅಳಿಸಿ ಹಾಕುವ ಪ್ರಯತ್ನ ಮಾಡಿದ್ದರು ಎಂದರು.ಆದರೆ ಪ್ರಸ್ತುತ ತಮ್ಮ ಮೋಜು ಮಸ್ತಿಗಾಗಿ ದಾರ್ಶನಿಕ ಸಂತರನ್ನು ಬಳಸಿಕೊಳ್ಳುವ ವೇದಿಕೆಗಳು ನಿರ್ಮಾಣ ಗೊಳ್ಳುತ್ತಿ ರು ವುದು ದುರಾದೃಷ್ಟಕರ. ಕನಕದಾಸರು ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕೆಂಬ ನಿಟ್ಟಿನಲ್ಲಿ ಬದುಕಿದ ದಾಸಶ್ರೇಷ್ಠರು. ಅವರ ಹೆಸರಿನಲ್ಲಿ ಶೈನ್ ಆಗುವ ರೀತಿ ಬಳಸಿಕೊಳ್ಳುವ ವೇದಿಕೆಗಳನ್ನು ಯುವ ಸಮೂಹ ನಿರ್ಮಿಸಬಾರದು ಎಂದು ಕಿವಿಮಾತು ಹೇಳಿದರು. ಸಮಾಜದ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಯುವಸಮೂಹ ಸರಿದಾರಿಯಲ್ಲಿ ಸಾಗಿದರೆ ಪ್ರಜ್ಞಾ ವಂತ ಸಮಾಜ ಸೃಷ್ಟಿಸಲು ಸಾಧ್ಯ. ಇಂದಿನ ದಿನಗಳಲ್ಲಿ ಆರ್ಥಿಕ- ಶೈಕ್ಷಣಿಕವಾಗಿ ಬೆಳೆಯುತ್ತಿರುವ ಯುವ ಪೀಳಿಗೆ ತಮ್ಮಲ್ಲಿನ ಬುದ್ದಿವಂತಿಕೆಯನ್ನು ಸರಿಯಾಗಿ ಬಳಸುವ ಕಾರ್ಯವಾಗಬೇಕು. ಇದಕ್ಕೆ ಗುರುಹಿರಿಯರ ಮಾರ್ಗದರ್ಶನ ಅತಿ ಅವಶ್ಯಕ. ಮೂಢನಂಬಿಕೆಗಳ ಆಚರಣೆ ಕೈಬಿಟ್ಟು ಪ್ರಗತಿಯಡೆಗೆ ಸಾಗಬೇಕಿದೆ ಎಂದರು.ಸಮಾರಂಭ ಉದ್ಘಾಟಿಸಿದ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಕನಕದಾಸರನ್ನು ಕೇವಲ ಒಂದು ಜಾತಿಗೆ ಸೀಮಿತ ಗೊಳಿಸದೆ ಶೋಷಿತ ವರ್ಗಗಳ ಧ್ವನಿಯಾಗಿ ಸಾಮಾಜಿಕ ನ್ಯಾಯಕ್ಕೆ ಅಡಿಪಾಯ ಹಾಕಿದ ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಚೌಳಹಿರಿಯೂರು ಗ್ರಾಮದ ಕೆರೆಗಳ ಚಾನೆಲ್ ಅಭಿವೃದ್ಧಿಗೆ ₹1 ಕೋಟಿ, ಕೆರೆ ಅಭಿವೃದ್ದಿಗೆ ₹2 ಕೋಟಿ ಅನುದಾನ ಒದಗಿಸಲಾಗಿದೆ. ಈಗಾಗಲೇ ಮೊರಾರ್ಜಿ ವಸತಿ ಶಾಲೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ನನ್ನ ರಾಜ ಕಾರಣದ ಏಳಿಗೆಗೆ ಹೆಗಲು ನೀಡಿದ ಚೌಳಹಿರಿಯೂರು ಭಾಗದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿ, ದಾಸರ ಪದ ಮತ್ತು ಗಾಯನದ ಮೂಲಕ ಜೀವನ ಸಂದೇಶ ನೀಡಿದ ಕನಕದಾಸರ ವೈಚಾರಿಕ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ. ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿರುವ ಕನಕದಾಸರು ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯಿಂದ ಸಮ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ಮರೆಯಬಾರದು ಎಂದರು.ವಿಷ್ಣುಸೇನಾ ಸಮಿತಿ 2025ರ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿದ ಚಲನಚಿತ್ರ ನಟ-ನಿರ್ಮಾಪಕ ವಿ. ರವಿಚಂದ್ರನ್ ಮಾತನಾಡಿ, ಗ್ರಾಮೀಣ ಜನರ ಪ್ರೀತಿ ಅಭಿಮಾನಗಳ ಗಟ್ಟಿತನವನ್ನು ನಗರಗಳಲ್ಲಿ ಕಾಣಲು ಸಾಧ್ಯವಿಲ್ಲ. ನಂಬಿಕೆ ಆಧಾರದಲ್ಲಿ ಜೀವನ ಸಾಗಿಸಬೇಕಿದೆ. ನಾವು ಭಗವಂತನ ಲೆಕ್ಕಾಚಾರಕ್ಕೆ ಎಲ್ಲರೂ ತಲೆಬಾಗಬೇಕು. ಗ್ರಾಮೀಣ ಭಾಗದ ಹಬ್ಬ ಹರಿದಿನಗಳು ಎಲ್ಲರನ್ನೂ ಒಂದು ಮಾಡಿಸುವ ವೇದಿಕೆಯಾಗಿ ಪರಿವರ್ತನೆಗೊಳ್ಳಲಿದೆ ಎಂದರು.ಈ ಸಂದರ್ಭದಲ್ಲಿ ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್, ಶ್ರೀ ಭೋಗ ನಂಜುಂಡೇಶ್ವರ ವಿಶ್ವಸ್ಥ ಮಂಡಳಿ ಅಧ್ಯಕ್ಷ ಎಚ್.ಎಂ. ರಾಮಚಂದ್ರಪ್ಪ, ಆಸಂದಿ ಮಠದ ಶ್ರೀ ಗುರುರೇವಣ ಸಿದ್ದೇಶ್ವರ ಸಂಸ್ಥಾನ ಮಠದ ಅಜ್ಜಯ್ಯ ಒಡೆಯರ್. ಶ್ರೀಧರ್ ದಳವಾಯಿ, ಕಿರುತೆರೆ ನಟಿ ಆಸಿಯಾ ಫಿರ್ದೂಸ್, ಬಿಬಿಎಂಪಿ ಸಹಾಯಕ ನಿರ್ದೇಶಕ ಹಾಗು ಕಡೂರು ತಾ.ಸರಕಾರಿ ಕುರುಬ ನೌಕರ ಸಂಘದ ಅಧ್ಯಕ್ಷ ಎಚ್.ಕೆ. ತಿಪ್ಪೇಶ್, ರಾಮಚಂದ್ರಪ್ಪ, ಹೋಚಿಹಳ್ಳಿ ಭೋಗಪ್ಪ, ವಕೀಲ ಲಯನ್ ರವಿಕುಮಾರ್, ಜಿಪಂ ಮಾಜಿ ಸದಸ್ಯೆ ವನಮಾಲ ದೇವರಾಜ್, ಎಚ್.ವಿ. ಮಂಜುನಾಥ್, ಕೃಷ್ಣಮೂರ್ತಿ, ಪ್ರಕಾಶ್, ಪುರಸಭಾ ಸದಸ್ಯರಾದ ತೋಟದಮನೆ ಮೋಹನ್, ಮರುಗುದ್ದಿ ಮನು, ಡಿ.ಉಮೇಶ್, ಕಂಸಾಗರ ಸೋಮಶೇಖರ್, ಗೋವಿಂದಪ್ಪ, ಚಂದ್ರಪ್ಪ, ಅಶೋಕ್, ಚೇತನ್ ಸೇರಿದಂತೆ ಗ್ರಾಮಸ್ಥರು ಇದ್ದರು. -- ಬಾಕ್ಸ್ ---ಚೌಳಹಿರಿಯೂರು ಗ್ರಾಮದ ಆರಾಧ್ಯ ದೈವ ಶ್ರೀ ಭೋಗ ನಂಜುಂಡೇಶ್ವರ ದೇವಾಲಯದ ಧಾರ್ಮಿಕ ಕಟ್ಟುಪಾಡುಗಳ ಆಚರಣೆಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ಯುವಪೀಳಿಗೆಗಳು ಸಮಾಜದಲ್ಲಿನ ಆಚರಣೆ ಪದ್ದತಿಗಳಿಗೆ ಹೆಚ್ಚು ಒತ್ತುಕೊಡಬೇಕಿದೆ. ಭಗವಂತ ನಮಗೆ ಎಲ್ಲದನ್ನೂ ನೀಡಿದ್ದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬುದ್ದಿವಂತಿಕೆಯನ್ನು ನಾವು ಮೈಗೂಡಿಸಿಕೊಳ್ಳಬೇಕು. ಸಮಾಜದ ಬೆಳವಣಿಗೆಗೂ ಯುವಕರು ತೊಡಗಿಸಿಕೊಳ್ಳಬೇಕು.-ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಕಾಗಿನೆಲೆ ಕನಕಗುರುಪೀಠ.
13ಕೆಕೆಡಿಯು2..ಕಡೂರು ತಾಲ್ಲೂಕಿನ ಚೌಳಹಿರಿಯೂರು ಗ್ರಾಮದಲ್ಲಿ ನಡೆದ 537ನೇ ಕನಕಜಯಂತ್ಯೋತ್ಸವ ಆಚರಣೆ ಹಾಗೂ ಮೂಲ ದೇವಸ್ಥಾನಗಳ ನಿರ್ಮಾಣಕ್ಕೆ ಕೊಡುಗೆ ನೀಡಿದ ದಾನಿಗಳಿಗೆ ಸನ್ಮಾನ ಸಮಾರಂಭವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಕಾಗಿನೆಲೆ ಶ್ರೀಗಳು, ವಿ.ರವಿಚಂದ್ರನ್, ಪಿ.ಎನ್. ರವೀಂದ್ರ, ಎಚ್.ಕೆ.ತಿಪ್ಪೇಶ್, ಮೋಹನ್‍ಕುಮಾರ್, ಮಂಜುನಾಥ್ ಮತ್ತಿತರಿದ್ದರು..13ಕೆಕೆಡಿಯು2ಎ..ಕಡೂರು ತಾಲ್ಲೂಕಿನ ಚೌಳಹಿರಿಯೂರು ಗ್ರಾಮದಲ್ಲಿ ನಡೆದ 537ನೇ ಕನಕಜಯಂತ್ಯೋತ್ಸವ ಆಚರಣೆ ಹಾಗೂ ಮೂಲ ದೇವಸ್ಥಾನಗಳ ನಿರ್ಮಾಣಕ್ಕೆ ಕೊಡುಗೆ ನೀಡಿದ ದಾನಿಗಳಿಗೆ ಸನ್ಮಾನ ಸಮಾರಂಭದಲ್ಲಿ ನಟ, ವಿ.ರವಿಚಂದ್ರನ್ ಡಾ.ವಿಷ್ಣುವರ್ಧನ್ ರವರ ಕ್ಯಾಲೆಂಡರ್ ಬಿಡುಗಡೆ ಮಾಡಿದರು.