ಕನಕದಾಸರ ಕೀರ್ತನೆಗಳು ಸದಾಕಾಲ ಪ್ರಸ್ತುತ

| Published : Nov 19 2024, 12:45 AM IST

ಸಾರಾಂಶ

ಶಿಕಾರಿಪುರದಲ್ಲಿ ಸೋಮವಾರ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ರಾಘವೇಂದ್ರ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಸಮಸಮಾಜ ನಿರ್ಮಾಣಕ್ಕಾಗಿ ಕನಕದಾಸರ ಕೀರ್ತನೆಗಳು ಸದಾಕಾಲ ಪ್ರಸ್ತುತವಾಗಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.

ಸೋಮವಾರ ಪಟ್ಟಣದ ಕನಕ ಉದ್ಯಾನವನದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ, ತಾಲೂಕು ಕುರುಬ ಸಮಾಜದ ವತಿಯಿಂದ ನಡೆದ ಕನಕದಾಸರ 537ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುವ ಕನಕದಾಸರ ಕೀರ್ತನೆ ಎಂಥವರನ್ನು ವಿಮರ್ಶೆಗೆ ತಳ್ಳುತ್ತದೆ, ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಲ್ಲಿ ಗಣನಾಯಕರಾಗಿದ್ದ ಕನಕರು ದಾಸರಾಗಿ ಬದಲಾಗಿದ್ದು ರೋಚಕ ಸನ್ನಿವೇಶ. ಭಕ್ತಿಯಲ್ಲಿ ಉಡುಪಿಯ ಕೃಷ್ಣನನ್ನು ತಮ್ಮ ಕಡೆಗೆ ತಿರುಗಿಸಿದ ಮಹಾನ್ ದೈವ ಭಕ್ತರಾದ ಕನಕರು ಮಾನವ ಕುಲದ ದಾರ್ಶನಿಕರಾಗಿದ್ದಾರೆ ಎಂದು ಹೇಳಿದರು.

ಭದ್ರಕಾಡ ಮಾಜಿ ಅಧ್ಯಕ್ಷ ಮಹದೇವಪ್ಪ ಮಾತನಾಡಿ, ಕನಕರ ಕೀರ್ತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ನಾನು ಹೋದರೆ ಹೋದೆನು ಎನ್ನುವ ಅವರ ಅಮರತ್ವದ ನುಡಿಯು ಸದಾಕಾಲ ಪ್ರಸ್ತುತವಾಗಿದೆ ಕನಕದಾಸರ ಸಂದೇಶ ತತ್ವವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸಂತೃಪ್ತಿಯನ್ನು ಹೊಂದಬೇಕು ಎಂದರು.

ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ಶೈಲಾ ಮಡ್ಡಿ, ಉಪಾಧ್ಯಕ್ಷೆ ರೂಪ ಮಂಜುನಾಥ್, ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ಕನಕ ಮೂರ್ತಿ ಹಾಗೂ ಮಂಟಪದ ದಾನಿ ನಾಗರತ್ನಮ್ಮ ಕೆ.ಹಾಲಪ್ಪ, ಗ್ಯಾರಂಟಿ ಯೋಜನೆ ಸಮತಿ ಅಧ್ಯಕ್ಷ ನಾಗರಾಜ ಗೌಡ, ತಾಲೂಕು ಕುರುಬ ಸಮಾಜದ ಉಪಾಧ್ಯಕ್ಷ ಗೋಣಿ ಮಾಲತೇಶ್, ಪುರಸಭಾ ಮಾಜಿ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ಭಂಡಾರಿ ಮಾಲತೇಶ್, ಮಹೇಶ್ ಹುಲ್ಮಾರ್‌ ಇದ್ದರು.

ಈ ವೇಳೆ ಕನಕ ಮೂರ್ತಿ ಹಾಗೂ ಕನಕ ಮಂಟಪದ ದಾನಿ ಹಾಲಪ್ಪ ಹಾಗೂ ರತ್ನಮ್ಮ ಅವರನ್ನು ಸನ್ಮಾನಿಸಲಾಯಿತು.