ಕನಕದಾಸರ ಚಿಂತನೆ ಕೈದೀವಿಗೆ: ಡಾ. ಸುಧಾಕರ ದೇವಾಡಿಗ

| Published : Sep 04 2025, 01:01 AM IST

ಸಾರಾಂಶ

ಮಾಹೆಯ ಕನಕದಾಸ ಅಧ್ಯಯನ ಸಂಶೋಧನ ಪೀಠ ಮತ್ತು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರಗಳ ವತಿಯಿಂದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ವಿಸ್ತರಣಾ ಉಪನ್ಯಾಸ ಮಾಲಿಕೆಯಲ್ಲಿ ‘ಕನಕದಾಸರು - ವರ್ತಮಾನದ ಮುಖಾಮುಖಿ’ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಕನಕದಾಸರಲ್ಲಿ ನಾವು ಕಾಣುವ ಅತ್ಯಂತ ಉತ್ತಮ ಗುಣವೆಂದರೆ ಸಮಾಜಕ್ಕೆ ಹಂಚುವ ಗುಣ. ಅವರು ಎಲ್ಲರಲ್ಲೂ ದೇವರನ್ನು ಕಂಡವರು. ಈ ಎಲ್ಲರಲ್ಲೂ ದೇವರನ್ನು ಕಂಡಾಗ ಮತೀಯ ಸಾಮರಸ್ಯ ನೆಲೆಗೊಳ್ಳುತ್ತದೆ. ವ್ಯಕ್ತಿ ವ್ಯಕ್ತಿಯ ನಡುವೆ ಇರುವ ತಾರತಮ್ಯ ಮರೆಯಾಗುತ್ತದೆ. ಒಟ್ಟಿನಲ್ಲಿ ಕನಕ ಚಿಂತನೆ ನಮಗೆ ಕೈದೀವಿಗೆಯಾಗಿದೆ ಎಂದು ಕೋಟೇಶ್ವರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಸುಧಾಕರ ದೇವಾಡಿಗ ಬಿ. ಹೇಳಿದರು.

ಅವರು ಮಾಹೆಯ ಕನಕದಾಸ ಅಧ್ಯಯನ ಸಂಶೋಧನ ಪೀಠ ಮತ್ತು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರಗಳ ವತಿಯಿಂದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ವಿಸ್ತರಣಾ ಉಪನ್ಯಾಸ ಮಾಲಿಕೆಯಲ್ಲಿ ‘ಕನಕದಾಸರು - ವರ್ತಮಾನದ ಮುಖಾಮುಖಿ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಕನಕದಾಸರ ಬೋಧನೆಯಲ್ಲಿ ನಾವು ಕಾಣುವ ಇತರ ಪ್ರಮುಖ ಅಂಶಗಳೆಂದರೆ ಸಮಾನತೆಯ ಪ್ರಜ್ಞೆ, ಜಾತಿಜಾತಿಗಳ ನಡುವೆ ಭೇದಭಾವ ಇಲ್ಲವೆಂಬ ಚಿಂತನೆ, ಯುದ್ಧ ವಿರೋಧಿ ನೆಲೆ ಇತ್ಯಾದಿ. ನಮಗೆ ಇಂದು ಕನಕದಾಸರ ಚಿಂತನೆ ಪ್ರಸ್ತುತ ಯಾಕೆಂದರೆ ಅವರ ಬಗ್ಗೆ ನಾವು ಗಮನ ಹರಿಸಿದರೆ ಮನುಷ್ಯತ್ವದ ಕಡೆಗೆ ಸಾಗಬಹುದು ಎಂದರು.ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಆಶಯ ನುಡಿಗಳನ್ನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ, ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ರೇಶ್ಮಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ಪ್ರಾಥ ಆರ್. ಶೆಟ್ಟಿ ವಂದಿಸಿದರು. ಕಾರ್ತಿಕ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ರೇಯಾ ಖಾರ್ವಿ ಕಂಚುಗೋಡು ಕನಕ ಕೀರ್ತನೆ ಹಾಡಿದರು.