ವಿಶ್ವಮಾನವ ಸಂದೇಶ ಸಾರಿದ ಕನಕದಾಸರು: ಟೆಂಗಿನಕಾಯಿ

| Published : Nov 09 2025, 02:45 AM IST

ಸಾರಾಂಶ

ನಗರ ಸೇರಿದಂತೆ ತಾಲೂಕಿನಾದ್ಯಂತ ತಾಲೂಕು ಆಡಳಿತ, ಶಾಲಾ, ಕಾಲೇಜು, ವಿವಿಧ ಪಕ್ಷಗಳ ಕಚೇರಿ ಸೇರಿದಂತೆ ಸಂಘ-ಸಂಸ್ಥೆಗಳಲ್ಲಿ ಶನಿವಾರ ಸಂತ ಕನಕದಾಸರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು

ಹುಬ್ಬಳ್ಳಿ: ನಗರ ಸೇರಿದಂತೆ ತಾಲೂಕಿನಾದ್ಯಂತ ತಾಲೂಕು ಆಡಳಿತ, ಶಾಲಾ, ಕಾಲೇಜು, ವಿವಿಧ ಪಕ್ಷಗಳ ಕಚೇರಿ ಸೇರಿದಂತೆ ಸಂಘ-ಸಂಸ್ಥೆಗಳಲ್ಲಿ ಶನಿವಾರ ಸಂತ ಕನಕದಾಸರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.ನಗರದ ತಾಪಂ ಸಭಾ ಭವನದಲ್ಲಿ ತಾಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ದಾಸಶ್ರೇಷ್ಠ ಶ್ರೀ ಕನಕದಾಸ ಜಯಂತಿ ಆಚರಿಸಲಾಯಿತು. ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕನಕದಾಸರು ವಿಶ್ವಮಾನವ ಸಂದೇಶ ಸಾರಿದವರು. ಇಂದಿನ ಯುವಪೀಳಿಗೆಗೆ ಭಕ್ತ ಕನಕದಾಸರ ಆದರ್ಶ, ವ್ಯಕ್ತಿತ್ವ ತಿಳಿಸುವ ಕಾರ್ಯವಾಗಬೇಕಿದೆ ಎಂದು

ಶರಣು ಅಣ್ಣಿಗೇರಿ ಉಪನ್ಯಾಸ ನೀಡಿದರು. ಶಾಸಕ ಎನ್.ಎಚ್. ಕೋನರಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದರು. ಶಹರ ತಹಸೀಲ್ದಾರ್ ಮಹೇಶ ಗಸ್ತೆ, ಗ್ರಾಮೀಣ ತಹಸೀಲ್ದಾರ್ ಜೆ.ಬಿ. ಮಜ್ಜಗಿ, ತಾಪಂ ಇಒ ಆರ್.ವೈ. ಹೊಸಮನಿ, ನಾಗರತ್ನಾ ಕ್ಯಾಸನೂರ, ಅಬ್ದುಲ್ ಬೋಲಾಬಾಯಿ, ಎಚ್.ಎಂ. ಪಡ್ನೇಶಿ, ಉಮೇಶ ಬಮ್ಮಕ್ಕನವರ್ ಸೇರಿ ಹಲವರಿದ್ದರು.

ಡಾ. ಆರ್‌.ಬಿ. ಪಾಟೀಲ ಕಾಲೇಜು

ಇಲ್ಲಿಯ ಡಾ. ಆರ್.ಬಿ. ಪಾಟೀಲ ಮಹೇಶ ಪಪೂ ಕಾಲೇಜಿನಲ್ಲಿ ಶನಿವಾರ 538ನೇ ಕನಕದಾಸ ಜಯಂತ್ಯುತ್ಸವ ಆಚರಿಸಲಾಯಿತು. ಪ್ರಾಂಶುಪಾಲ ರಾಮ್‌ ಮೋಹನ್ ಎಚ್.ಕೆ. ಮಾತನಾಡಿ, ದಾಸ ಶ್ರೇಷ್ಠ ಕನಕದಾಸರ ಕೀರ್ತನೆ ಅತ್ಯಂತ ಮಹತ್ವ ಹೊಂದಿವೆ. ದಾಸರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಉಪನ್ಯಾಸಕ ದ್ಯಾಮಣ್ಣ ಚೌಡಾಳ, ಕನಕದಾಸರ ಬಗ್ಗೆ ಮಾತನಾಡಿದರು. ಉಪ ಪ್ರಾಚಾರ್ಯ ರಮೇಶ ಹೊಂಬಾಳಿ, ಉಪನ್ಯಾಸಕ ಮಹೇಶ ಮಾಳಿ ಸೇರಿ ಹಲವರಿದ್ದರು.

ಬಿಜೆಪಿ ಕಚೇರಿ

ಇಲ್ಲಿನ ಅರವಿಂದ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಹು-ಧಾ ಮಹಾನಗರ ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾ ವತಿಯಿಂದ ಸಂತ ಕನಕದಾಸರ ಜಯಂತಿ ಆಚರಿಸಲಾಯಿತು. ಈ ವೇಳೆ ಒಬಿಸಿ ಜಿಲ್ಲಾಧ್ಯಕ್ಷ ಪ್ರವೀಣ ಹರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ನಾಡಜೋಶಿ, ಮಂಡಲ ಅಧ್ಯಕ್ಷ ರಾಜು ಕಾಳೆ, ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ರವೀಂದ್ರ ಯಲ್ಕಾನ, ಪಾಲಿಕೆ ಸದಸ್ಯ ಬೀರಪ್ಪ ಖಂಡೆಕಾರ, ಪ್ರವೀಣ ಪವಾರ, ಮಂಜುನಾಥ ಚಿತ್ತಗಿಂಜಲ, ರಾಜು ಜರತಾಘರ ಸೇರಿ ಹಲವರಿದ್ದರು.

ಚುಟುಕು ಸಾಹಿತ್ಯ ಪರಿಷತ್‌

ಕನಕದಾಸರನ್ನು ಜಾತಿಯ ಪರೀದಿಯಲ್ಲಿ ಎಂದಿಗೂ ಗುರುತಿಸಬಾರದು. ಇದು ಅವರಿಗೆ ಮಾಡುವ ಅಪಚಾರ ಎಂದು ಚಿಂತಕ ಕೃಷ್ಣಮೂರ್ತಿ ಕುಲಕರ್ಣಿ ಹೇಳಿದರು. ಉಣಕಲ್ಲಿನ ಪುಸ್ತಕ ದಾಸೋಹದಲ್ಲಿ ಶನಿವಾರ ಸಂಜೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಏರ್ಪಡಿಸಿದ್ದ "ಕನಕ ಸ್ಮರಣೆ " ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು ಅಧ್ಯಕ್ಷತೆ ವಹಿಸಿದ್ದರು. ಅಮರೇಶ ಕಡೇಮನಿ, ಚಂದ್ರು ಪೂಜಾರ ಮಾತನಾಡಿದರು. ಸಿದ್ದಲಿಂಗೇಶ ಸ್ವಾಗತಿಸಿದರು. ವಿ.ಎಸ್. ರಮೇಶ ವಂದಿಸಿದರು.

ಕೆಎಸ್‌ಎಸ್‌

ಕನಕದಾಸರು ಕೇವಲ ಒಬ್ಬ ಕವಿ ಅಥವಾ ಸಂತರು ಮಾತ್ರವಲ್ಲ ಅವರು ಜಾತ್ಯತೀತತೆ ಮತ್ತು ಭಕ್ತಿಯ ಪ್ರತೀಕ ಎಂದು ಸಾರಿದ ಸಂತರು ಎಂದು ಅಖಿಲ ಭಾರತಿ ಸಾಹಿತ್ಯ ಪರಿಷತ್ ನ ಕಾರ್ಯದರ್ಶಿ ಜಯಮೇಜಯ ಉಮರ್ಚಿ ಹೇಳಿದರು. ನಗರದ ಕನಕದಾಸ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ಸಭಾಂಗಣದಲ್ಲಿ ಸಮೂಹ ಮಹಾವಿದ್ಯಾಲಯಗಳ ವತಿಯಿಂದ ನಡೆದ ಭಕ್ತ ಕನಕದಾಸರ ಜಯಂತಿಯಲ್ಲಿ ಮಾತನಾಡಿದರು. ಡಾ. ಎಚ್.ವಿ. ಬೆಳಗಲಿ, ಸಂದೀಪ ಬೂದಿಹಾಳ ಮಾತನಾಡಿದರು. ಡಾ. ಎನ್.ಡಿ.ಶೇಖ್‌, ಡಾ. ಬಿ.ಜಿ. ಮಡ್ಲಿ, ಡಾ. ಶರಣು ಅಣ್ಣಿಗೇರಿ, ಪ್ರೊ. ಬೀರೇಶ ತಿರಕಪ್ಪನವರ ಸೇರಿದಂತೆ ಸಮೂಹ ಮಹಾವಿದ್ಯಾಲಯಗಳ ಉಪನ್ಯಾಸಕರು, ಸಿಬ್ಬಂದಿಗಳಿದ್ದರು.

ಭಗಿನಿ ನಿವೇದಿತಾ ವಿದ್ಯಾಲಯ

ನವನಗರದ ಭಗಿನಿ ನಿವೇದಿತಾ ವಿದ್ಯಾಲಯದಲ್ಲಿ ಕನಕದಾಸ ಜಯಂತಿ ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಕರವೀರಪ್ಪ ಮಡಿವಾಳ ಅವರು ಕನಕದಾಸರ ಜೀವನ ಮತ್ತು ಆದರ್ಶಗಳ ಕುರಿತು ಮಾತನಾಡಿದರು. ಇದೇ ವೇಳೆ ಕ್ರೀಡಾಕೂಟ ಹಾಗೂ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾಜು ಹೈಬತ್ತಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಕಲಾವತಿ ಜೀರಿಗಿವಾಡ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.