ಸಾರಾಂಶ
ಈ ಸಂದರ್ಭ ದಾಸ ಸಂಕೀರ್ತನಕಾರ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ರಾಮಕೃಷ್ಣ ಕಾಟುಕುಕ್ಕೆ ಅವರಿಗೆ ಕಲ್ಕೂರ ಪ್ರತಿಷ್ಠಾನದಿಂದ ‘ಕನಕದಾಸ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಸಮಾಜದ ಕಡೆಗೆ ಕೃಷ್ಣನನ್ನು ತಿರುಗಿಸಿ ಶಕ್ತಿಯೂ ಕನಕದಾಸರದ್ದು. ಕನಕದಾಸರ ಸಾಹಿತ್ಯ ಅದ್ಭುತವಾಗಿದ್ದು, ಸರಳವಾಗಿದೆ ಎಂದು ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.ಮಂಗಳೂರಿನ ಕದ್ರಿ ಕಂಬಳ ರಸ್ತೆಯ ಮಂಜು ಪ್ರಾಸಾದದ ವಾದಿರಾಜ ಮಂಟಪದ ವಿಶ್ವೇಶತೀರ್ಥ ವೇದಿಕೆಯಲ್ಲಿ ಮಂಗಳವಾರ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ದಾಸವರೇಣ್ಯ, ಕವಿ, ಸಂತಶ್ರೇಷ್ಠ ಕನಕದಾಸರ ಜಯಂತ್ಯುತ್ಸವದಲ್ಲಿ ಅವರು ಆಶೀರ್ವಚನ ನೀಡಿದರು. ಕನಕದಾಸರು ದಾರ್ಶನಿಕ ಸಂತ, ಪ್ರಭಾವಶಾಲಿಗಳು. ಅವರ ಅಧ್ಯಯನ, ಜ್ಞಾನವು ದೇವ ರಹಸ್ಯ. ಅವರ ಮಾತಿನಲ್ಲಿ ವೇದಾರ್ಥ, ಪುರಾಣಾರ್ಥ, ಅನುಭವಕ್ಕೆ ಮುಟ್ಟುವ ಚಿಂತನೆಗಳಿವೆ. ಒಬ್ಬರನ್ನು ಪ್ರಭಾವಗೊಳಿಸುವ ಶಕ್ತಿ ಕನಕದಾಸರಲ್ಲಿತ್ತು ಎಂದರು.
ಕನಕದಾಸರ ಜೀವನ ದರ್ಶನದ ಕುರಿತು ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಉಪನ್ಯಾಸ ನೀಡಿ, ನಮ್ಮ ಬದುಕಿನ ದಾರಿಯಲ್ಲಿ ಕನಕದಾಸರಂತಹ ಕವಿಗಳನ್ನು ಸಹಾಯಾರ್ಥಿಕರಾಗಿ ಈ ಕಾಲಕ್ಕೆ ಪ್ರಸ್ತುತಗೊಳಿಸಬೇಕು. ಕನಕದಾಸರನ್ನು ಅಧ್ಯಯನ ಮಾಡುವ ಸುಮಾರು ದಾರಿಗಳು ನಮ್ಮ ಎದುರಿಗಿದೆ. ಜಾನಪದ ಪರಂಪರೆಯಲ್ಲಿ ಕನಕದಾಸರ ಬಗ್ಗೆ ಅನೇಕ ಪವಾಡಗಳಾಗಿವೆ ಎಂದರು. ಈ ಸಂದರ್ಭ ದಾಸ ಸಂಕೀರ್ತನಕಾರ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ರಾಮಕೃಷ್ಣ ಕಾಟುಕುಕ್ಕೆ ಅವರಿಗೆ ಕಲ್ಕೂರ ಪ್ರತಿಷ್ಠಾನದಿಂದ ‘ಕನಕದಾಸ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.ವಿವಿಧ ಭಜನ ತಂಡಗಳು ಕನಕದಾಸ ಗೀತ ಗಾಯನ ನಡೆಸಿಕೊಟ್ಟರು. ಶ್ರೀಗಳಿಂದ ಗೋಪೂಜೆ ನೆರವೇರಿತು.ದಯಾನಂದ ಕಟೀಲ್ ನಿರೂಪಿಸಿದರು.