ಕನಕದಾಸರ ಮೌಲ್ಯ ಅನುಕರಣೀಯ: ಪ್ರೊ.ಶಿವರಾಮ ಶೆಟ್ಟಿ

| Published : Nov 19 2024, 12:51 AM IST

ಸಾರಾಂಶ

ಹಂಪನಕಟ್ಟೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಸೋಮವಾರ ದ.ಕ. ಜಿಲ್ಲಾಡಳಿತ ವತಿಯಿಂದ ಕನಕದಾಸರ ಜಯಂತಿ ಕಾರ್ಯಕ್ರಮ ನಡೆಯಿತು.

ಮಂಗಳೂರಿನಲ್ಲಿ ಜಿಲ್ಲಾಡಳಿತ ವತಿಯಿಂದ ಕನಕದಾಸರ ಜಯಂತಿ, ಜನಪ್ರತಿನಿಧಿಗಳ ಗೈರು- ವಿಷಾದ

ಕನ್ನಡಪ್ರಭ ವಾರ್ತೆ ಮಂಗಳೂರು

ಕನಕದಾಸರಂತಹ ಜನರು ಸಮಾಜದಲ್ಲಿನ ಬದಲಾವಣೆಗಳಿಗೆ, ವಿಶೇಷವಾಗಿ ಬಡವರು ಮತ್ತು ದೀನ-ದಲಿತರ ಆಪತ್ತುಗಳಿಗೆ ಸ್ಪಂದಿಸಿದವರು. ಅವರ ಮೌಲ್ಯಗಳನ್ನು ಅನುಕರಿಸಬೇಕು ಎಂದು ಮಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ. ಶಿವರಾಮ ಶೆಟ್ಟಿ ಹೇಳಿದ್ದಾರೆ.

ನಗರದ ಹಂಪನಕಟ್ಟೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಸೋಮವಾರ ದ.ಕ. ಜಿಲ್ಲಾಡಳಿತ ವತಿಯಿಂದ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಕನಕದಾಸರು ದಂಡನಾಯಕ ಆಗಿದ್ದರು. ಅವರ ಹೆಂಡತಿ ಮತ್ತು ಮಗು ತೀರಿಕೊಂಡ ನಂತರ, ಅಧಿಕಾರವನ್ನು ತ್ಯಜಿಸಿ ಶ್ರೀಕೃಷ್ಣನನ್ನು ಸ್ತುತಿಸುತ್ತಾ, ಸಾಮಾಜಿಕ ಸಂದೇಶಗಳನ್ನು ಹರಡುತ್ತಾ ದಾಸರಾದರು. ಅವರ ಬೋಧನೆಗಳು ಇಂದಿಗೂ ಪ್ರಸ್ತುತ ಎಂದರು.

ಮಹಾನ್ ವ್ಯಕ್ತಿಗಳ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಕೇವಲ ಔಪಚಾರಿಕತೆಗಾಗಿ ಆಯೋಜಿಸಬಾರದು. ಸರ್ಕಾರ ಹಮ್ಮಿಕೊಂಡಿರುವ ಕನಕದಾಸರ ಜಯಂತಿಗೆ ಸಂಸದರು, ಶಾಸಕರು, ಹಿರಿಯ ಅಧಿಕಾರಿಗಳು ಬಾರದೆ ಇರುವುದು ವಿಷಾದನೀಯ. ಮಹಾನ್‌ ವ್ಯಕ್ತಿಗಳ ಜಯಂತಿಗಳಿಗೆ ತನ್ನದೇ ಆದ ಪಾವಿತ್ರ್ಯತೆ ಇದೆ. ಕನಕ ​​ಜಯಂತಿಗೆ ಗಣ್ಯರ ಹಾಜರಾತಿ ಇಲ್ಲದಿರುವುದು ಕನಕದಾಸರಿಗೆ ಮಾಡಿದ ಅವಮಾನ ಎಂದು ಹೇಳಿದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ, ಹಾಲುಮತ ಕುರುಬರ ಸಂಘದ ಅಧ್ಯಕ್ಷ ಚಂದ್ರಪ್ಪ ಬಿ.ಕೆ ಇತರರು ಇದ್ದರು.