ಸಾರಾಂಶ
ಕನಕಗಿರಿ:
ಇಲ್ಲಿನ ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಶ್ರೀಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರೆ ನಿಮಿತ್ತ ಬುಧವಾರ ರಾತ್ರಿ ಅಂಕುರಾರ್ಪಣದೊಂದಿಗೆ ಜಾತ್ರಾ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು.ಜಾತ್ರೆಯಲ್ಲಿ ಕನಕಾಚಲಪತಿ ದೇವರ ಕಲ್ಯಾಣೋತ್ಸವವು ನಡೆಯುವುದರಿಂದ ರಾಜ ಪುರೋಹಿತರ ಮನೆಯಿಂದ ಸಂಪ್ರದಾಯದಂತೆ ಬಾಜಾ ಭಜಂತ್ರಿಗಳೊಂದಿಗೆ ಪಲ್ಲಕ್ಕಿಯಲ್ಲಿ ತಾಳೆಗರಿಯಲ್ಲಿನ ಆಮಂತ್ರಣ ಪತ್ರಿಕೆ(ವಾಲಿ)ಯನ್ನು ತಂದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.
ನಂತರ ಧ್ವಜಸ್ತಂಭದ ಬಳಿಯಲ್ಲಿ ಅರ್ಚಕರು ಕನಕಾಚಲಪತಿ ಜಾತ್ರೆಯಲ್ಲಿ ನಡೆಯುವ ಕಾರ್ಯಕ್ರಮಗಳು ಹಾಗೂ ಕಲ್ಯಾಣೋತ್ಸವಕ್ಕೆ ಭಕ್ತರಿಗೆ ವಾಲಿಯನ್ನು ನೀಡಿ ಆಹ್ವಾನ ನೀಡಿದರು. ಭಕ್ತರು ಪೂಜೆ ಸಲ್ಲಿಸಲು ಆಹ್ವಾನ ಪತ್ರಿಕೆಯನ್ನು ಮನೆಗೆ ತೆಗೆದುಕೊಂಡು ಹೋದರು.ಅರ್ಚಕರಾದ ಮಧುರಕವಿ, ವಿ. ಸಿಂಗರಾಚಾರ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಯಾಳ, ಕಾರ್ಯದರ್ಶಿ ಸಿದ್ಧಲಿಂಗಯ್ಯಸ್ವಾಮಿ, ಭಕ್ತರಾದ ಪ್ರಾಣೇಶ ಆಚಾರ್ ಕಳ್ಳಿ, ಶ್ರೀನಿವಾಸರೆಡ್ಡಿ ಓಣಿಮನಿ, ಪೃಥ್ವಿರಾಜ್, ಗುಂಡಪ್ಪ ಚಿತ್ರಗಾರ, ನಾಗರಾಜ ಚಿತ್ರಗಾರ, ಪೃಥ್ವಿ ಮ್ಯಾಗೇರಿ, ಅನಂತಕೃಷ್ಣಚಾರ, ವಿಜಯಪ್ರಸಾದ ಸೇರಿದಂತೆ ಇತರರಿದ್ದರು.
₹ 2 ಲಕ್ಷ ಕಾಣಿಕೆ ಸಂಗ್ರಹ:ಕನಕಾಚಲ ದೇವಸ್ಥಾನದ ಕಾಣಿಕೆ ಪೆಟ್ಟಿಗೆಗಳನ್ನು ಗುರುವಾರ ಎಣಿಕೆ ಮಾಡಲಾಗಿದ್ದು, ೪೦ ದಿನದಲ್ಲಿ ₹ ೨,೦೯,೨೯೫ ಕಾಣಿಕೆ ಸಂಗ್ರಹವಾಗಿದೆ. ಶಿರಸ್ತೇದಾರ ಅನಿತ ಇಂಡಿ ಸಮ್ಮುಖದಲ್ಲಿ ಹಣ ಎಣಿಕೆ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಮಾ. ೨೧ರಂದು ಜಾತ್ರೆ ನಡೆಯುವ ಹಿನ್ನೆಲೆಯಲ್ಲಿ ಕಾಣಿಕೆ ಪೆಟ್ಟಿಗೆಗಳ ಹಣ ಎಣಿಕೆ ಮಾಡಲಾಗಿದೆ. ಸಂಗ್ರಹವಾದ ಹಣವನ್ನು ಕರ್ನಾಟಕ ಬ್ಯಾಂಕಿನ ದೇವಸ್ಥಾನದ ಖಾತೆಗೆ ಜಮೆ ಮಾಡುವುದಾಗಿ ದೇವಸ್ಥಾನದ ಪ್ರಥಮ ದರ್ಜೆ ಸಹಾಯಕ ಸಿದ್ದಲಿಂಗ್ಯಸ್ವಾಮಿ ತಿಳಿಸಿದರು. ಈ ವೇಳೆ ಕಂದಾಯ ನಿರೀಕ್ಷಕ ಮಂಜುನಾಥ, ಗ್ರಾಮ ಆಡಳಿತಾಧಿಕಾರಿ ಅಮರ ತೆಗ್ಗಿನಮನಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಯಾಳ, ಪ್ರಮುಖರಾದ ಕೀರ್ತಿ ಸೋನಿ, ವೀರೇಶ ಕಡಿ, ಉಮೇಶ ಭೋವಿ ಇದ್ದರು.