ಸಾರಾಂಶ
ಎಂ. ಪ್ರಹ್ಲಾದ್
ಕನಕಗಿರಿ:ಪ್ರತಿ ವರ್ಷದಂತೆ ಕನಕಗಿರಿ ಉತ್ಸವದ ಬಗ್ಗೆ ಚರ್ಚಿಸಿ ದಿನಾಂಕ ನಿಗದಿಪಡಿಸುವ ಬದಲು ಪ್ರಸಕ್ತ ವರ್ಷದಿಂದಲೇ ಜಾತ್ರೆಯೊಂದಿಗೆ ಉತ್ಸವ ಆಚರಿಸಲು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮುಂದಾಗಿದ್ದರು. ಆದರೆ, ಸ್ಥಳೀಯರ ವಿರೋಧ ವ್ಯಕ್ತವಾದ ಹಿನ್ನೆಲೆ ಮುಂದಿನ ದಿನಗಳಲ್ಲಿಯೂ ಉತ್ಸವ ಆಚರಣೆ ನಡೆಯುವುದು ಅನುಮಾನ ಮೂಡಿಸಿದೆ.
೨೦೦೮ರ ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಯಂತೆ ಶಿವರಾಜ ತಂಗಡಗಿ ಸಚಿವರಾದ ಮೇಲೆ ಕನಕಗಿರಿಯ ಉತ್ಸವ ಆರಂಭಿಸಿ ಉತ್ಸವದ ರೂವಾರಿಯಾದರು. ಒಟ್ಟು ೪ ಉತ್ಸವ ಆಚರಿಸಿದ್ದ ಅವರು ಈ ಬಾರಿಯ ಉತ್ಸವಕ್ಕೆ ಉತ್ಸುಕರಾಗಿ ಜಾತ್ರೆಯೊಂದಿಗೆ ಆಚರಿಸಲು ಹೆಜ್ಜೆ ಇಟ್ಟಿದ್ದರು. ಇತ್ತೀಚಿನ ವರ್ಷಗಳಲ್ಲಿ ಜನರಿಲ್ಲದೇ ಉತ್ಸವಗಳು ರದ್ದಾಗುತ್ತಿರುವ ಕುರಿತು ಈ ಹಿಂದಿನ ಸಭೆಯಲ್ಲಿ ತಿಳಿಸಿದ್ದರು. ಅಲ್ಲದೇ ಜಾತ್ರೆಗೆ ಬರುವವರಿಗೆ ಉತ್ಸವದ ಸವಿ ಉಣಬಡಿಸಲು ಮುಂದಾಗಿದ್ದರು.ಜಾತ್ರೆಯ ಪೂರ್ವಭಾವಿ ಸಭೆಯಲ್ಲಿಯೂ ಚರ್ಚೆಯಾಗಿ ಪರ-ವಿರೋಧದ ನಡುವೆ ಮಾ.೨೦, ೨೧ಕ್ಕೆ ಉತ್ಸವದ ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ, ಸಚಿವರು ಬೆಂಗಳೂರಿನಲ್ಲಿರುವಾಗಲೇ ಸ್ಥಳೀಯವಾಗಿ ಕೆಲವರು ಜಾತ್ರೆಯೊಂದಿಗೆ ಉತ್ಸವಕ್ಕೆ ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ, ಬಂದ್ ಮಾಡುವ ನಿಟ್ಟಿನಲ್ಲಿ ಮನವಿ ಸಲ್ಲಿಸಿದರು. ಇದರಿಂದ ಸಿಎಂ ಸಿದ್ದರಾಮಯ್ಯನವರು ಬಜೆಟ್ ಮಂಡಿಸುತ್ತಿರುವ ನಡುವೆಯೂ ಉತ್ಸವದ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಲು ಕರೆದಿದ್ದ ಸಭೆಯಲ್ಲಿ ಸಚಿವರು ಏಕಾಏಕಿ ಉತ್ಸವವನ್ನು ಕಾಲ ಕೂಡಿ ಬಂದಾಗ ಆಚರಿಸೋಣ ಎಂದಿದ್ದು, ಜಾತ್ರೆಯೊಂದಿಗೆ ಉತ್ಸವ ಆಚರಣೆಯ ಉದ್ದೇಶ ತಿಳಿಸಿದರಲ್ಲದೇ, ಸಾಮರಸ್ಯ ಹದಗೆಡಿಸಿ ಉತ್ಸವ ಆಚರಿಸಲು ಇಷ್ಟವಿಲ್ಲ. ಜಾತ್ರೆಯನ್ನು ಸಡಗರದಿಂದ ಆಚರಿಸೋಣ ಎಂದಿರುವುದು ಒಂದೆಡೆಯಾದರೆ, ಎಲ್ಲರಿಗೂ ಕನಕಾಚಲಪತಿ ಯಾವಾಗ ಒಳ್ಳೆ ಬುದ್ಧಿ ಕೊಡುತ್ತಾನೋ, ಒಳ್ಳೆಯ ಬೆಳವಣಿಗೆಯಾಗುತ್ತದೆಯೋ ಆಗ ನೋಡೋಣ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಸಚಿವರು ಬೇಸರದ ಮಾತುಗಳನ್ನಾಡಿದ್ದಾರೆ. ಪ್ರಸಕ್ತ ವರ್ಷವಂತೂ ಉತ್ಸವ ಆಚರಣೆ ಅನುಮಾನ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಿದ್ದಾರೆ.
ಈ ನಡುವೆ ಮಾಧ್ಯಮದವರು ಸಚಿವ ತಂಗಡಗಿ ಅವರ ಬಳಿ, ಬಜೆಟ್‌ನಲ್ಲಿ ಕನಕಗಿರಿಗೆ ಏನು ಕೊಡುಗೆ ನೀಡುತ್ತೀರಿ ಎಂಬ ಪ್ರಶ್ನಿಸಿದಾಗ, ಶಾಶ್ವತವಾದ ಕೊಡುಗೆ ಕೊಟ್ಟರೂ ಪಡೆಯಲು ಸ್ಥಳೀಯರು ಸಿದ್ಧರಿಲ್ಲ, ನೋಡೋಣ ಎಂದರು.ಉತ್ಸವ ನಡೆದಿದ್ದರೆ ಅಲ್ಪಸ್ವಲ್ಪ ಅಭಿವೃದ್ಧಿ ಕೆಲಸಗಳಾಗುತ್ತಿದ್ದವು. ಹಲವರಿಗೆ ಉದ್ಯೋಗ ದೊರೆಯುತ್ತಿತ್ತು. ವ್ಯಾಪಾರಿಗಳಿಗೆ ವಹಿವಾಟು ನಡೆಯುತ್ತಿತ್ತು. ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶವೂ ಸ್ವಚ್ಛವಾಗುತ್ತಿತ್ತು.
ಸ್ಥಳೀಯ ಕಲಾವಿದರಿಗೆ ನಿರಾಶೆ:ಉತ್ಸವ ನಡೆದರೆ ಸ್ಥಳೀಯ ಕಲಾವಿದರಿಗೆ ಕಾರ್ಯಕ್ರಮ ನೀಡಲು ಅವಕಾಶ ದೊರೆಯುತ್ತದೆ ಎಂದು ಹತ್ತಾರು ಕಲಾವಿದರು ಸಂಬಂಧಿಸಿದ ಇಲಾಖೆಗೆ ಮನವಿ ಸಲ್ಲಿಸಲು ಮುಂದಾಗಿದ್ದರು. ಅವಕಾಶ ಪಡೆಯಲು ರಾಜಕೀಯ ನಾಯಕರ ದುಂಬಾಲು ಬಿದ್ದಿದ್ದರು. ಆದರೆ, ಸಚಿವರು ಮುಂದೆ ಉತ್ಸವ ಆಚರಿಸುವ ಬಗ್ಗೆ ನೋಡೋಣ ಎಂದು ಹೇಳಿರುವುದರಿಂದ ಕಲಾವಿದರಿಗೆ ನಿರಾಶೆ ಮೂಡಿಸಿದೆ.