ಸಾರಾಂಶ
ಕನಕಗಿರಿ: ೭೫ನೇ ಗಣರಾಜ್ಯೋತ್ಸವ ಅಂಗವಾಗಿ ದೆಹಲಿಯ ಕರ್ತವ್ಯಪಥದಲ್ಲಿ ನಡೆದ ಪರೇಡ್‌ನಲ್ಲಿ ಮೊದಲ ಬಾರಿಗೆ ತಾಲೂಕಿನ ಲಕ್ಷ್ಮೀ ಪಚ್ಚೇರ ಅವರ ತಂಡದಿಂದ ನಡೆದ ಚಂದ್ರಯಾನ-೩ ಬೈಕ್ ಸಾಹಸ ಪ್ರದರ್ಶನ ಯಶಸ್ವಿ ಕಂಡಿತು.ಡೇರ್ ಡೆವಿಲ್ಸ್ ತಂಡದಲ್ಲಿದ್ದ ಶಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಲಕ್ಷ್ಮಿ ಹಾಗೂ ಅವರ ಸಂಗಡಿಗರಿಂದ ನಡೆದ ಚಂದ್ರಯಾನ-೩ ಹೆಸರಿನ ಬೈಕ್ ಸಾಹಸ ಪ್ರದರ್ಶನ ನೆರದಿದ್ದ ಜನರ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆಯಿತು.ಬೈಕ್ ಪ್ರದರ್ಶನ ಆರಂಭವಾಗುತ್ತಿದ್ದಂತೆ ಕರ್ತವ್ಯಪಥದ ಅಂಚಿನಲ್ಲಿದ್ದ ಜನರು ಭಾರತ ಮಾತಾಕಿ ಜೈ, ವಂದೇ ಮಾತರಂ ಘೋಷಣೆ ಕೂಗಿದರಲ್ಲದೇ ಯೋಧೆಯರ ಸಾಹಸ ಪ್ರದರ್ಶನಕ್ಕೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.ಇನ್ನು ಕರ್ನಾಟಕದ ತರಬೇತುದಾರರಾದ ಹನುಮಂತರೆಡ್ಡಿ, ಶಾದಿಕ್ ಪಾಷ, ಕಮಾಂಡರ್‌ಗಳಾದ ಕಿಶನಲಾಲ್, ಜ್ಯೋತಿ ಯಾದವ, ಇನ್‌ಸ್ಪೆಕ್ಟರ್ ಶಹನಾಜ್ ಮಾರ್ಗದರ್ಶನದಿಂದ ಬೈಕ್ ಸಾಹಸ ಪ್ರದರ್ಶನ ಯಶಸ್ವಿಯಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಪ್ರಧಾನಿ, ರಾಷ್ಟ್ರಪತಿ, ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಫ್ರಾ ಅಧ್ಯಕ್ಷ ಮಾರ್ಕೊನ್ ಗ್ರೀಟ್ ಸೇರಿದಂತೆ ಕೇಂದ್ರ ಸರ್ಕಾರದ ಸಚಿವರಾದ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ಸೇರಿದಂತೆ ನೆರೆದಿದ್ದ ಜನರು ನಮ್ಮ ಪ್ರದರ್ಶನ ವೀಕ್ಷಿಸಿ ಚಪ್ಪಾಳೆ ತಟ್ಟಿ ಅಭಿನಂದಿಸಿರುವುದಾಗಿ ಯೋಧೆ ಲಕ್ಷ್ಮೀ ಪಚ್ಚೇರ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.