ಕನಕಪುರ ಮಾಡಲ್ ಚನ್ನಪಟ್ಟಣಕ್ಕೆ ಬೇಕಿಲ್ಲ: ಯೋಗೇಶ್ವರ್

| Published : Jun 21 2024, 01:05 AM IST

ಕನಕಪುರ ಮಾಡಲ್ ಚನ್ನಪಟ್ಟಣಕ್ಕೆ ಬೇಕಿಲ್ಲ: ಯೋಗೇಶ್ವರ್
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಕನಕಪುರ ಮಾಡಲ್ ಅನ್ನು ಚನ್ನಪಟ್ಟಣದಲ್ಲಿ ತರುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಜನರನ್ನು ಹೆದರಿಸುವ ತಂತ್ರವೇ ಕನಕಪುರ ಮಾಡಲ್ ಆಗಿದ್ದು, ಅದನ್ನು ಚನ್ನಪಟ್ಟಣಕ್ಕೆ ತರುವ ಅಗತ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿರುಗೇಟು ನೀಡಿದರು.

ರಾಮನಗರ: ಕನಕಪುರ ಮಾಡಲ್ ಅನ್ನು ಚನ್ನಪಟ್ಟಣದಲ್ಲಿ ತರುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಜನರನ್ನು ಹೆದರಿಸುವ ತಂತ್ರವೇ ಕನಕಪುರ ಮಾಡಲ್ ಆಗಿದ್ದು, ಅದನ್ನು ಚನ್ನಪಟ್ಟಣಕ್ಕೆ ತರುವ ಅಗತ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಕಪುರ ಮಾಡಲ್ ಅಂದರೆ ದಬ್ಬಾಳಿಕೆ, ದೌರ್ಜನ್ಯ, ಕೊಲೆ, ಸುಲಿಗೆ, ಬೆದರಿಕೆನಾ ಅಥವಾ ಬಗ್ಗದವರ ವಿರುದ್ಧ ಸುಳ್ಳು ಮೊಕದ್ದಮೆ ಹಾಕಿಸಿ ಅವರನ್ನು ಹೆದರಿಸಿ ಬೆದರಿಸಿ ರಾಜಕಾರಣ ಮಾಡುವುದಾ ಎಂದು ಪ್ರಶ್ನಿಸಿದ ಅವರು, ಕನಕಪುರ ಮತ್ತು ಚನ್ನಪಟ್ಟಣ ಕ್ಷೇತ್ರದ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಮಾಹಿತಿ ಪಡೆದುಕೊಂಡರೆ ಅರ್ಥವಾಗುತ್ತದೆ. ನಾನಾಗಲಿ ಅಥವಾ ಕುಮಾರಸ್ವಾಮಿಯಾಗಲಿ ಯಾರ ಮೇಲೂ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿಲ್ಲ. ಆದರೆ, ಕನಕಪುರದಲ್ಲಿ ನೂರಾರು ಕ್ರಿಮಿನಲ್ ಪ್ರಕರಣ ದಾಖಲಿಸಿ ವಿರೋಧಿಗಳನ್ನು ಬಗ್ಗು ಬಡಿಯುವ ಪ್ರಯತ್ನಗಳನ್ನು ಡಿ.ಕೆ.ಶಿವಕುಮಾರ್ ಮಾಡಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ರಿಪಬ್ಲಿಕ್ ಆಫ್ ಕನಕಪುರ ಅಂತ ಎಲ್ಲರು ಮಾತನಾಡಿಕೊಳ್ಳುತ್ತಿದ್ದರು. ಅದರ ಅರ್ಧ ಕೊಂಡಿಯನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿಕೂಟ ಅಭೂತ ಪೂರ್ವ ಗೆಲುವು ಸಾಧಿಸುವ ಮೂಲಕ ಕಳಚಿ ಹಾಕಿದ್ದೇವೆ. ಕನಕಪುರ ಮಾಡಲ್‌ ಗೆ ಚನ್ನಪಟ್ಟಣ ಕ್ಷೇತ್ರದ ಮತದಾರರೇ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ಚನ್ನಪಟ್ಟಣ ಕ್ಷೇತ್ರ ಎಲ್ಲ ರಂಗಗಳಲ್ಲಿಯೂ ಪ್ರಗತಿ ಸಾಧಿಸುತ್ತಾ ಬಂದಿದೆ. ಚನ್ನಪಟ್ಟ‍ಣವೇ ಒಂದು ಮಾಡಲ್ ತಾಲೂಕು ಆಗಿದೆ. ಕರ್ನಾಟಕದಲ್ಲಿ ತಲಾವಾರು ಆದಾಯ ನೋಡಿದರೆ ಅತಿ ಹೆಚ್ಚು ಆದಾಯ ಇರುವ ತಾಲೂಕುಗಳಲ್ಲಿ ಚನ್ನಪಟ್ಟಣವೂ ಒಂದಾಗಿದೆ. ಇಲ್ಲಿನ ಜನರು ಆರ್ಥಿಕವಾಗಿ ಸದೃಢರಾಗಿದ್ದು, ಇದಕ್ಕೆ ಕಾರಣ ಚನ್ನಪಟ್ಟಣದಲ್ಲಾದ ನೀರಾವರಿ ಕ್ರಾಂತಿ. ನಮ್ಮ ನೀರಾವರಿ ಯೋಜನೆಗಳನ್ನೇ ಡಿ.ಕೆ.ಶಿವಕುಮಾರ್ ನಕಲು ಮಾಡಿ ಕನಕಪುರದಲ್ಲಿ ಅನುಷ್ಠಾನಕ್ಕೆ ತಂದಿದ್ದಾರೆ ಎಂದರು.

ಚನ್ನಪಟ್ಟಣದ ಕೆರೆಕಟ್ಟೆಗಳು ತುಂಬಿದ್ದು, ಹಸಿರು ನಾಡಾಗಿ ಸಮೃದ್ಧವಾಗಿದೆ. ಡಿ.ಕೆ.ಶಿವಕುಮಾರ್ ಅವರು ರಾತ್ರಿ ಬದಲು ಹಗಲಲ್ಲಿ ಪ್ರವಾಸ ಮಾಡಿದರೆ ಚನ್ನಪಟ್ಟಣ ಕ್ಷೇತ್ರ ಹೇಗಿದೆ ಎಂಬುದು ಗೊತ್ತಾಗುತ್ತದೆ. ಕನಕಪುರದಲ್ಲಿ ಜನಸಾಮಾನ್ಯರ ಬದುಕು ಬದಲಾಗಿಲ್ಲ. ಸುಧೀರ್ಘವಾಗಿ ರಾಜಕೀಯದಲ್ಲಿದ್ದ ಶಿವಕುಮಾರ್ ಒಂದಷ್ಟು ಕಟ್ಟಡಗಳನ್ನು ಕಟ್ಟಿದ್ದಾರೆ. ಅದರಲ್ಲು ಸಾಕಷ್ಟು ಗೋಲ್ ಮಾಲ್ ನಡೆದಿದೆ. ಅಲ್ಲಿನ ಜನರ ಬದುಕು ಶೋಚನೀಯವಾಗಿದ್ದು, ಸುಧಾರಣೆ ತರುವ ಪ್ರಯತ್ನವನ್ನೇ ಮಾಡಿಲ್ಲ. ಹಾಗಾಗಿ ಕನಕಪುರಕ್ಕೆ ಚನ್ನಪಟ್ಟಣವನ್ನು ಹೋಲಿಸುವುದು ಬೇಡ ಎಂದು ಹೇಳಿದರು.

ಶಿವಕುಮಾರ್ ರಾಜಕೀಯ ಜೀವನದಲ್ಲಿ ಹೆಚ್ಚು ಬಾರಿ ಸಚಿವರಾಗಿದ್ದವರು. ಚನ್ನಪಟ್ಟಣಕ್ಕೆ ಯಾವುದೇ ಕೊಡುಗೆ ನೀಡಲಿಲ್ಲ.

ಈಗ ಉಪಚುನಾವಣೆಯಲ್ಲಿ ಗೆಲ್ಲಲು ಹೊಸ ಅವತಾರ ಸೃಷ್ಟಿಸಿಕೊಂಡು ಚನ್ನಪಟ್ಟಣಕ್ಕೆ ಬಂದಿದ್ದಾರೆ. ಅವರಿಗೆ ನಿಜವಾದ ಅಬಿವೃದ್ಧಿ ಕಾಳಜಿ ಇದ್ದಿದ್ದರೆ ಚನ್ನಪಟ್ಟಣಕ್ಕೆ ಕೊಡುಗೆ ನೀಡುತ್ತಿದ್ದರು. ಅವರ ಬೂಟಾಟಿಕೆ ಮಾತನ್ನು ನಂಬುವ ಸ್ಥಿತಿಯಲ್ಲಿ ಜನರು ಇಲ್ಲ ಎಂದು ತಿಳಿಸಿದರು.

ನಾನು ಮತ್ತು ಕುಮಾರಸ್ವಾಮಿಯವರು ಕ್ಷೇತ್ರದ ಅಭಿವೃದ್ಧಿಗಾಗಿ ಪೈಪೋಟಿ ನಡೆಸಿದ್ದೇವೆ. ಬಿಜೆಪಿ ಸರ್ಕಾರದಲ್ಲಿ 5 ಸಾವಿರ ಮನೆಗಳನ್ನು ಹಂಚಿದ್ದೇವೆ. ಕಾಂಗ್ರೆಸ್ ಸರ್ಕಾರ ಒಂದು ಮನೆಯನ್ನು ಕೊಟ್ಟಿಲ್ಲ. ಈಗ ಕಾವೇರಿ ನೀರಾವರಿ ನಿಗಮದಲ್ಲಿ ಬೋಗಸ್ ಬಿಲ್ ನೀಡಿ ಹಿಂಬಾಲಕರಿಗೆ ಹಣ ಕೊಡಿಸಿದ್ದಾರೆ. ಚನ್ನಪಟ್ಟಣದ ಕಾಂಗ್ರೆಸ್ ಮುಖಂಡರಿಗೆ ಸ್ವಾಭಿಮಾನ ಇಲ್ಲ. ಡಿಕೆ ಸಹೋದರರು ಆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಕೀಳಾಗಿ ನಡೆಸಿಕೊಳ್ಳುತ್ತಾರೆ. ಅವರಿಗೆಲ್ಲ ಸ್ವಾಭಿಮಾನ ಎಂಬುದಿದ್ದರೆ ಆ ಪಕ್ಷ ತೊರೆದು ಹೊರ ಬರಬೇಕು ಎಂದು ಯೋಗೇಶ್ವರ್ ಹೇಳಿದರು.

ಬಾಕ್ಸ್‌..........

ಚ.ಸ್ವಾಮಿ ಅಧ್ಯಕ್ಷತೆಯಲ್ಲಿ ಡಿ ಗ್ಯಾಂಗ್ ರಚನೆ

ರಾಮನಗರ: ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಗಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಡಿ ಗ್ಯಾಂಗ್ ಕಮಿಟಿಯನ್ನು ಕೆಪಿಸಿಸಿ ರಚನೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ ಉಸ್ತುವಾರಿ ಸಮಿತಿ ಎಂದು ಸಚಿವ ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಡಿ ಗ್ಯಾಂಗ್ ಕಮಿಟಿ ಮಾಡಿದ್ದಾರೆ. ಆ ಸಮಿತಿಯಲ್ಲಿ ಎಚ್.ಎಂ.ರೇವಣ್ಣ ಸೇರಿದಂತೆ ಒಂದಿಬ್ಬರು ನಾಯಕರನ್ನು ಕೈಬಿಟ್ಟು ಅನ್ಯಾಯ ಮಾಡಿದ್ದಾರೆ ಎಂದು ಲೇವಡಿ ಮಾಡಿದರು. ಚಲುವರಾಯಸ್ವಾಮಿ ರಾಜಕೀಯ ಚಾಣಕ್ಷ. ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಉಸ್ತುವಾರಿ ತೆಗೆದುಕೊಂಡು ಒಳ್ಳೆಯ ರಿಸಲ್ಟ್ ಕೊಡಿಸಿದ್ದಾರೆ. ಹಾಗಾಗಿ ಅವರ ಅಧ್ಯಕ್ಷತೆಯಲ್ಲಿಯೇ ಡಿ ಗ್ಯಾಂಗ್ ಕಮಿಟಿಯನ್ನು ಕಾಂಗ್ರೆಸ್ ರಚನೆ ಮಾಡಿದೆ ಎಂದು ಟೀಕಿಸಿದರು.