ಕರ್ನಾಟಕದಲ್ಲಿ ಸಿಇಟಿಯನ್ನೇ ಮುಂದುವರಿಸಿ

| Published : Jun 21 2024, 01:05 AM IST

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಜಿಲಾಧ್ಯಕ್ಷ ಜಗದೀಶ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕರ್ನಾಟಕದಲ್ಲಿ ಸಿಇಟಿಯನ್ನೇ ಮುಂದುವರಿಸಬೇಕೆಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಜಗದೀಶ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್‌ನಿಂದಾಗಿ ಕರ್ನಾಟಕದ ವಿದ್ಯಾರ್ಥಿಗಳಿಗೆ ತುಂಬಾ ಅನ್ಯಾಯವಾಗುತ್ತಿದೆ. ಈ ಸಂಗತಿಯ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸರಿಪಡಿಸಬೇಕು. ಮೊದಲು ಸಿಇಟಿ ಒಂದೇ ಇತ್ತು. ಆದರೆ ಕೇಂದ್ರ ಸರ್ಕಾರ ನೀಟ್ ಜಾರಿಗೆ ತಂದಿದ್ದರಿಂದ ಇದು ಉತ್ತರ ಭಾರತದ ಮಕ್ಕಳಿಗೆ ಅನುಕೂಲವಾಗುತ್ತಿದೆ. ನಮ್ಮ ರಾಜ್ಯದ ಮಕ್ಕಳಿಗೆ ನೀಟ್ ಸಮಸ್ಯೆಯಾಗುತ್ತಿದೆ. ಕಡಿಮೆ ಅಂಕ ಗಳಿಕೆಯಿಂದ ನೀಟ್‍ಲ್ಲಿ ಪಾಸ್ ಆಗುತ್ತಿಲ್ಲ. ಈ ಹಿನ್ನಲೆ ರಾಜ್ಯದ ವಿದ್ಯಾರ್ಥಿಗಳು ಉತ್ತರ ಭಾರತದ ಮಕ್ಕಳಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದರು.

ನೀಟ್ ವಿಚಾರದಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದ್ದರೂ ಚಿಂತಕರು, ಬುದ್ಧಿಜೀವಿಗಳು ಸುಮ್ಮನಿದ್ದಾರೆ. ಯಾರು ಸಹ ಧ್ವನಿ ಎತ್ತುತ್ತಿಲ್ಲ. ಈ ಮೊದಲು ಇದ್ದ ಸಿಇಟಿ ಮುಂದುವರಿಯಲೇಬೇಕು. ರಾಜ್ಯ ಸರ್ಕಾರ ತನ್ನ ಅಧಿಕಾರವನ್ನು ಕೇಂದ್ರಕ್ಕೆ ಕೊಟ್ಟು ಕೈಕಟ್ಟಿ ಕುಳಿತಿದೆ. ನೀಟ್ ಪರೀಕ್ಷೆಯಲ್ಲಿ ಹಗರಣವಾಗಿದ್ದು, ಇದರಿಂದ ಬುದ್ಧಿವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ರಾಜ್ಯದ ಮಕ್ಕಳಿಗೆ ಅನ್ಯಾಯವಾಗುತ್ತಿದ್ದರೂ ಇದರ ಬಗ್ಗೆ ಯಾವ ಸಂಸದನೂ ದನಿ ಎತ್ತುತ್ತಿಲ್ಲ. ರಾಜ್ಯದಿಂದ ಅಧಿಕ ಸಂಖ್ಯೆಯಲ್ಲಿ ಬಿಜೆಪಿಯಿಂದ ಲೋಕಸಬಾ ಸದಸ್ಯರು ಆಯ್ಕೆಯಾಗಿದ್ದಾರೆ. ಲೋಕಸಭೆಯಲ್ಲಿ ಧ್ವನಿಯನ್ನು ಎತ್ತುವುದರ ಮೂಲಕ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಜಗದೀಶ್ ಆಗ್ರಹಿಸಿದರು.

ಈ ವೇಳೆ ಆಮ್ ಆದ್ಮಿ ಪಾರ್ಟಿಯ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ, ಕಾರ್ಯದರ್ಶಿ ವರಲಕ್ಷ್ಮೀ, ಜಿಲ್ಲಾ ಕಾರ್ಯದರ್ಶಿ ರಾಮಪ್ಪ, ಟಿ.ಸಿ.ಚಂದ್ರೇಶೇಖರ್, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ತನ್ವೀರ್, ಜಬೀವುಲ್ಲಾ ಇದ್ದರು.