ಸಾರಾಂಶ
ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಾಜೀನಾಮೆ ಅಂಗೀಕಾರವಾಗಿದ್ದು, ಉಪಾಧ್ಯಕ್ಷ ಸೈಯದ್ ಸಾಧಿಕ್ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವಿಕರಿಸಿದರು.
ಕನಕಪುರ: ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಾಜೀನಾಮೆ ಅಂಗೀಕಾರವಾಗಿದ್ದು, ಉಪಾಧ್ಯಕ್ಷ ಸೈಯದ್ ಸಾಧಿಕ್ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವಿಕರಿಸಿದರು.
ನಗರಸಭೆ ಅಧ್ಯಕ್ಷರಾಗಿದ್ದ ಲಕ್ಷ್ಮೀದೇವಮ್ಮ ವಾರದ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜಿಲ್ಲಾಧಿಕಾರಿಗಳು ಅವರ ರಾಜೀನಾಮೆಯನ್ನು ಶನಿವಾರ ಅಂಗೀಕರಿಸಿದ್ದಾರೆ. ತೆರವಾದ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷ ಸೈಯದ್ ಸಾಧಿಕ್ ಅವರು ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ನಿರ್ಗಮಿತ ಅಧ್ಯಕ್ಷೆ ಲಕ್ಷ್ಮೀದೇವಮ್ಮ ನೂತನ ಅಧ್ಯಕ್ಷ ಸೈಯದ್ ಸಾಧಿಕ್ ಅವರಿಗೆ ಹೂಗುಚ್ಚ ನೀಡಿ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ಅಧ್ಯಕ್ಷರಾಗಿ ತಮಗೆ ಸಿಕ್ಕಿದ ಅವಕಾಶದಲ್ಲಿ ಅಧಿಕಾರಿಗಳು ಮತ್ತು ಸದಸ್ಯರ ಸಹಕಾರದಿಂದ ಸಾರ್ವಜನಿಕ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆ. ನನ್ನ ಇತಿಮಿತಿಯಲ್ಲಿ ಎಷ್ಟು ಕೆಲಸ ಮಾಡಲು ಸಾಧ್ಯವೊ ಅದನ್ನು ತೃಪ್ತಿಯಿಂದ ಮಾಡಿದ್ದೇನೆ, ಕೆಲಸ ಮಾಡಿಸುವ ಸಂದರ್ಭದಲ್ಲಿ ಸಿಬ್ಬಂದಿ ಮತ್ತು ನೌಕರರಿಗೆ ನೋವುಂಟು ಮಾಡಿದ್ದರೆ, ಅದು ಸಾರ್ವಜನಿಕರ ಕಾಳಜಿಯಿಂದ ಬೇಗ ಕೆಲಸ ಆಗಲಿ ಎಂಬ ಉದ್ದೇಶಕ್ಕಾಗಿ, ಯಾರು ತಪ್ಪಾಗಿ ಭಾವಿಸಬಾರದು, ಉತ್ತಮವಾಗಿ ಕೆಲಸ ನಿರ್ವಹಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ನಗರಸಭೆ ಆಯುಕ್ತ ಎಂ.ಎಸ್.ಮಹದೇವ್ ಮಾತನಾಡಿ, ನಗರ ಸಭೆ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನೌಕರರು, ಅಧಿಕಾರಿಗಳು, ಸಿಬ್ಬಂದಿ ಪರಸ್ಪರ ಸಹಕಾರದಿಂದ ಕೆಲಸ ಮಾಡಿದಾಗ ಮಾತ್ರ ಸಾರ್ವಜನಿಕರ ಕೆಲಸಗಳನ್ನು ಸಮರ್ಪಕ ಮತ್ತು ತ್ವರಿತವಾಗಿ ಮಾಡಿಕೊಡಲು ಸಾಧ್ಯ. ಈ ನಿಟ್ಟಿನಲ್ಲಿ ನಿರ್ಗಮಿತ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಕೆಲಸ ಮಾಡಿದ್ದಾರೆ. ಮುಂದೆ ಇದೇ ರೀತಿ ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡುವ ಮೂಲಕ ನಗರದ ಜನತೆಗೆ ಉತ್ತಮ ಸೇವೆ ದೊರಕಿಸೋಣ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.ನಗರಸಭೆಯ ಎಲ್ಲಾ ವಿಭಾಗದ ಅಧಿಕಾರಿಗಳು, ನೌಕರರು ಹಾಗೂ ನಗರಸಭೆ ಸದಸ್ಯರು ಅಧಿಕಾರಗಳು ಹಂಗಾಮಿ ಅಧ್ಯಕ್ಷರನ್ನು ಅಭಿನಂದಿಸಿದರು.