ಸಾರಾಂಶ
ಭೀಮಣ್ಣ ಗಜಾಪುರ
ಕೂಡ್ಲಿಗಿ: ಕಾಡುಪ್ರಾಣಿಗಳಿಗೆ ಕಾಡಿನಲ್ಲೇ ನೀರು ಸಿಗುತ್ತಿಲ್ಲ. ಎಲ್ಲಿ ನೋಡಿದರೂ ಒಣಹವೆ. ಬಿಸಿಲಿನ ಝಳ, ಕಾದ ಬಂಡೆ, ಬೋಡಾದ ಮರಗಳೇ ಕಾಣುತ್ತವೆ. ಅಂತದ್ದರಲ್ಲಿ ಕಾಡುಪ್ರಾಣಿ, ಪಕ್ಷಿಗಳ ಪಾಡು ಹೇಳತೀರದಾಗಿದೆ. ನೀರಿನ ದಾಹ ನೀಗಿಸಿಕೊಳ್ಳಲು ಕಾಡುಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬರಬೇಕಾದ ಪರಿಸ್ಥಿತಿ ಬಂದಿದೆ.ಇದನ್ನರಿತ ಕಂದಗಲ್ಲು ಗ್ರಾಮದ ಸಮಾನ ಮನಸ್ಕ ಯುವಕರು ಮಂಗಳವಾರ ಕಂದಗಲ್ಲು ಸಮೀಪದ ಕಾಡಿನಲ್ಲಿ ಎಂಟರಿಂದ 10 ಟ್ಯಾಂಕರ್ ನೀರನ್ನು ಕಾಡಿನ ಮಧ್ಯದ ಬಂಡೆಯ ತಗ್ಗುಗಳಿಗೆ ಹಾಕುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೂಡ್ಲಿಗಿ-ಕೊಟ್ಟೂರು ಮುಖ್ಯ ರಸ್ತೆಯಲ್ಲಿ ಬರುವ ಚಿರಿಬಿ ಕಾಯ್ದಿಟ್ಟ ಅರಣ್ಯದಲ್ಲಿ ಹುಲಿಗುಡ್ಡ ಸಮೀಪದ ಕಾಡಿನಲ್ಲಿ ದೋಣಿಯಾಕಾರದ ಕಲ್ಲುಗಳ ಬಂಡೆಯಲ್ಲಿ ನೀರು ನಿಲ್ಲಲು ಅವಕಾಶವಿದೆ. ಆ ಬಂಡೆಗಳ ತಗ್ಗುಪ್ರದೇಶಕ್ಕೆ ನೀರನ್ನು ಹರಿಸುವ ಮೂಲಕ ಕಾಡುಪ್ರಾಣಿ, ಪಕ್ಷಿಗಳ ನೀರಿನ ದಾಹ ನೀಗಿಸುವ ಕಾರ್ಯ ಮಾಡಿದ್ದಾರೆ.ಕಂದಗಲ್ಲು ಯುವಕರಾದ ತಳವಾರ ಮಂಜುನಾಥ, ಕೆ.ನಾಗರಾಜ್, ಡಿ.ಮಂಜುನಾಥ, ಎಚ್.ರಮೇಶ್, ಎಂ.ಕೊಟ್ರೇಶ್, ವೈ.ರಮೇಶ್ ಸ್ವಂತ ಖರ್ಚಿನಲ್ಲಿ ಎರಡು ಟ್ರ್ಯಾಕ್ಟರ್‌ಗಳಲ್ಲಿ ಎಂಟು ಟ್ಯಾಂಕರ್ ನೀರನ್ನು ಸಂಗ್ರಹಿಸಿ ತಂದು ಕಾಡಿಗೆ ಹರಿಸಿದ್ದಾರೆ.
ನೀರು ಖಾಲಿಯಾದ್ರೆ ಮತ್ತೆ ಹಾಕಿ ಬರ್ತೀವಿ:ಬಂಡೆಯ ಮಧ್ಯೆ ನೀರನ್ನು ಹಾಕುವುದರಿಂದ ಬಹಳ ದಿನಗಳವರೆಗೆ ನೀರು ಭೂಮಿಯಲ್ಲಿ ಇಂಗುವುದಿಲ್ಲ. ಈ ನೀರು ಸುಲಭವಾಗಿ ಕಾಡುಪ್ರಾಣಿ, ಪಕ್ಷಿಗಳಿಗೆ ಸಿಗುತ್ತದೆ. ಪುನಃ 10-15 ದಿನಗಳಲ್ಲಿ ಖಾಲಿಯಾದರೆ ಮತ್ತೆ ನೀರನ್ನು ಹಾಕುತ್ತೇವೆ ಎನ್ನುತ್ತಾರೆ ಕಂದಗಲ್ಲು ಗ್ರಾಮದ ಯುವಕ ತಳವಾರ ಮಂಜುನಾಥ ಮತ್ತು ಆತನ ಸ್ನೇಹಿತರು.
ಅಧಿಕಾರಿಗಳಿಗೆ ಪಾಠ:ಕೂಡ್ಲಿಗಿ- ಕೊಟ್ಟೂರು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಜನತೆ ಈ ಯುವಕರ ಕಾರ್ಯ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡುವ ಕಾರ್ಯವನ್ನು ಇಲ್ಲಿಯ ಯುವಕರು ಮಾಡಿರುವುದು ನಿಜಕ್ಕೂ ಅಧಿಕಾರಿಗಳಿಗೂ ಪಾಠವಾಗಿದೆ.
ಮನುಷ್ಯರಿಗೆ ಕೂಡ ಈ ಬೇಸಿಗೆಯಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ. ಇನ್ನು ಕಾಡಿನಲ್ಲಿರುವ ಪ್ರಾಣಿಪಕ್ಷಿಗಳು ನೀರಿನ ದಾಹ ನೀಗಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಮೂಡಿತು. ನಾನು ಹಾಗೂ ನನ್ನ ಸ್ನೇಹಿತರು ನಮ್ಮದೇ ಟ್ರ್ಯಾಕ್ಟರ್‌ನಿಂದ ಕಾಡಿನಲ್ಲಿರುವ ಹೆಬ್ಬಂಡೆಗಳ ಮಧ್ಯೆ ನೀರನ್ನು ಹಾಕಿ ಬಂದಿದ್ದೇವೆ ಎನ್ನುತ್ತಾರೆ ಕಾಡಲ್ಲಿ ನೀರು ಹರಿಸಿದ ಯುವಕ ತಳವಾರ ಮಂಜುನಾಥ