ಗಾಂಧಿ ನಡಿಗೆ ಕೇವಲ ಪಾದಯಾತ್ರೆಯಾಗದೆ, ವ್ಯಸನಿಗಳ ಮನಪರಿವರ್ತನೆಗೆ ಜಾಗೃತಿ ಮೂಡಿಸುವ ಅಭಿಯಾನವಾಗಬೇಕು. ಕಂದಕೂರು ಗ್ರಾಮ ದೀರ್ಘಕಾಲ ಮದ್ಯಮುಕ್ತವಾಗಿ ಉಳಿಯಬೇಕು ಎಂದು ಸಿಪಿಐ ವಿಶ್ವನಾಥ ಹಿರೇಗೌಡರ್‌ ಹೇಳಿದರು.

ಕುಷ್ಟಗಿ: ಗಾಂಧಿ ನಡಿಗೆ ಕೇವಲ ಪಾದಯಾತ್ರೆಯಾಗದೆ, ವ್ಯಸನಿಗಳ ಮನಪರಿವರ್ತನೆಗೆ ಜಾಗೃತಿ ಮೂಡಿಸುವ ಅಭಿಯಾನವಾಗಬೇಕು. ಕಂದಕೂರು ಗ್ರಾಮ ದೀರ್ಘಕಾಲ ಮದ್ಯಮುಕ್ತವಾಗಿ ಉಳಿಯಬೇಕು ಎಂದು ಸಿಪಿಐ ವಿಶ್ವನಾಥ ಹಿರೇಗೌಡರ್‌ ಹೇಳಿದರು.

ತಾಲೂಕಿನ ಕಂದಕೂರು ಗ್ರಾಮವನ್ನು ಸಂಪೂರ್ಣ ಮದ್ಯಮುಕ್ತಗೊಳಿಸುವ ಉದ್ದೇಶದಿಂದ ಕೊಪ್ಪಳ ಗಾಂಧಿ ಬಳಗ, ಕುಷ್ಟಗಿ ಪೊಲೀಸ್ ಠಾಣೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಕಂದಕೂರು ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಅ. 4ರಂದು ಕುಷ್ಟಗಿಯಿಂದ ಕಂದಕೂರಿಗೆ ಗಾಂಧಿ ನಡಿಗೆ ನಡೆಯಲಿದ್ದು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಗಾಂಧಿ ಬಳಗದ ಬಸವರಾಜ ಸವಡಿ ಮಾತನಾಡಿ, ಮದ್ಯಪಾನದಿಂದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಆದಾಯವನ್ನು ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಬಳಸಬೇಕು ಎಂದರು.

ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ ಮಾತನಾಡಿ, ಭಾನಾಪುರ, ಬಿನ್ನಾಳ ಹಾಗೂ ಹಟ್ಟಿ ಬಳಿಕ ನಾಲ್ಕನೇ ಗ್ರಾಮವಾಗಿ ಕಂದಕೂರನ್ನು ಆಯ್ಕೆ ಮಾಡಲಾಗಿದೆ. ಗ್ರಾಮ ಗಾಂಧಿ ಪುರಸ್ಕಾರ ಪಡೆಯುವಂತಾಗಲಿ ಎಂದು ಆಶಿಸಿದರು.

ಕಂದಕೂರಪ್ಪ ವಾಲ್ಮೀಕಿ ಮಾತನಾಡಿ, ಗ್ರಾಮಸ್ಥರು ಈ ಹಿಂದೆ ಎಂಎಸ್‌ಐಎಲ್ ಮದ್ಯದಂಗಡಿ ಬಂದ್ ಮಾಡಿಸಿದ್ದು, ಮುಂದೆಯೂ ಮದ್ಯ ಮಾರಾಟಕ್ಕೆ ಅವಕಾಶ ನೀಡದಿರಲು ಸಂಕಲ್ಪಿಸಿದ್ದಾರೆ ಎಂದರು.

ಪ್ರಾಣೇಶ್ ಪೂಜಾರ್ ಮಾತನಾಡಿ, ಬೆಂಗಳೂರಿನಲ್ಲಿ ಗಾಂಧಿ ಪುರಸ್ಕಾರ ಪ್ರದಾನ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಅ. 4ರಂದು ಗಾಂಧಿ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

ಸಾವಿತ್ರಿ ಮುಜುಂದಾರ್, ಚಂದ್ರಹಾಸ ಬಾವಿಕಟ್ಟಿ ಮಾತನಾಡಿದರು. ಪಿಡಿಒ ಗಿರಿಮಲ್ಲಪ್ಪ ಶಿರಗುಂಪಿ, ಗುರುರಾಜ ಹೊಸಪೇಟೆ, ಮಲ್ಲಪ್ಪ ಹವಳಿ, ಪರಶುರಾಮ, ದುರ್ಗಪ್ಪ, ಶಿವಪ್ಪ ಹಡಪದ, ಪರಮೇಶ್ವರ ರೆಡ್ಡಿ ಹಟ್ಟಿ, ಶರಣಪ್ಪ ಬಿಸ್ಕಲ್, ಬಸವರಾಜ ಕಾಮನೂರು, ಮಹಾಂತಯ್ಯ ಅರಳೇಲಿಮಠ, ವೀರೇಶ ಬಂಗಾರಶೆಟ್ಟರ್, ಅಭಿನಂದನ್ ಗೋಗಿ, ಬಿ.ಎಂ. ಜೋಶಿ, ಜೀವನಸಾಬ್ ವಾಲೀಕರ್, ನಟರಾಜ ಸೋನಾರ್, ಮಾರುತಿ ಪೂಜಾರ್ ಉಪಸ್ಥಿತರಿದ್ದರು.