ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಕಾಂಗರೂ ತಾಯಿ ಆರೈಕೆ ದಿನಾಚರಣೆ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಅಕಾಲಿಕವಾಗಿ ಜನಿಸಿದ ಹಾಗೂ ತೂಕ ಕಡಿಮೆ ಇರುವ ನವಜಾತು ಶಿಶುವನ್ನು ಆರೈಕೆ ಮಾಡುವ ವಿಧಾನವನ್ನು ಕಾಂಗರೂ ತಾಯಿ ಆರೈಕೆ ಎಂದು ಕರೆಯಲಾಗುವುದು ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಜಿ.ಪಿ ಪಂಕಜ ಹೇಳಿದರು.ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಾಂಗರೂ ತಾಯಿ ಆರೈಕೆ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅವಧಿಗೂ ಮುನ್ನ ಜನನವಾಗುವ ನವಜಾತ ಶಿಶುಗಳನ್ನು ಆರೈಕೆ ಮಾಡಲು ತಾಯಿಯೇ ಆಗಬೇಕಿಲ್ಲ. ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲರೂ ಇಂತಹ ಆರೈಕೆಯನ್ನು ಮಾಡಬೇಕು. ಕಾಂಗರೂ ಪ್ರಾಣಿಗಳ ರೀತಿ ಆರೈಕೆ ಮಾಡಬೇಕು ಎಂದರು.ಎದೆಗೆ ಹಾಕಿಕೊಂಡು ಚರ್ಮಕ್ಕೆ ಚರ್ಮ ತಾಗುವಂತೆ ಮಲಗಿದಾಗ ನವಜಾತ ಶಿಶುವಿನ ಮೈಮೇಲೆ ಬಟ್ಟೆ ಇಲ್ಲದೇ ಮಲಗಿಸಿಕೊಳ್ಳುವುದು. ಕಾಂಗರೂ ಪ್ರಾಣಿ ತನ್ನ ಮಗುವನ್ನು ಹೊಟ್ಟೆಯ ಚೀಲದಲ್ಲಿ ಇರಿಸಿಕೊಂಡು ಬೆಚ್ಚಗಿಡುವಂತೆ ಮನುಷ್ಯರು ಮಗುವನ್ನು ಎದೆಯ ಹತ್ತಿರ ಹಿಡಿದುಕೊಂಡು ಬೆಚ್ಚಗಿನ ವಾತಾವರಣ ಒದಗಿಸುವುದರಿಂದ ಮಗುವಿನ ದೇಹದ ಉಷ್ಣತೆ ಕಾಪಾಡುತ್ತದೆ. ತಾಯಿಯ ಹಾಲುಣಿಸುವಿಕೆಯನ್ನು ಸುಲಭಗೊಳಿಸಿ ಸೋಂಕು ತಡೆದು ಮಗುವಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಮಕ್ಕಳ ತಜ್ಞರಾದ ಡಾ.ಸಿ.ಜೆ. ಶ್ರೀರಾಮ ಮಾತನಾಡಿ, ಕಾಂಗರೂ ತಾಯಿ ಆರೈಕೆ ಬೆಚ್ಚನೆಯ ಆರೈಕೆ. ವೆಚ್ಚವಿಲ್ಲದ ಆರೈಕೆ ಎಂದರು.ಸ್ತ್ರೀರೋಗ ತಜ್ಞೆ ಡಾ.ಪವಿತ್ರ, ಶುಶ್ರೂಷಾಧೀಕ್ಷರಾದ ಎಚ್.ಮಂಜುಳಮ್ಮ, ಶುಶ್ರೂಷಾಧಿಕಾರಿಗಳಾದ ಷರೀಪ್ ಉಲ್ಲಾ, ಬಿ.ವಾಣಿ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಕಿಟ್ ವಿತರಿಸಲಾಯಿತು.