ಸಾರಾಂಶ
ಮಾತೃ ಪ್ರೇಮದಷ್ಟೇ ಕನ್ನಡ ಭಾಷೆಯನ್ನು ಪ್ರೀತಿಸಿ, ಆರಾಧಿಸಿದರೆ ಹೃದಯದ ಭಾಷೆಯಾಗಿ ಎಂದಿಗೂ ಅಳಿಯಲು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಶಂಕರ್ ಶೇಟ್ ಅಭಿಪ್ರಾಯಪಟ್ಟರು.
ವಿಶ್ವ ಮಾತೃ ಭಾಷೆ ದಿನ
ಸೊರಬ: ಮಾತೃ ಪ್ರೇಮದಷ್ಟೇ ಕನ್ನಡ ಭಾಷೆಯನ್ನು ಪ್ರೀತಿಸಿ, ಆರಾಧಿಸಿದರೆ ಹೃದಯದ ಭಾಷೆಯಾಗಿ ಎಂದಿಗೂ ಅಳಿಯಲು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಶಂಕರ್ ಶೇಟ್ ಅಭಿಪ್ರಾಯಪಟ್ಟರು.ಪಟ್ಟಣದ ಎಚ್‌ಪಿಆರ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜು, ನಾರಾಯಣಗುರು ವಸತಿ ಶಾಲೆ ಮತ್ತು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಾತೃ ಭಾಷೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ಪ್ರತಿ ಭಾಷೆಗಳಲ್ಲಿ ಸುದೀರ್ಘ ಇತಿಹಾಸ ಇರುವ ಕನ್ನಡಕ್ಕೆ ಹಿರಿತನವಿದೆ, ಸಿರಿತನವೂ ಇದೆ. ನಮ್ಮ ಮಾತೃ ಭಾಷೆಯಾದ ಕನ್ನಡವನ್ನು ಅನೇಕ ವಿದ್ವಾಂಸರು, ಕವಿಗಳು, ಕಲಾವಿದರು, ಸಂಗೀತಗಾರರು, ಎಲ್ಲಾ ಕ್ಷೇತ್ರದ ದಿಗ್ಗಜರು ಕಟ್ಟಿ ಬೆಳೆಸಿದ್ದಾರೆ. ಜಗತ್ತನ್ನೇ ಕಾಡುತ್ತಿರುವ ಇಂಗ್ಲಿಷ್ ಭಾಷೆಯ ನಡುವೆಯೂ ಅಡೆತಡೆಗಳನ್ನು ಅರಗಿಸಿಕೊಳ್ಳುತ್ತ ಕನ್ನಡ ಭಾಷೆ ಸಮೃದ್ಧವಾಗಿದೆ ಎಂದು ಹೇಳಿದರು.ಸರ್ಕಾರಿ ಪಪೂ ಕಾಲೇಜು ಉಪನ್ಯಾಸಕ ಉಮೇಶ್ ಭದ್ರಾಪುರ ಮಾತನಾಡಿ, ಮಾತೃ ಭಾಷೆ ನಮ್ಮ ಕನಸಿನ ಭಾವನೆಗಳ ಅಭಿವ್ಯಕ್ತಿಯ ಜತೆಗೆ ಅಂತರಂಗದ ಭಾವನೆಗಳ ರೂಪವಾಗಿದೆ. ಅದೆಷ್ಟೋ ಭಾಷೆಗಳು ಕನ್ನಡದ ಮೇಲೆ ಸವಾರಿ ಮಾಡಿದರೂ ನಾವು ಎಂದಿಗೂ ಕುಗ್ಗಿಲ್ಲ. ಮಾತೃಭಾಷೆ ಸ್ಪಷ್ಟವಾಗಿ ಕಲಿಯುತ್ತಲೇ ಅದರ ಮೇಲಿನ ಒಲವು ಹೆಚ್ಚುತ್ತದೆ ಎಂದರು.
ಆಕಾಶವಾಣಿ ಕಲಾವಿದ ಎಚ್.ಗುರುಮೂರ್ತಿ ಮತ್ತು ಶಿಕ್ಷಕ ಡಿ.ಚಂದ್ರಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಗೀತ ಗಾಯನ ಕಾರ್ಯಕ್ರಮ ನೆರವೇರಿತು.ಎಚ್.ಪಿ.ಆರ್. ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಮೇಘಶ್ರೀ, ಕಾಲೇಜಿನ ಆಡಳಿತಾಧಿಕಾರಿ ಶಿವಾನಂದ ನಾಯರ್, ನಾರಾಯಣಗುರು ವಸತಿ ಶಾಲೆಯ ಪ್ರಾಂಶುಪಾಲ ನಾಗರಾಜ, ಶಿಕ್ಷಕರಾದ ರಾಘವೇಂದ್ರ, ಶಿವಪ್ಪ ಕುರವತ್ತಿ, ಪಿಎಸ್‌ಐ ಚಂದನ್, ಯುವ ಬ್ರಿಗೇಡ್‌ನ ಮಹೇಶ್ ಕಾರ್ವಿ, ಮೊದಲಾದವರು ಹಾಜರಿದ್ದರು.