ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡ ಸೇನೆ ಸಂಘಟನೆ ವತಿಯಿಂದ ನ.೮ ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಗಾಂಧಿ ಭವನದಲ್ಲಿ ಕನ್ನಡ ಜಾಗೃತಿ ಸಮಾವೇಶ, ಕನ್ನಡ ರಾಜ್ಯೋತ್ಸವ, ಹಾಸ್ಯ ಹಾಗೂ ಮಿಮಿಕ್ರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ.ಮಂಜುನಾಥ್ ಹೇಳಿದರು.ಅಂದು ಬೆಳಗ್ಗೆ ೧೦ ಗಂಟೆಗೆ ಸಿಲ್ವರ್ ಜ್ಯೂಬಿಲಿ ಪಾರ್ಕಿನಿಂದ ವಿವಿಧ ಕಲಾ ತಂಡಗಳೊಂದಿಗೆ ಕನ್ನಡ ಮೆರವಣಿಗೆ ಹೊರಡಲಿದೆ. ವೇದಿಕೆ ಕಾರ್ಯಕ್ರಮವನ್ನು ಮಾಜಿ ಸಚಿವ ಜೆ.ಸಿ.ಮಾದುಸ್ವಾಮಿ ಅವರು ಉದ್ಘಾಟಿಸುವರು. ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಅವರು ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಕನ್ನಡ ಜಾಗೃತಿ ಕುರಿತು ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಅವರು ಪ್ರಧಾನ ಭಾಷಣ ಮಾಡುವರು. ಶಾಸಕ ಪಿ.ರವಿಕುಮಾರ್, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡುವರು. ಜಿಲ್ಲಾಧಿಕಾರಿ ಕುಮಾರ ಅವರು ವೀರ ಕನ್ನಡಿಗ ಪ್ರಶಸ್ತಿ ಪ್ರದಾನ ಮಾಡುವರು ಎಂದರು.ಕನ್ನಡ ರತ್ನ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಮಕೃಷ್ಣ, ರಾಜಣ್ಣ, ಭಾಸ್ಕರ್ ಸಾಯಿರಾಂ, ನಾಗೇಶ್ ಕುದರಗುಂಡಿ, ನಿಶ್ಚಯ್, ಕೆ.ಟಿ.ಶಿವಕುಮಾರ್, ಎಚ್.ಎಂ.ನಾಗರಾಜು, ಎನ್.ಜಿ.ಪ್ರಮೋದ್‌ಕುಮಾರ್, ಎಚ್.ವಿ.ನರೇಂದ್ರಬಾಬು ಅವರಿಗೆ ಹಾಗೂ ವೀರ ಕನ್ನಡಿಗ ಪ್ರಶಸ್ತಿಯನ್ನು ಡಾ.ಎಚ್.ಎಸ್.ರವಿಕುಮಾರ್, ಅನಿಲ್, ಗಣೇಶ್, ಎಂ.ಎಸ್.ಮಂಜುನಾಥ್, ಎಂ.ಡಿ.ಕೇಶವಮೂರ್ತಿ, ಸಿ.ಎಸ್.ಆರಾಧ್ಯ ಅವರಿಗೆ ನೀಡಲಾಗುತ್ತಿದೆ. ಕಲಾವಿದರಾದ ಗಿಲ್ಲಿ ನಟ, ವಾಣಿಗೌಡ, ಸಾಗರ್ ತುರುವೇಕೆರೆ ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ವಿವರಿಸಿದರು.
ವಾಟಾಳ್ ನಾಗರಾಜ್ ಆಯ್ಕೆಗೆ ಸಲಹೆ:ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತ್ಯೇತರರನ್ನು ಗುರುತಿಸುವುದಾದರೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಆಯ್ಕೆ ಮಾಡಬೇಕು. ಜಿಲ್ಲೆಯಲ್ಲಿ ವ್ಯಾಪಕವಾಗಿ ಬೆಟ್ಟಿಂಗ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ, ಅದನ್ನು ತಡೆಗಟ್ಟಲು ಪೊಲೀಸರು ಸೂಕ್ತ ಕ್ರಮ ತೆಗೆದುಕೊಂಡು ಅಮೂಲ್ಯ ಜೀವ ಉಳಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಮಹಾಂತಪ್ಪ, ಎಂ.ಎಸ್.ಮಂಜುನಾಥ್, ದೇವಮ್ಮ, ಟಿ.ಪವಿತ್ರಾ ನಾಗರಾಜು, ಮಂಜು ಕಮ್ಮನಾಯಕನಹಳ್ಳಿ, ಸೌಭಾಗ್ಯ ಇದ್ದರು.