ಸಾರಾಂಶ
ರಾಂಪೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಲಕ್ಷ್ಮೀಕಾಂತ ಪಂಚಾಳ ಅವರು ಸೌಹಾರ್ದ ಪಥ ಮಹಾಗ್ರಂಥವನ್ನು ಬಾಗಲಕೋಟೆ ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿಗೆ ನೀಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಂಪ್ಯೂಟರ್ ಯುಗದಲ್ಲಿರುವ ಇಂದಿನ ಯುವ ಸಮೂಹ ಕನ್ನಡ ಪುಸ್ತಕಗಳನ್ನು ಓದುಗರಿಗೆ ಹಂಚುವ ಹಾಗೂ ಓದುವ ಪರಂಪರೆ ಬೆಳೆಸುವುದು ಉತ್ತಮ ಎಂದು ಡಾ.ಲಕ್ಷ್ಮೀಕಾಂತ ಪಾಂಚಾಳ ಹೇಳಿದರು.ರಾಂಪೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಲಕ್ಷ್ಮೀಕಾಂತ ಪಂಚಾಳ ಅವರು ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಭೇಟಿ ನೀಡಿ, ತಮ್ಮ ಯೋಜನಾ ಸಂಚಾಲಕತ್ವದಲ್ಲಿ ಕಲಬುರ್ಗಿಯ ಸಿದ್ದಲಿಂಗೇಶ್ವರ ಪ್ರಕಾಶನದ ಕನ್ನಡ ಸಾಹಿತ್ಯ ಪುನರಾವಲೋಕನ ಮಾಲೆ ಹತ್ತು ಸಂಪುಟಗಳ ಗ್ರಂಥಗಳನ್ನು ಹಾಗೂ 101 ಮೌಲ್ಯಯುತ ಕನ್ನಡ ಲೇಖನ ಹೊಂದಿರುವ ಸೌಹಾರ್ದ ಪಥ ಮಹಾಗ್ರಂಥವನ್ನು ಬಾಗಲಕೋಟೆ ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿಗೆ ನೀಡಿದರು. ಕನ್ನಡ ಪುಸ್ತಕ ಹಂಚುವುದರೊಂದಿಗೆ ಓದುವ ಪರಂಪರೆ ಮತ್ತು ಪ್ರೇರಣೆ ಬೆಳೆಸಿಕೊಳ್ಳಬೇಕೆಂದರು.
ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಕನ್ನಡ ಪುಸ್ತಕ ಸ್ವೀಕರಿಸಿ ಮಾತನಾಡಿ, ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಲಕ್ಷ್ಮೀಕಾಂತ ಪಾಂಚಾಳ ಅವರು ಕನ್ನಡ ಪುಸ್ತಕಗಳು ಹಂಚುವ ಕಾರ್ಯ ಓದುಗರಿಗೆ ಮಾದರಿಯಾಗಿದ್ದು, ಸಹೃದಯರ ಮನಸ್ಸಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ ಮಾತನಾಡಿ, ಕನ್ನಡ ನಾಡು ನುಡಿಗಳಿಗೆ ಪ್ರೇರಣೆಯಾಗುವ ಕನ್ನಡದ ಪುಸ್ತಕಗಳು ಸದಾ ಓದುವುದರಿಂದ ಮನಸ್ಸು ಹೂವಿನಂತೆ ಅರಳುತ್ತದೆ. ಎಲ್ಲರೂ ಕನ್ನಡ ಪುಸ್ತಕ ಓದುವ ಪ್ರೀತಿಯನ್ನು ಬೆಳಸಿಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ, ಸಾಹಿತಿಗಳಾದ ಡಾ.ಪ್ರಕಾಶ ಖಾಡೆ, ಡಾ.ಮೈನುದ್ದೀನ್ ರೇವಡಿಗಾರ, ಪ್ರೊ.ನಾಡಗೌಡರ, ರಾಜೇಂದ್ರ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.