ಕನ್ನಡ ಬಂಡವಾಳಶಾಹಿ ಹಿತಾಸಕ್ತಿಯ ವಸ್ತುವಲ್ಲ: ಡಾ.ಪುರುಷೋತ್ತಮ

| Published : Aug 14 2024, 01:01 AM IST

ಸಾರಾಂಶ

ಕವಿಯಾದವನಿಗೆ ಪ್ರಾಮಾಣಿಕವಾದ ತುಂಬು ಜೀವನ ಪ್ರೀತಿ ಇರಬೇಕು. ಹಾಗಿದ್ದರೆ ಮಾತ್ರ ಅದು ಎಲ್ಲರ ಜೀವನ ಪ್ರೀತಿಯ ಕಾವ್ಯವಾಗುತ್ತದೆ. ಇಂತಹ ಅಗಾಧ ಜೀವನ ಪ್ರೇಮ ಹೇಮಂತ್ ರವರ ಕವನಗಳಲ್ಲಿ ಕಾಣುತ್ತದೆ. ಇವರ ಕವಿತೆಗಳು ಕನ್ನಡದ ಭವಿಷ್ಯದ ಉತ್ತಮ ಕವಿಯಾಗಬಲ್ಲ ನಂಬಿಕೆ ಮತ್ತು ಸೂಚನೆ ನೀಡುತ್ತಿವೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಕನ್ನಡ ಭಾಷೆಯನ್ನು ಬಂಡವಾಳಶಾಹಿ ಹಿತಾಸಕ್ತಿಯ ವಸ್ತುವಾಗಲು ಬಿಡಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ಕನ್ನಡ ಜಾಗೃತಿ ಭವನದಲ್ಲಿ ಡಾ.ಡಿ.ಆರ್.ನಾಗರಾಜ ಬಳಗದ ವತಿಯಿಂದ ಹಮ್ಮಿಕೊಂಡಿದ್ದ "ಮತ್ತೆ ಮತ್ತೆ ಮಳೆ " ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಕ್ಕೆ ಇದು ಒಳ್ಳೆಯ ಕಾಲವಲ್ಲ. 4500 ಕನ್ನಡ ಶಾಲೆಗಳು ಮುಚ್ಚಿ ಹೋಗಿವೆ. ಈ ಬಗ್ಗೆ ಯಾವುದೇ ಲೇಖಕರು ಗಂಭೀರವಾಗಿ ತಮ್ಮ ನಿಲುವುಗಳನ್ನು ಪ್ರಕಟಿಸಿಲ್ಲ ಎಂದು ವಿಷಾದಿಸಿದರು.

ಡಿ.ಆರ್.ನಾಗರಾಜ ಹೇಳಿದಂತೆ ಕಾವ್ಯ ಅಮೃತಕ್ಕೆ ಹಾರುವ ಗರುಡ. ಅದು ಪೋಲ್ ವಾಲ್ಟ್ ಇದ್ದ ಹಾಗೆ. ಪೋಲ್ ವಾಲ್ಟ್ ದಾಟಲು ಕಾವ್ಯ ಸಾಧನವಾಗಬೇಕು. ಅಲ್ಲದೆ ಸಾಮಾನ್ಯರ ನುಡಿಗಳನ್ನು ಬಳಸಿ ಭಾಷೆಯನ್ನು ಮುರಿದು ಕಟ್ಟಿ ಪುನರ್ ಸೃಷ್ಟಿಸಬೇಕು. ಈ ದಿಸೆಯಲ್ಲಿ ಹೇಮಂತ್ ಲಿಂಗಪ್ಪನವರು ಹೊಸ ಭರವಸೆಯನ್ನು ಮೂಡಿಸಿದ್ದಾರೆ ಎಂದು ತಿಳಿಸಿದರು.

ಕೃತಿಯನ್ನು ಲೋಕಾರ್ಪಣೆ ಮಾಡಿದ ಪ್ರಾಧ್ಯಾಪಕ ಡಾ.ಅಮರೇಂದ್ರ ಹೊಲ್ಲಂಬಳ್ಳಿ ಮಾತನಾಡಿ, ಡಿ.ಆರ್. ನಾಗರಾಜ ಶಿಷ್ಯನಾಗಿದ್ದ ನಾನು ನನ್ನ ಶಿಷ್ಯನ ಕೃತಿಯನ್ನು ಡಿ.ಆರ್. ನಾಗರಾಜ ಬಳಗದ ವತಿಯಿಂದ ಬಿಡುಗಡೆ ಮಾಡುತ್ತಿರುವುದು ಹೆಮ್ಮೆ ಎನಿಸುತ್ತದೆ. ಇನ್ನಷ್ಟು ಗಂಭೀರ ಕಾವ್ಯ ಇವರಿಂದ ಸಾಧ್ಯವಾಗಲಿ ಎಂದು ಆಶಿಸಿದರು.

ಕೃತಿ ಕುರಿತು ಮಾತನಾಡಿದ ಡಾ.ಕಾವ್ಯಶ್ರೀ, ವೃತ್ತಿಯಿಂದ ಬೆಸ್ಕಾಂ ಇಂಜಿನಿಯರ್ ಆಗಿದ್ದರೂ ಹೇಮಂತ್ ಅವರ ಕಾವ್ಯದ ಬನಿ ಹಾಗೂ ಭಾಷೆ ನಮ್ಮೆಲ್ಲರನ್ನು ಆಕರ್ಷಿಸುತ್ತದೆ. ಸ್ತ್ರೀವಾದಿ ಸಂವೇದನೆಯನ್ನು ತನ್ನದೇ ದಾಟಿಯಲ್ಲಿ ವ್ಯಕ್ತಗೊಳಿಸಿರುವ ಇವರ ಕಾವ್ಯಕ್ಕೆ ಸಂಗೀತದ ಲಯವೂ ಬೆರತಿರುವುದು ವಿಶೇಷ ಎಂದರು.

ಸಾಹಿತ್ಯ ವಿಮರ್ಶಕ ಎಚ್.ಎಸ್.ರೇಣುಕಾರಾಧ್ಯ ಮಾತನಾಡಿ, ಕವಿಯಾದವನಿಗೆ ಪ್ರಾಮಾಣಿಕವಾದ ತುಂಬು ಜೀವನ ಪ್ರೀತಿ ಇರಬೇಕು. ಹಾಗಿದ್ದರೆ ಮಾತ್ರ ಅದು ಎಲ್ಲರ ಜೀವನ ಪ್ರೀತಿಯ ಕಾವ್ಯವಾಗುತ್ತದೆ. ಇಂತಹ ಅಗಾಧ ಜೀವನ ಪ್ರೇಮ ಹೇಮಂತ್ ರವರ ಕವನಗಳಲ್ಲಿ ಕಾಣುತ್ತದೆ. ಇವರ ಕವಿತೆಗಳು ಕನ್ನಡದ ಭವಿಷ್ಯದ ಉತ್ತಮ ಕವಿಯಾಗಬಲ್ಲ ನಂಬಿಕೆ ಮತ್ತು ಸೂಚನೆ ನೀಡುತ್ತಿವೆ ಎಂದರು.

ಕೃತಿಕಾರ ಹೇಮಂತ್ ಲಿಂಗಪ್ಪ ಮಾತನಾಡಿ, ನಾನು ಕವಿಯಾಗಬೇಕೆಂಬುದು ಅಪ್ಪನ ಆಸೆಯಾಗಿತ್ತು. ನನ್ನ ಕಾವ್ಯ ಮತ್ತು ಸಾಹಿತ್ಯದ ಸೃಜನಶೀಲತೆಗೆ ಡಿ.ಆರ್. ನಾಗರಾಜ ರವರ ಬರಹಗಳು ಪ್ರೇರಣೆಯಾಗಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದೊಡ್ಡಬೆಳವಂಗಲ ಆರಕ್ಷಕ ನಿರೀಕ್ಷಕ ಡಾ. ನವೀನ್ ಕುಮಾರ್, ಪ್ರಕಾಶಕಿ ಜಗದಾಂಬ, ಕಜಾಪ ಅಧ್ಯಕ್ಷ ಕೆ ವೆಂಕಟೇಶ್, ವಿಜ್ಞಾನ ಸಾಹಿತಿ ಡಾ.ಆವಲಮೂರ್ತಿ, ಸಿಐಟಿಯು ಮುಖಂಡ ರುದ್ರಾರಾಧ್ಯ, ಡಾ.ಮಂಜುನಾಥ್ ಅದ್ದೆ , ಸಾಹಿತಿ ಮಹಾಲಿಂಗಯ್ಯ, ಬೆಸ್ಕಾಂ ವ್ಯವಸ್ಥಾಪಕರಾದ ಶಿವಪ್ರಕಾಶ್, ದೊಡ್ಡಬಳ್ಳಾಪುರದ ಸಾಹಿತ್ಯಾಸಕ್ತರು ಹಾಗೂ ಡಿ.ಆರ್.ನಾಗರಾಜ ಬಳಗದವರು ಉಪಸ್ಥಿತರಿದ್ದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳು ಗೀತಗಾಯನ ನಡೆಸಿಕೊಟ್ಟರು.