ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ದಾನಮ್ಮ ದೇವಿ ಟ್ರಸ್ಟ್ ಹಾಗೂ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಗುಡ್ಡಾಪುರದ ಶ್ರೀ ದಾನಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಸೆ.30ರಂದು ನಡೆಯುವ ಕರ್ನಾಟಕ ಸಂಭ್ರಮ -50ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಸಾಂಸ್ಕೃತಿಕ ಕಾರ್ಯಕ್ರಮ, ಗಡಿನಾಡ ಕನ್ನಡಿಗರ ಸಮಾವೇಶ ಹಾಗೂ ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅತ್ಯಂತ ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.
ಗುಡ್ಡಾಪುರದಲ್ಲಿ ಕಾರ್ಯಕ್ರಮದ ವೇದಿಕೆ ಸೇರಿದಂತೆ ವಿವಿಧ ಕಾರ್ಯಗಳ ಪೂರ್ವ ಸಿದ್ಧತೆಯನ್ನು ಭಾನುವಾರ ಪರಿಶೀಲಿಸಿ ಮಾತನಾಡಿ, ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಜಿಲ್ಲಾಡಳಿತದ ಸಹಯೋಗದಲ್ಲಿ ನಿರ್ವಹಿಸಲಾಗಿದೆ. ಹದಿನಾಲ್ಕು ಸಮಿತಿಗಳನ್ನು ರಚಿಸಿ ಕೆಲಸಗಳನ್ನು ಆಯಾ ಸಮಿತಿಗೆ ವಹಿಸಿದ್ದು, ಎಲ್ಲ ಸಮಿತಿಯವರು ವಹಿಸಿದ ಜವಾಬ್ದಾರಿಗಳನ್ನು ಬಹಳಷ್ಟು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇಂದು ನಡೆಯುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆಗಮಿಸುತಿದ್ದು, ಗುಡ್ಡಾಪುರದಲ್ಲಿ ಈಗಾಗಲೇ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಹಲವಾರು ಕಲಾ ಪ್ರಕಾರದ ಸಾಂಸ್ಕೃತಿಕ, ಜಾನಪದ ಕಲೆಗಳ ಅನಾವರಣಗೊಳ್ಳಲಿದೆ. ಸಂಪೂರ್ಣ ಕರ್ನಾಟಕದ ಕಲೆ, ಇತಿಹಾಸ, ಸಾಂಸ್ಕೃತಿಕ ಪರಿಚಯ ಮಾಡಿಸುವ ವೇದಿಕೆ ಇದಾಗಿದ್ದು, ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರೂ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರು ಆಗಮಿಸುತ್ತಿದ್ದಾರೆ. ಯಾವುದೇ ಸಮಸ್ಯೆಯಾಗದಂತೆ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಗಡಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಗಡಿ ಪ್ರಾಧಿಕಾರದ ಸದಸ್ಯ ಎಂ.ಎಸ್.ಮದಬಾವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಚೆನ್ನೂರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದಿನ ಸೌದಾಗರ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸಿ.ಬಿ ಚಿಕ್ಕಲಕಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ಗುಡ್ಡಾಪುರ ದಾನಮ್ಮದೇವಿ ಟ್ರಸ್ಟ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.ಬಾಕ್ಸ್ಕಾರ್ಯಕ್ರಮದಲ್ಲಿ ಏನೇನು ವಿಶೇಷ..?ಕರ್ನಾಟಕ ಸಂಭ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವಿವಿಧ ಅಕಾಡಮಿಗಳ ಸಹಯೋಗದಲ್ಲಿ ಹೊನ್ನ ಬಿತ್ತೇವು ನೃತ್ಯ ರೂಪಕ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಹಾಗೂ ಕರ್ನಾಟಕ ಶಿಲ್ಪ ಕಲಾ ಅಕಾಡೆಮಿಯಿಂದ ದೃಶ್ಯಯಾನ ರೂಪಕ ಮತ್ತು ಶಿಲ್ಪಕಲಾ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕನ್ನಡ ನೃತ್ಯ ರೂಪಕ, ಕಾಸರಗೋಡಿನ ಕೆ.ವಿ.ರಮೇಶ ತಂಡದವರಿಂದ ಯಕ್ಷಗಾನ ಗೊಂಬೆಯಾಟ, ಜತ್ತ ಮತ್ತು ಅಕ್ಕಲಕೋಟೆಯ ವಿವಿಧ ಸ್ಥಳೀಯ ಕಲಾವಿದರಿಂದ ಕನ್ನಡ ಗೀತೆಗಳು ಹಾಗೂ ಭಾವಗೀತೆಗಳು, ವಿಜಯಪುರದ ರಂಗನಾಥ ಬತ್ತಾಸೆ ತಂಡದವರಿಂದ ನೃತ್ಯರೂಪಕ, ಸಂಗೀತಾ ಕಟ್ಟಿ ಅವರಿಂದ ಕನ್ನಡ ಗೀತಗಾಯನ, ಪ್ರಕಾಶ ಮಲ್ಲಿಗವಾಡ ಮತ್ತು ಲಲಿತಾ ಚಾಕಲಬ್ಬಿ ತಂಡದವರಿಂದ ಜಾನಪದ ನೃತ್ಯಗಳು, ಹೇಮಾ ಪಾಟೀಲ ಅವರಿಂದ ದಾರದಿಂದ ಬರೆಯುವ ಚಿತ್ರ ಪ್ರದರ್ಶನ, ಗಂಗಾವತಿ ಪ್ರಾಣೇಶ ಅವರ ತಂಡದಿಂದ ಕನ್ನಡ ನಗೆ ಹಬ್ಬ ಸೇರಿದಂತೆ ಅನೇಕ ಕನ್ನಡ ಕಲೆಯ ಅನಾವರಣಗೊಳ್ಳಲಿವೆ. ನಾಡಿನ ವಿವಿಧ ಮೂಲೆ ಮೂಲೆಗಳಿಂದ ಆಗಮಿಸಿದ ಕಲಾವಿದರು ತಮ್ಮ ಕಲೆಯ ಪ್ರದರ್ಶನ ನೀಡಲಿದ್ದಾರೆ.