ಗಡಿಭಾಗದಲ್ಲಿದ್ದರೂ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಕನ್ನಡದ ಅಭಿಮಾನ, ಭಾಷೆಯ ಮೇಲಿನ ಪ್ರೀತಿ ಹಾಗೂ ಸಾಂಸ್ಕೃತಿಕ ಪರಂಪರೆ ಗಟ್ಟಿಯಾಗಿದೆ.

ವಿಜೃಂಭಣೆಯ ಕನ್ನಡ ರಾಜ್ಯೋತ್ಸವ । ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಣೆ-ಸಂಸದ ಡಾ.ಕೆ. ಸುಧಾಕರ್

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಗಡಿನಾಡು ಚಿಕ್ಕಬಳ್ಳಾಪುರದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಸದ ಡಾ.ಕೆ.ಸುಧಾಕರ್ ಅವರ ನೇತೃತ್ವದಲ್ಲಿ ವಿಜೃಂಭಣೆಯ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಶಿವೋತ್ಸವ ಹಾಗೂ ಚಿಕ್ಕಬಳ್ಳಾಪುರ ಉತ್ಸವದಂತಹ ಕಾರ್ಯಕ್ರಮಗಳ ನಂತರ ಸಂಸದರು ಈಗ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಿಂದ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.ಈ ಕುರಿತು ನಗರದ ಸಂಸದ ಗೃಹ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ಗಡಿಭಾಗದಲ್ಲಿದ್ದರೂ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಕನ್ನಡದ ಅಭಿಮಾನ, ಭಾಷೆಯ ಮೇಲಿನ ಪ್ರೀತಿ ಹಾಗೂ ಸಾಂಸ್ಕೃತಿಕ ಪರಂಪರೆ ಗಟ್ಟಿಯಾಗಿದೆ. ಕನ್ನಡದ ಅಸ್ಮಿತೆ ಮತ್ತು ಅಭಿಮಾನವನ್ನು ಸಾರುವ ಉದ್ದೇಶದಿಂದ ನ. 1ರಂದು ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುವುದು ಎಂದು ತಿಳಿಸಿದರು.ಚಿಕ್ಕಬಳ್ಳಾಪುರದಲ್ಲಿ ನವೆಂಬರ್ 1ರಂದು ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಸಂಭ್ರಮ, ಬೃಹತ್ ಬೈಕ್‌ ರ‍್ಯಾಲಿ, ಜ್ಞಾನಸುಧಾ ಸ್ಕಾಲರ್‌ಶಿಪ್‌ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಅವರು ಮಾಹಿತಿ ನೀಡಿದರು.ಬೈಕ್‌ ರ‍್ಯಾಲಿ ಮತ್ತು ಸಾಂಸ್ಕೃತಿಕ ಸಂಭ್ರಮ:

ನ. 1ರಂದು ಮಧ್ಯಾಹ್ನ 2 ಗಂಟೆಗೆ ಚಿಕ್ಕಬಳ್ಳಾಪುರದ ಎಂ.ಜಿ. ರಸ್ತೆಯ ಮರುಳುಸಿದ್ದೇಶ್ವರ ದೇವಸ್ಥಾನದ ಬಳಿ ಪೂಜೆ ಸಲ್ಲಿಸಿ, ಸಾವಿರಾರು ಬೈಕ್‌ಗಳ ಬೃಹತ್ ರ‍್ಯಾಲಿಗೆ ಚಾಲನೆ ನೀಡಲಾಗುವುದು. ಕನ್ನಡದ ಬಾವುಟಗಳನ್ನು ಹಿಡಿದು ನಡೆಯುವ ಈ ರ‍್ಯಾಲಿಯು ಕನ್ನಡದ ಅಭಿಮಾನ ಮತ್ತು ಏಕತೆಯ ಸಂದೇಶ ಸಾರಲಿದೆ. ಸಂಜೆ 4.30ರಿಂದ ಸೊಲಾಲಪ್ಪನ ದಿನ್ನೆಯಲ್ಲಿ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ.

ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಚಿಕ್ಕಬಳ್ಳಾಪುರದಲ್ಲಿ ದೊಡ್ಡ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳ ಕೊರತೆಯಿದೆ ಎಂಬ ಸಾರ್ವಜನಿಕರ ಅಭಿಪ್ರಾಯದ ಹಿನ್ನೆಲೆಯಲ್ಲಿ ಈ ಬಾರಿ ಕನ್ನಡದ ಹಾಡುಗಳ ಮೂಲಕ ಸಂಗೀತದ ರಸದೌತಣ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

10,460 ವಿದ್ಯಾರ್ಥಿಗಳಿಗೆ ಜ್ಞಾನಸುಧಾ ಸ್ಕಾಲರ್‌ಶಿಪ್‌:

ಜ್ಞಾನಸುಧಾ ಸ್ಕಾಲರ್‌ಶಿಪ್‌ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದುವರೆಗೆ 10,460 ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಇನ್ನೂ ಕೆಲವು ವಿದ್ಯಾರ್ಥಿಗಳ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ಕಾರ್ಯಕ್ರಮದ ನಂತರವೂ ಪರಿಶೀಲನೆ ಪೂರ್ಣಗೊಂಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ವಿತರಿಸಲಾಗುವುದು. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು.

ಸರ್ವರಿಗೂ ಮುಕ್ತ ಆಹ್ವಾನ:

ಕಾರ್ಯಕ್ರಮಕ್ಕೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಪಿ.ಸಿ. ಮೋಹನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನ ಹಿರಿಯ ಮುಖಂಡರು, ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ವಿತರಣೆ ಸುಗಮವಾಗಿ ನಡೆಯಲು ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ವಿತರಣೆಯ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಸಾರಿಗೆ, ವೇದಿಕೆ, ಆಹಾರ, ಆಹ್ವಾನ ಮತ್ತು ಪ್ರಚಾರ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಆರ್. ರೆಡ್ಡಿ, ಟಿಎಪಿಸಿಎಂಎಸ್ ಅಧ್ಯಕ್ಷ ಆವುಲಕೊಂಡರಾಯಪ್ಪ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪ್ರಸಾದ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ತೇಜೆಂದ್ರ ಪಾಪು, ನಗರಸಭೆ ಮಾಜಿ ಅಧ್ಯಕ್ಷ ಎ.ಗಜೇಂದ್ರ ಮುಖಂಡರಾದ ಮುಖಂಡರಾದ ಚಿನ್ನಪ್ಪ ರೆಡ್ಡಿ, ಬಾಲಕುಂಟಹಳ್ಳಿ ಬಿ.ಎನ್.ಗಂಗಾಧರಪ್ಪ ಎ.ಶ್ರೀನಿವಾಸ್, ಅನಿಲ್, ಕೃಷ್ಣಮೂರ್ತಿ, ನಾರಾಯಣಸ್ವಾಮಿ, ಕೃಷ್ಣಾರೆಡ್ಡಿ ಮತ್ತಿತರರು ಇದ್ದರು.

ಸಿಕೆಬಿ-1 ಸುದ್ದಿಗೋಷ್ಠಿಯಲ್ಲಿ ಸಂಸದ ಡಾ.ಕೆ.ಸುಧಾಕರ್ ಮಾತನಾಡಿದರು.