ಸಾರಾಂಶ
ಸಾಮಾಜಿಕ ಜಾಲತಾಣಗಳ ಬರವಣಿಗೆ ಓದಿಗೆ ಆಧಾರವಾಗದು. ಪುಸ್ತಕ ಸಂಸ್ಕೃತಿ ಜೀವಂತವಾಗಿರಲು ಓದುವ ಹವ್ಯಾಸ ತೀವ್ರವಾಗಿರಬೇಕು. ಬರಹಗಾರನಿಗೆ ಮುದ್ರಣದ ಸಮಸ್ಯೆಯಿಲ್ಲ. ಆದರೆ ಕನ್ನಡ ಭಾಷೆಗೆ ಓದಿನ ಹಿನ್ನಡೆಯಾಗಿದೆ.
ಯಲ್ಲಾಪುರ:
ಸಾಮಾಜಿಕ ಜಾಲತಾಣಗಳ ಬರವಣಿಗೆ ಓದಿಗೆ ಆಧಾರವಾಗದು. ಪುಸ್ತಕ ಸಂಸ್ಕೃತಿ ಜೀವಂತವಾಗಿರಲು ಓದುವ ಹವ್ಯಾಸ ತೀವ್ರವಾಗಿರಬೇಕು. ಬರಹಗಾರನಿಗೆ ಮುದ್ರಣದ ಸಮಸ್ಯೆಯಿಲ್ಲ. ಆದರೆ ಕನ್ನಡ ಭಾಷೆಗೆ ಓದಿನ ಹಿನ್ನಡೆಯಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಹೇಳಿದರು.ತಾಲೂಕಿನ ತೇಲಂಗಾರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಮೈತ್ರಿ ಬೆಳ್ಳಿಹಬ್ಬದ ಸಮಾರೋಪದಂದು ಬರಹಗಾರ ವನರಾಗ ಶರ್ಮಾ ವಿರಚಿತ ಪರ್ವತ ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.ನಾವು ಹೊಸ ಸಂಗತಿಗಳಿಗೆ ತೆರೆದುಕೊಳ್ಳಬೇಕು. ಪತ್ರಕರ್ತರು ಟೇಬಲ್ ಬರಹಗಾರಾಗುತ್ತಿರುವ ಕುರಿತು ವಿಷಾದವೆನಿಸುತ್ತದೆ. ತಂತ್ರಜ್ಞಾನದ ಕೌಶಲ್ಯ ಹೊಸ ತಲೆಮಾರಿನ ಮಾರ್ಗದರ್ಶಿಯಾಗಬೇಕು. ಬರಹಗಳು ಎಲ್ಲರನ್ನೂ ಒಳಗೊಂಡಿರಬೇಕು. ಮೈತ್ರಿ ಬಳಗ ಸಂಸ್ಕೃತಿ ಕಟ್ಟುವ ಸಾಹಸ ಮಾಡುತ್ತಿದೆ ಎಂದು ಶ್ಲಾಘಿಸಿದರು.ಕೃತಿ ಪರಿಚಯಿಸಿದ ನಿವೃತ್ತ ಪ್ರಾಚಾರ್ಯ ಶ್ರೀರಂಗ ಕಟ್ಟಿ ಮಾತನಾಡಿ, ಬದುಕಿನಲ್ಲಿ ಹಣಕ್ಕಿಂತ ಮಾನವೀಯತೆ ಮುಖ್ಯವೆಂಬುದನ್ನು ವನರಾಗ ಶರ್ಮಾ ಅವರ ಕೃತಿ ದಾಖಲಿಸಿದೆ. ಜನರ ಜೀವನ ವಿಧಾನದ ಸೂಕ್ಷ್ಮತೆಗಳು ಈ ಕೃತಿಯ ಮುಖ್ಯ ಆಶಯವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಾಹಿತಿ ವನರಾಗ ಶರ್ಮಾ ಮಾತನಾಡಿ, ನಾನು ಅನುಭವಿಸಿದ ಕ್ಷಣಗಳೇ ಕೃತಿ ರೂಪವಾಗಲು ಕಾರಣ. ಅದು ಓದುಗನ ಅನುಭವವಾಗಲು ಸಾಧ್ಯವಾದರೆ, ಕೃತಿ ಸಾರ್ಥಕವಾದಂತೆ. ಜೀವನ್ಮುಖಿ ಬರಹಗಳು ಲೇಖಕನ ಜೀವಂತಿಕೆ ಸ್ಪಷ್ಟಪಡಿಸುತ್ತವೆ. ಬರಹಗಳು ಬದುಕಿನ ಭಾಗವಾಗಬೇಕು. ಬರಹದ ತನ್ಮಯತೆ ಉತ್ತಮ ಸಂದೇಶವನ್ನು ಪ್ರಚುರಪಡಿಸಬಲ್ಲುದು ಎಂದರು.ಅತಿಥಿಗಳಾಗಿದ್ದ ಸಾಮಾಜಿಕ ಕಾರ್ಯಕರ್ತ ಟಿ.ಸಿ. ಗಾಂವ್ಕರ, ಮುಖ್ಯಾಧ್ಯಾಪಕ ಎಂ.ಕೆ. ಭಟ್ಟ, ಅಭಾಸಾಪ ತಾಲೂಕು ಘಟಕದ ಕಾರ್ಯದರ್ಶಿ ಶ್ರೀರಾಮ ಲಾಲಗುಳಿ, ಮೈತ್ರಿ ಕಲಾ ಬಳಗದ ಅಧ್ಯಕ್ಷ ಗಣಪತಿ ಕಂಚಿಪಾಲ ಉಪಸ್ಥಿತರಿದ್ದರು. ದತ್ತಾತ್ರೇಯ ಕಣ್ಣಿಪಾಲ ಸ್ವಾಗತಿಸಿದರು. ದಿನೇಶ ಗೌಡ ನಿರ್ವಹಿಸಿದರು. ಜಿ.ಎನ್.ಕೋಮಾರ ವಂದಿಸಿದರು.