ಯುವ ಜನಾಂಗ ನನ್ನ ನಾಡು,ನನ್ನ ಭಾಷೆ, ನನ್ನ ರಾಷ್ಟ್ರ ಎಂಬ ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಬೇಕು
ಕುಕನೂರು: ಕನ್ನಡ ಭಾಷೆ ಅತ್ಯಂತ ಹಳೆಯ ಹಾಗೂ ಶ್ರೀಮಂತ ಭಾಷೆಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕೆ ಒಳ್ಳೆಯ ಸ್ಥಾನಮಾನವಿದೆ ಎಂದು ವಿವಿಯ ಕುಲಪತಿ ಪ್ರೊ. ಬಿ.ಕೆ ರವಿ ಹೇಳಿದರು.
ತಾಲೂಕಿನ ತಳಕಲ್ ಗ್ರಾಮದ ಇಂಜನಿಯರ್ ಕಾಲೇಜು ಆವರಣದಲ್ಲಿರುವ ಕೊಪ್ಪಳ ವಿವಿಯಲ್ಲಿ ನಡೆದ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, ಯುವ ಜನಾಂಗ ನನ್ನ ನಾಡು,ನನ್ನ ಭಾಷೆ, ನನ್ನ ರಾಷ್ಟ್ರ ಎಂಬ ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಬೇಕು. ಕರ್ನಾಟಕದ ಏಕೀಕರಣದ ನಂತರ ಕನ್ನಡ ರಂಗಭೂಮಿ, ಕನ್ನಡ ಪತ್ರಿಕೋದ್ಯಮ, ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಪ್ರೋತ್ಸಾಹ ಸಿಕ್ಕಿದ್ದು, ಭಾರಿ ಪ್ರಮಾಣದಲ್ಲಿ ಪ್ರಗತಿ ಕಂಡಿವೆ. ಕೊಪ್ಪಳ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಸಮಾನತೆಯ ಹರಿಕಾರ ಬಸವಣ್ಣ ನಡೆದಾಡಿದ ಪುಣ್ಯದ ನೆಲವಾಗಿದೆ. ಇವರ ಕಾಲಘಟ್ಟದಲ್ಲಿ ರಚಿತವಾದ ವಚನ ಸಾಹಿತ್ಯವು ಜನರಿಗೆ ತೀರ ಹತ್ತಿರದ ಸಾಹಿತ್ಯವಾಗಿದೆ ಎಂದರು.ವಿವಿಯ ಕುಲಸಚಿವ ಕೆ.ವಿ. ಪ್ರಸಾದ, ಆಡಳಿತಾಧಿಕಾರಿ ತಿಮ್ಮಾರೆಡ್ಡಿ ಮೇಟಿ ಮಾತನಾಡಿದರು.
ಬೋಧಕ ಸಿಬ್ಬಂದಿ ಡಾ.ಬಸವರಾಜ ಗಡಾದ, ಡಾ. ಶೃಷ್ಠಿ ಜವಳಕರ, ಶ್ರೀಕಾಂತ ಕೆ.ಬಿ.,ಸೋಮಪ್ಪ, ವೀರೇಶ ಇತರರಿದ್ದರು.