ಗ್ರಾಮದ ಕಥೆಯ ಕಂದೀಲು, ಜಾನಪದ ಕಥೆಯ ‘ಸನ್​ಫ್ಲವರ್ಸ್​’ಗೆ ರಾಷ್ಟ್ರೀಯ ಪ್ರಶಸ್ತಿ

| N/A | Published : Aug 01 2025, 11:45 PM IST / Updated: Aug 02 2025, 12:09 PM IST

Kandeelu Movie
ಗ್ರಾಮದ ಕಥೆಯ ಕಂದೀಲು, ಜಾನಪದ ಕಥೆಯ ‘ಸನ್​ಫ್ಲವರ್ಸ್​’ಗೆ ರಾಷ್ಟ್ರೀಯ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

 ಕನ್ನಡದ 2 ಚಿತ್ರಗಳು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ. ‘ಕಂದೀಲು’ ಚಿತ್ರವು ಫೀಚರ್‌ ಫಿಲ್ಮ್‌ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಗೆದ್ದರೆ, ‘ಸನ್​ಫ್ಲವರ್ಸ್​​ ವರ್​ ದಿ ಫಸ್ಟ್ ಒನ್ಸ್ ಟು ನೋ’ ಬೆಸ್ಟ್​​ ಸ್ಕ್ರಿಪ್ಟ್​​ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.

  ನವದೆಹಲಿ :  ಶುಕ್ರವಾರ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದ್ದು, ಕನ್ನಡದ 2 ಚಿತ್ರಗಳು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ.

‘ಕಂದೀಲು’ ಚಿತ್ರವು ಫೀಚರ್‌ ಫಿಲ್ಮ್‌ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಗೆದ್ದರೆ, ‘ಸನ್​ಫ್ಲವರ್ಸ್​​ ವರ್​ ದಿ ಫಸ್ಟ್ ಒನ್ಸ್ ಟು ನೋ’ ಬೆಸ್ಟ್​​ ಸ್ಕ್ರಿಪ್ಟ್​​ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.

ಗ್ರಾಮದ ಕಥೆಯ ಕಂದೀಲು: ‘ಕಂದೀಲು’ ಚಿತ್ರವನ್ನು ಕೊಡಗು ಜಿಲ್ಲೆ ಮಡಿಕೇರಿ ನಿವಾಸಿ ಯಶೋದಾ ಪ್ರಕಾಶ್ ಕೊಟ್ಟುಕತ್ತೀರ​ ಅವರು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಯಶೋದಾ ಜಿಲ್ಲೆಯ ಏಕೈಕ ಮಹಿಳಾ ನಿರ್ದೇಶಕರು ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ‘ಕಂದೀಲು’ ಗ್ರಾಮವೊಂದರ ಕಥೆಯಾಗಿದ್ದು, ರೈತ ಹಾಗೂ ಆತನ ಕುಟುಂಬದ ಸುತ್ತ ಸುತ್ತುತ್ತದೆ. ಅನೇಕ ಸವಾಲುಗಳ ನಡುವೆಯೂ ಬದುಕಿನ ಮಹತ್ವವನ್ನು ಹಲವು ಆಯಾಮಗಳ ಮೂಲಕ ಚಿತ್ರ ಅತ್ಯುತ್ತಮವಾಗಿ ವಿವರಿಸುತ್ತದೆ.

ಜಾನಪದ ಕಥೆಯ ‘ಸನ್‌ಫ್ಲವರ್ಸ್‌’:ಮೈಸೂರಿನ ವೈದ್ಯ ಡಾ. ಚಿದಾನಂದ ಎಸ್‌. ನಾಯ್ಕ್‌ ನಿರ್ದೇಶನದ ‘ಸನ್​ಫ್ಲವರ್ಸ್​​ ವರ್​ ದಿ ಫಸ್ಟ್ ಒನ್ಸ್ ಟು ನೋ’ (ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು) ಕಿರುಚಿತ್ರ ಬೆಸ್ಟ್​​ ಸ್ಕ್ರಿಪ್ಟ್​​ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಚಿದಾನಂದ ಅವರು ಎಂಬಿಬಿಎಸ್ ಶಿಕ್ಷಣವನ್ನು ಪೂರೈಸಿದ ನಂತರ ಪುಣೆಯ ಫಿಲ್ಮ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಕಲಿಕೆ ಪ್ರಾರಂಭಿಸಿದರು. ಆ ವೇಳೆ ಈ ಕಿರುಚಿತ್ರವನ್ನು ನಿರ್ದೇಶಿಸಿದ್ದರು. ತನ್ನ ಹಳ್ಳಿಯಿಂದ ಹುಂಜವೊಂದನ್ನು ಕದ್ದು ಸಮುದಾಯವನ್ನು ಕತ್ತಲೆಯಲ್ಲಿ ಮುಳುಗಿಸುವ ವೃದ್ಧ ಮಹಿಳೆಯ ಕುರಿತಾದ ಜಾನಪದ ಕಥೆಯನ್ನು ಈ ಚಿತ್ರ ಒಳಗೊಂಡಿದೆ.

ಇದು 2025ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಅರ್ಹತೆ ಪಡೆದಿತ್ತು. ಅಲ್ಲದೆ, ಪ್ರತಿಷ್ಠಿತ ಕೇನ್ಸ್ ಫಿಲ್ಮ್​​ ಫೆಸ್ಟಿವಲ್​ನಲ್ಲಿ ‘ಲಾ ಸಿನೆಫ್ ಪ್ರಶಸ್ತಿ’ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

Read more Articles on