ಕನ್ನಡಕ್ಕೆ ಸಹಸ್ರಾರು ವರ್ಷಗಳ ಪರಂಪರೆಯಿದೆ: ಲಿಂಗದಹಳ್ಳಿ ಶ್ರೀಗಳು

| Published : Jan 04 2025, 12:30 AM IST

ಕನ್ನಡಕ್ಕೆ ಸಹಸ್ರಾರು ವರ್ಷಗಳ ಪರಂಪರೆಯಿದೆ: ಲಿಂಗದಹಳ್ಳಿ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಸಾವಿರಾರು ವರ್ಷಗಳ ಭವ್ಯ ಇತಿಹಾಸ, ಪರಂಪರೆ ಇರುವ ಕನ್ನಡ, ಭಾಷೆ, ನಾಡು, ನುಡಿ, ನೆಲ, ಜಲ ಸಂಸ್ಕೃತಿ ಹೊಂದಿರುವ ಕನ್ನಡಿಗರೇ ಮೇಲು, ಕನ್ನಡಕ್ಕೆ ಕನ್ನಡವೇ ಸರಿಸಾಟಿ ಎಂದು ಲಿಂಗದಹಳ್ಳಿಯ ರಂಭಾಪುರಿ ಶಾಖಾ ಹಿರೇಮಠದ ವೀರಭದ್ರ ಶಿವಾಚಾರ್ಯರು ನುಡಿದರು.

ರಾಣಿಬೆನ್ನೂರು: ಸಾವಿರಾರು ವರ್ಷಗಳ ಭವ್ಯ ಇತಿಹಾಸ, ಪರಂಪರೆ ಇರುವ ಕನ್ನಡ, ಭಾಷೆ, ನಾಡು, ನುಡಿ, ನೆಲ, ಜಲ ಸಂಸ್ಕೃತಿ ಹೊಂದಿರುವ ಕನ್ನಡಿಗರೇ ಮೇಲು, ಕನ್ನಡಕ್ಕೆ ಕನ್ನಡವೇ ಸರಿಸಾಟಿ ಎಂದು ಲಿಂಗದಹಳ್ಳಿಯ ರಂಭಾಪುರಿ ಶಾಖಾ ಹಿರೇಮಠದ ವೀರಭದ್ರ ಶಿವಾಚಾರ್ಯರು ನುಡಿದರು. ನಗರದ ಹುಣಸಿಕಟ್ಟಿ ರಸ್ತೆ ಪಂಪಾನಗರ ಪ್ರವೇಶ ದ್ವಾರದ ಬಳಿ ಗುರುವಾರ ಸಂಜೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ, ಎನ್.ಎಸ್. ಸ್ನೇಹಜ್ಯೋತಿ ಸಂಸ್ಥೆ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಕರ್ನಾಟಕ ನಿತ್ಯೋತ್ಸವ, ಸ್ವಾಭಿಮಾನಿ ಕನ್ನಡಿಗರ ಜಾಗೃತಿ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕನ್ನಡಕ್ಕೆ ಕನ್ನಡತನವೇ ಮಹಾಶಕ್ತಿ, ಅದಕ್ಕೆ ಪರ್ಯಾಯವಾಗಿ ಯಾವುದೇ ಬೇರೊಂದು ಶಕ್ತಿ ಇಲ್ಲ. ಕನ್ನಡಿಗರು ನಿರಭಿಮಾನಿಗಳಾಗದೆ ಸ್ವಾಭಿಮಾನಿಗಳಾಗಬೇಕಾದ ಅಗತ್ಯವಿದೆ. ಕನ್ನಡಕ್ಕೆ ಧಕ್ಕೆ ಬಂದಾಗ ಒಗ್ಗಟ್ಟಾಗಿ ಹೋರಾಡುವ ಛಲ ಎಲ್ಲರಲ್ಲೂ ಬರಬೇಕಿದೆ ಎಂದರು.ಕೋಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಮಹಾಸ್ವಾಮಿಗಳು ಮಾತನಾಡಿ, ನಮ್ಮ ನಾಡು, ನುಡಿ, ಗಡಿ, ಭಾಷೆ, ಸಂಸ್ಕೃತಿ ಪುಣ್ಯಮಯವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ, ಕನ್ನಡಕ್ಕೆ ಧಕ್ಕೆ ಬಂದಾಗ ನಾವೆಲ್ಲರೂ ಕೆಚ್ಚೆದೆಯ ಖಂಡನೆ ಮಾಡಿ ಪ್ರತಿಭಟಿಸುವ ಶಕ್ತಿ ಹೊಂದಬೇಕು. ಕನ್ನಡದ ಉದ್ದಾರ ಕನ್ನಡಿಗರಿಂದಲೇ ಎಂಬುದನ್ನು ಎಲ್ಲರೂ ಅರಿತು ಕನ್ನಡದ ಏಳ್ಗೆಗೆ ಮುಂದಾಗಬೇಕು ಎಂದರು.ವರ್ತಕ ಎಂ.ಎಸ್. ಅರಕೇರಿ ಕಾರ್ಯಕ್ರಮ ಉದ್ಘಾಟಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ, ಮಂಜುನಾಥ ಗೌಡಶಿವಣ್ಣನವರ, ರೈತ ಮುಖಂಡ ರವೀಂದ್ರಗೌಡ ಪಾಟೀಲ್, ಪ್ರೇಮಾ ಅಂಗಡಿ, ಪ್ರೊ. ಪ್ರಭುಲಿಂಗಪ್ಪ ಹಲಗೇರಿ, ಸಂಗಮೇಶ ಜಾಧವ, ಅರುಣ ನಿತ್ಯಾನಂದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪರಶುರಾಮ್ ಬಣಕಾರ ಸಂಗಡಿಗರು ಪ್ರಸ್ತುತ ಪಡಿಸಿದ ಜೋಗತಿ ನೃತ್ಯ, ಡಾ.ಕೆ. ಸಿ. ನಾಗರಜ್ಜಿ, ಜನನಿ ಜಾನಪದ ತಂಡ, ಯಂಗ್ ಸ್ಟಾರ್ ಮೇಲೋಡಿ ತಂಡ ಮತ್ತು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ನೀಡಿದ ವೈವಿಧ್ಯಮಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು.ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ್ ಶಿಗ್ಲಿ, ಮಾಜಿ ಅಧ್ಯಕ್ಷೆ ಎ.ಬಿ. ರತ್ನಮ್ಮ, ಚಂದ್ರಣ್ಣ ಬೇಡರ, ಸುರೇಶ ಮಳವಳ್ಳಿ, ಕೆ. ಎಸ್. ನಾಗರಾಜ, ನಾಗರಾಜ ಚಳಗೇರಿ, ಶಿವಕುಮಾರ ಜಾಧವ, ಗುಡ್ಡಪ್ಪ ಮಾಳಗುಡ್ಡಪ್ಪನವರ, ಆನಂದ ಹುಲಬನ್ನಿ, ಜಗದೀಶ್ ಮಳೀಮಠ, ಅಣ್ಣಪ್ಪ ಚಲವಾದಿ, ಮಂಜುನಾಥ ಚಲವಾದಿ, ಬಸವರಾಜ ಹಿರೇಮಠ, ಕೃಷ್ಣ ತೊಗಟವೀರ, ಗೋಪಿ ಕುಂದಾಪುರ, ಮಲ್ಲಿಕಾರ್ಜುನ ಸಾವಕ್ಕಳವರ, ಕೊಟ್ರೇಶಪ್ಪ ಎಮ್ಮಿ, ಸುರೇಶ ಮಳವಳ್ಳಿ, ಬಸವರಾಜ ಸಾವಕ್ಕಳ್ಳವರ ಸೇರಿದಂತೆ ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ವರ್ತಕರು, ಸಾಮಾಜಿಕ ಕಾರ್ಯಕರ್ತರು ಇದ್ದರು.