ಕನ್ನಡ ಹೃದಯದ ಭಾಷೆ: ಸಾಹಿತಿ ಮಾಲಾ ಬಡಿಗೇರ

| Published : Feb 27 2024, 01:34 AM IST

ಸಾರಾಂಶ

ಕನ್ನಡ ಹೃದಯದ ಭಾಷೆ. ಬೇರೆ ಭಾಷೆ ಜೊತೆಗೆ ಕನ್ನಡಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಕನ್ನಡ ಕಟ್ಟುವ ಕೆಲಸದಲ್ಲಿ ಯುವಕರು ನಿರತರಾಗಬೇಕು.

ಕೊಪ್ಪಳ: ಕನ್ನಡ ಹೃದಯದ ಭಾಷೆ. ಬೇರೆ ಭಾಷೆ ಜೊತೆಗೆ ಕನ್ನಡಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಕನ್ನಡ ಕಟ್ಟುವ ಕೆಲಸದಲ್ಲಿ ಯುವಕರು ನಿರತರಾಗಬೇಕು ಎಂದು ಸಾಹಿತಿ ಮಾಲಾ ಬಡಿಗೇರ ತಿಳಿಸಿದರು.ತಾಲೂಕಿನ ಅಳವಂಡಿ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಕಸಾಪ ಜಿಲ್ಲಾ ಘಟಕ, ಕಸಾಪ ತಾಲೂಕು ಘಟಕ, ಕಸಾಪ ಅಳವಂಡಿ ಹೋಬಳಿ ಘಟಕದಿಂದ ನಡೆದ ಕನ್ನಡ ಸಾಹಿತ್ಯದಲ್ಲಿ ಯುವಕರ ಪಾತ್ರ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.ಕನ್ನಡ ಸಾಹಿತ್ಯದ ಬಗ್ಗೆ ಪ್ರೀತಿ, ವಿಧೇಯತೆ, ಅಭಿಮಾನ ಇರಬೇಕು. ಭಾಷೆಯ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು. ಜೀವನ ಅಂದರೆ ಬದುಕು ಬವಣೆಗೆ ಸಿಗಬಾರದೆಂದರೆ ಶಿಕ್ಷಣ ಅತಿ ಅವಶ್ಯ. ಶಿಕ್ಷಣ ಇಲ್ಲದ ಜೀವನ ಬಂಜರು ಭೂಮಿ ಇದ್ದ ಹಾಗೆ. ಆಸಕ್ತಿಯಿಂದ ಶಿಕ್ಷಣವನ್ನು ಪಡೆಯಬೇಕು. ಆಸಕ್ತಿ ಆಳವಾದ ಅಧ್ಯಯನದಿಂದ ದೊರೆಯಲಿದೆ. ಯುವಕರು ಓದಿನತ್ತ ಹೆಚ್ಚು ಆಸಕ್ತಿ ವಹಿಸಬೇಕು. ಮನಸ್ಸು ಹೊಸ ವಿಷಯಗಳ ಗ್ರಹಿಕೆಯತ್ತ ಚಿತ್ತ ಹರಿಸಬೇಕು. ಅಂದರೆ ಜಗತ್ತು ಆಧುನಿಕತೆಯನ್ನು ಮೈಗೂಡಿಸಿಕೊಂಡು ಅತ್ಯಂತ ವೇಗವಾಗಿ ಓಡುತ್ತಿದೆ. ಯುವಕರು ಸಹ ಅದರ ವೇಗಕ್ಕೆ ತಕ್ಕಂತೆ ಅಧ್ಯಯನ ಮಾಡಿ ಯಶಸ್ಸು ಗಳಿಸಬೇಕು. ಮಹಿಳೆಯರು ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಶಿಕ್ಷಣ ಇದ್ದರೆ ಮಾತ್ರ ನಿಮ್ಮ ಜೀವನದ ದಾರಿ ಬದಲಾಗಲಿದೆ ಎಂದರು.ಕಸಾಪ ತಾಲೂಕು ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ ಮಾತನಾಡಿ, ಯುವಕರು ಇತ್ತೀಚೆಗೆ ಭಾಷೆಯ ಮೇಲಿನ ಹಿಡಿತ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಮೊಬೈಲ್ ಬಳಕೆ ಜಾಸ್ತಿ ಮಾಡಿಕೊಂಡು ಪುಸ್ತಕದ ಅಧ್ಯಯನದಿಂದ ವಿಮುಖರಾಗುತ್ತಿದ್ದಾರೆ. ಜ್ಞಾನ ಕಡಿಮೆಯಾದರೆ ಬದುಕು ಬವಣೆಗೆ ಸಿಗಲಿದೆ. ಮೊಬೈಲನ್ನು ಅವಶ್ಯಕತೆ ತಕ್ಕಂತೆ ಬಳಸಬೇಕು. ನಮ್ಮ ಹಿಡಿತದಲ್ಲಿ ಮೊಬೈಲ್ ಇರಬೇಕು. ಮೊಬೈಲ್‌ ದಾಸರಾಗಿ ನಾವು ಜೀವಿಸಬಾರದು ಎಂದರು.ಶಿಕ್ಷಕ ನೀಲಪ್ಪ ಹಕ್ಕಂಡಿ, ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ ಮಾತನಾಡಿದರು.ಮುಖ್ಯ ಶಿಕ್ಷಕ ರಪೀಕ ಬಳಿಗಾರ, ಕಸಾಪ ಅಳವಂಡಿ ಹೋಬಳಿ ಘಟಕದ ಅಧ್ಯಕ್ಷ ಸುರೇಶ ಸಂಗರಡ್ಡಿ, ಶಿಕ್ಷಕರಾದ ಗೋಪಾಲ ಬಡಿಗೇರ, ಬಸಿರಾಬಾನು, ಮಂಜುಳಾ ಕಣವಿ, ಸುಬಾಸ ಕೊಪ್ಪಳ, ಮಹಿಬೂದಾ ಹಾಗೂ ಜೂನಸಾಬ ಹಾಗೂ ವಿದ್ಯಾರ್ಥಿಗಳು ಇದ್ದರು.