ಸಾರಾಂಶ
ಕನ್ನಡಿಗರಾದ ನಾವೆಲ್ಲರೂ ಒಂದೇ ಎಂಬ ಸೌಹಾರ್ದ ಸಂದೇಶ ವನ್ನು ಸಾರುವ ಈ ರಥವು ಕನ್ನಡ ತಾಯಿ ಭುವನೇಶ್ವರಿ ಮತ್ತು ನಾಡಿನ ಪ್ರಸಿದ್ಧ ಕವಿಗಳ ಭಾವಚಿತ್ರದೊಂದಿಗೆ ಕರ್ನಾಟಕದ ಎಲ್ಲರ ಮನೆ, ಮನ ಬೆಳಗಲಿದೆ. ಕನ್ನಡ ಪರಂಪರೆಯನ್ನು ಉಳಿಸಿ, ಬೆಳೆಸಬೇಕು.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ರಾಜ್ಯಕ್ಕೆ ‘ಕರ್ನಾಟಕ’ ವೆಂದು ನಾಮಕರಣ ಮಾಡಿ 50 ವರ್ಷಗಳು ಪೂರೈಸಿದ ಸಂಭ್ರಮದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥಯಾತ್ರೆ ಕನ್ನಡ ನಾಡು-ನುಡಿ, ಸಂಸ್ಕೃತಿ ಹಾಗೂ ವೈವಿಧ್ಯತೆಯನ್ನು ಕುರಿತು ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶಾಸಕ ಮೇಲೂರು ರವಿಕುಮಾರ್ ತಿಳಿಸಿದರು. ರೇಷ್ಮೆ ನಗರಿ ಶಿಡ್ಲಘಟ್ಟ ಪಟ್ಟಣಕ್ಕೆ ಸೋಮವಾರ ಕನ್ನಡ ಜ್ಯೋತಿ ರಥಯಾತ್ರೆಯನ್ನು ಸ್ವಾಗತಿಸಿದ ಬಳಿಕ ನಗರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ನಾಡು, ನುಡಿಗಾಗಿ ಪ್ರತಿಯೊಬ್ಬರು ತಮ್ಮ ಒಗ್ಗಟ್ಟು ಪ್ರದರ್ಶಿಸಬೇಕೆಂದರು. ಕನ್ನಡಿಗರಾದ ನಾವೆಲ್ಲರೂ ಒಂದೇ ಎಂಬ ಸೌಹಾರ್ದ ಸಂದೇಶ ವನ್ನು ಸಾರುವ ಈ ರಥವು ಕನ್ನಡ ತಾಯಿ ಭುವನೇಶ್ವರಿ ಮತ್ತು ನಾಡಿನ ಪ್ರಸಿದ್ಧ ಕವಿಗಳ ಭಾವಚಿತ್ರದೊಂದಿಗೆ ಕರ್ನಾಟಕದ ಎಲ್ಲರ ಮನೆ, ಮನ ಬೆಳಗಲಿದೆ ಎಂದ ಅವರು, ಕನ್ನಡ ಭಾಷೆಗೆ 2000ಕ್ಕೂ ಅಧಿಕ ವರ್ಷಗಳ ಭವ್ಯ ಇತಿಹಾಸ ಇದ್ದು, ಕನ್ನಡ ಪರಂಪರೆಯನ್ನು ಉಳಿಸಿ, ಬೆಳೆಸುವ ಕೆಲಸ ಹೆಚ್ಚಾಗಬೇಕೆಂದರು.ತಹಸೀಲ್ದಾರ್ ಬಿ.ಎನ್. ಸ್ವಾಮಿ ಮಾತನಾಡಿ, ಸುಮಾರು 2000 ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕವು ಸಾಂಸ್ಕೃತಿಕ, ರಾಜಕೀಯ, ಶೈಕ್ಷಣಿಕವಾಗಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಅಂತಹ ಭವ್ಯ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವುದೇ ಈ ಕರ್ನಾಟಕ ಸಂಭ್ರಮ-50ರ ಆಶಯವಾಗಿದೆ ಎಂದರು. ಚಿಕ್ಕಬಳ್ಳಾಪುರ ತಾಲೂಕಿನಿಂದ ಹಂಡಿಗನಾಳ ಮೂಲಕ ಪ್ರವೇಶಿಸಿದ ಕನ್ನಡ ಜ್ಯೋತಿ ರಥಕ್ಕೆ ಅದ್ದೂರಿ ಸ್ವಾಗತ ನೀಡಲಾಯಿತು. ಶಾಲಾ ಮಕ್ಕಳು ಜ್ಞಾನಪೀಠ ಪ್ರಶಸ್ತಿ ವಿಜೇತರ ಭಾವಚಿತ್ರಗಳನ್ನು ಹಿಡಿದು, 40 ಅಡಿ ಉದ್ದದ ಕನ್ನಡ ಬಾವುಟದೊಂದಿಗೆ ಟಿಬಿ ರಸ್ತೆಯ ಮೂಲಕ ಕೋಟೆ ವೃತ್ತದಿಂದ ತಾಲ್ಲೂಕು ಕಚೇರಿ ಮಾರ್ಗವಾಗಿ ನ್ಯಾಯಾಲಯಗಳ ಸಂಕೀರ್ಣದಿಂದ ವಾಹನಗಳ ಮೂಲಕ ಕೋಟೆ ಸರ್ಕಲ್ ತಲುಪಿ ಅಲ್ಲಿಂದ ಮಯೂರ ಸರ್ಕಲ್ ಮಾರ್ಗವಾಗಿ ಕಾಲ್ನಡಿಗೆಯಲ್ಲಿ ಕನ್ನಡ ಜ್ಯೋತಿ ರಥದ ಮೆರವಣಿಗೆ ಮಾಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಕೋಡಿ ರಂಗಪ್ಪ ಕಾರ್ಯನಿರ್ವಹಣಾಧಿಕಾರಿ ನಾರಾಯಣ್, ಪೌರಾಯುಕ್ತ ಮಂಜುನಾಥ್, ಬಿಇಒ ನರೇಂದ್ರ ಕುಮಾರ್ ,ಆರಕ್ಷಕ ಉಪನಿರೀಕ್ಷಕ ಎಂ ಶ್ರೀನಿವಾಸ್, ನೌಕರರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಬಂಕ್ ಮುನಿಯಪ್ಪ, ಲಕ್ಷ್ಮೀನಾರಾಯಣ್, ಕಸಾಪ ತಾಲೂಕು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು.