ಸಾರಾಂಶ
ಲಕ್ಷ್ಮೇಶ್ವರ: ಕನ್ನಡ ಭಾಷೆಯು ಅತ್ಯಂತ ಶ್ರೇಷ್ಠ ಮತ್ತು ಶ್ರೀಮಂತ ಭಾಷೆಯಾಗಿದೆ. ಕನ್ನಡ ನಾಡಿನ ಇತಿಹಾಸ ಮತ್ತು ಪರಂಪರೆ ಉಳಿಸುವ ಕಾರ್ಯ ಮಾಡಬೇಕಾಗಿದೆ ಎಂದು ತಹಸೀಲ್ದಾರ್ ವಾಸುದೇವ ಸ್ವಾಮಿ ಹೇಳಿದರು.
ಪಟ್ಟಣದ ಉಮಾ ವಿದ್ಯಾಲಯದ ಕ್ರೀಡಾಂಗಣದಲ್ಲಿ ಕಸಾಪ ಹಾಗೂ ತಾಲೂಕಾಡಳಿತದ ವತಿಯಿಂದ ಶುಕ್ರವಾರ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕನ್ನಡ ಭಾಷೆಯು ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ. ಕನ್ನಡ ನಾಡಿನ ಶಿಲ್ಪಕಲೆ, ಸಾಹಿತ್ಯ ಅಮೋಘವಾಗಿದೆ. ಕನ್ನಡ ನಾಡನ್ನು ಆಳಿದ ಅನೇಕ ರಾಜ ಮನೆತನಗಳು ಕನ್ನಡ ಭಾಷೆಯ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿವೆ. ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ದೊರೆತಿರುವುದು ಕನ್ನಡ ಭಾಷೆಯ ಮೆರುಗು ಹೆಚ್ಚಿಸಿದೆ.ಕನ್ನಡ ನಾಡಿನ ಇನ್ನೂ ಹಲವು ಕವಿಗಳು, ಸಾಹಿತಿಗಳು ಜ್ಞಾನಪೀಠ ಪುರಸ್ಕಾರ ವಂಚಿತರಾಗಿದ್ದಾರೆ ಎನ್ನುವುದು ನೋವಿನ ಸಂಗತಿಯಾಗಿದೆ.ಕನ್ನಡ ಭಾಷೆಯಲ್ಲಿನ ಸಾಹಿತ್ಯ ಮನೆ ಮನೆಗೆ ತಲುಪಿಸುವ ಹಾಗೂ ವಿದ್ಯಾರ್ಥಿಗಳಲ್ಲಿ ಕನ್ನಡಾಭಿಮಾನ ಬೆಳೆಸುವ ಕಾರ್ಯವಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಮುಖ್ಯಾಧಿಕಾರಿ ಮಹೇಶ ಹಡಪದ, ಸಿಡಿಪಿಓ ಮೃತ್ಯುಂಜಯ ಗುಡ್ಡದಾನ್ವೇರಿ, ಶರಣು ಗೋಡಿ ಮಾತನಾಡಿದರು. ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ತಾಪಂ ಇಓ ಕೃಷ್ಣಪ್ಪ ಧರ್ಮರ, ಸಿಪಿಐ ನಾಗರಾಜ ಮಾಡಳ್ಳಿ, ಉಪತಹಸೀಲ್ದಾರ್ ಮಂಜುನಾಥ ಅಮಾಸಿ, ಚಂದ್ರಶೇಖರ ನರಸಮ್ಮನವರ, ಕೆ.ಎಸ್. ಜಲರೆಡ್ಡಿ, ಪಿಎಸ್ಐ ಈರಣ್ಣ ರಿತ್ತಿ, ಎಇಇ ಆಂಜನಪ್ಪ ಇದ್ದರು. ಈ ವೇಳೆ ಅಂಗನವಾಡಿ ಮಕ್ಕಳು ಕನ್ನಡ ನಾಡಿನ ಮಹಾನ್ ವ್ಯಕ್ತಿಗಳ ವೇಷಭೂಷಣ ಧರಿಸಿ ಕಂಗೊಳಿಸಿದ್ದು ಕಂಡು ಬಂದಿತು.
ನಂತರ ನಡೆದ ಕವಿಗೋಷ್ಠಿಯಲ್ಲಿ ಕನ್ನಡ ನಾಡು ನುಡಿಯ ಕುರಿತಾಗಿ ಹಲವಾರು ಕವಿಗಳು ಕವನ ವಾಚನ ಮಾಡಿದರು. ಕವಿಗೋಷ್ಠಿ ಉದ್ಘಾಟಿಸಿದ ತಹಸೀಲ್ದಾರ್ ವಾಸುದೇವ ಸ್ವಾಮಿ ಕವನ ವಾಚನ ಮಾಡಿದರು.ಕೆ.ಎಸ್. ಕೊಡ್ಲಿವಾಡ ಹಾಗೂ ಸಿ.ಜಿ. ಹೀರೇಮಠ ಕವಿಗೋಷ್ಠಿಯ ಕುರಿತು ಮಾತನಾಡಿದರು. ಬಿಆರ್‌ಸಿ ಬಿ.ಎಂ. ಯರಗುಪ್ಪಿ ಹಾಗೂ ನೇಕಾರ ಕಾರ್ಯಕ್ರಮ ನಿರ್ವಹಿಸಿದರು.