ಸಾರಾಂಶ
ದಾಂಡೇಲಿ: ಕನ್ನಡದ ಅಭಿಮಾನ ಎಂದರೆ ಅದು ನಮ್ಮ ಎದೆಯಲ್ಲಿ ನಿತ್ಯ ಧ್ವನಿಯಾಗಿರಬೇಕು. ರಕ್ತದ ಪ್ರತಿ ಹನಿಯಲ್ಲಿ ಹರಿಯುವಂತಾಗಿರಬೇಕು. ಆ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಿದ್ದು, ಕನ್ನಡ ಕಾರ್ತಿಕ: ಅನುದಿನ ಅನುಸ್ಪಂದನ ಶೀರ್ಷಿಕೆಯಡಿಯಲ್ಲಿ ನವೆಂಬರ್ ತಿಂಗಳಿಡೀ ಹಮ್ಮಿಕೊಂಡಿರುವ ಸರಣಿ ಕಾರ್ಯಕ್ರಮ ರಾಜ್ಯಕ್ಕೆ ಮಾದರಿ ಎಂದು ದಾಂಡೇಲಿಯ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಸ್ನೇಹಲ ಕಂಬದಕೋಣೆ ತಿಳಿಸಿದರು.ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ತಾಲೂಕು ಘಟಕಗಳ ಸಹಯೋಗದೊಂದಿಗೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನವೆಂಬರ್ ತಿಂಗಳಿಡಿ ಹಮ್ಮಿಕೊಂಡಿರುವ ಕನ್ನಡ ಕಾರ್ತಿಕ: ಅನುದಿನ- ಅನುಸ್ಪಂದನ ಕಾರ್ಯಕ್ರಮಕ್ಕೆ ಸಾಹಿತ್ಯ ಭವನದಲ್ಲಿ ಚಾಲನೆ ನೀಡಿ ಮಾತನಾಡಿದರು.ಕನ್ನಡ ಎಂದರೆ ಕೇವಲ ಭಾಷೆಯಲ್ಲ. ಅದು ನಮ್ಮ ಬದುಕಿನ ಭಾವ. ಅದು ನಮ್ಮ ಹೃದಯದ ಮಿಡಿತ. ನಮ್ಮ ಮಾತೃಭಾಷೆಯನ್ನು, ನಾಡ ಭಾಷೆಯನ್ನು ಗೌರವಿಸದೇ ಇದ್ದವನು ಎಷ್ಟೇ ಎತ್ತರಕ್ಕೆ ಏರಿದರೂ ವ್ಯರ್ಥ. ತಾಯಿ ಮತ್ತು ತಾಯಿ ಭಾಷೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದರು. ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಭೀಮಾಶಂಕರ ಅಜನಾಳ ಅವರು, ಕನ್ನಡ ಎಂಬುದು ಪ್ರತಿಯೊಬ್ಬ ಕನ್ನಡಿಗನ ಅಸ್ಮಿತೆ. ಅದು ನಿತ್ಯ ನಿರಂತರವಾಗಿ ಅನುರಣಿಸುತ್ತಿರಬೇಕು ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕನ್ನಡ ಕಾರ್ತಿಕ ಕಾರ್ಯಕ್ರಮವನ್ನು ನವೆಂಬರ್ ತಿಂಗಳಲ್ಲಿ ಹಮ್ಮಿಕೊಂಡು ಬಂದಿದ್ದು, ಇದು ಜನಮನವನ್ನು ತಲುಪುವಲ್ಲಿ ಸಾಧ್ಯವಾಗಿದೆ ಎಂದರು. ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಬಿಜೆಪಿ ಘಟಕದ ಅಧ್ಯಕ್ಷ ಬುದವಂತ ಗೌಡ ಪಾಟೀಲ್ ಕಾರ್ಯಕ್ರಮಕ್ಕೆ ಶುಭಾಶಯ ಕೋರಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ, ಆನೆಹೊಸೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ದಾಂಡೇಲಿ ಕಸಾಪದ ಗೌರವ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ ವಂದಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯ ಸುರೇಶ್ ಕಾಮತ್ ನಿರೂಪಿಸಿದರು. ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಪಾಲನಕರ, ಎಸ್.ಎಸ್. ಕುರ್ಡೇಕರ, ಕಲ್ಪನಾ ಪಾಟೀಲ್ ಸಹಕರಿಸಿದರು. ಸಾಹಿತಿ ದುಂಡಪ್ಪ ಗೂಳೂರ, ಹಿರಿಯ ಸದಸ್ಯರಾದ ಎಂ.ಆರ್. ನಾಯಕ, ಫಿರೋಜ್ ಪೀರಜಾದೆ, ಅನಿಲ ನಾಯ್ಕರ, ದಿವಾಕರ ನಾಯ್ಕ, ಅನಿಲ್ ದಂಡಗಲ, ರವಿ ಚೌಹಾಣ, ರಾಮಲಿಂಗ ಜಾದವ್, ಸಂತೋಷ ಗೂಳೂರ ಮುಂತಾದವರು ಉಪಸ್ಥಿತರಿದ್ದರು.