ಹಳಿಯಾಳ ತಾಲೂಕು ಬಹುಭಾಷಿಕರು ಮತ್ತು ವಿವಿಧ ಸಂಸ್ಕೃತಿಯ ಜನರು ಸೌಹಾರ್ದತೆಯಿಂದ ಬಾಳುತ್ತಿರುವ ಹೆಮ್ಮೆಯ ಕ್ಷೇತ್ರವಾಗಿದೆ.

ಹಳಿಯಾಳ: ಕನ್ನಡ ಕೇವಲ ಒಂದು ಭಾಷೆಯಲ್ಲ, ಅದು ನಮ್ಮ ಬದುಕು ಮತ್ತು ಸಂಸ್ಕೃತಿಯಾಗಿದೆ. ಕನ್ನಡದ ಅಸ್ಮಿತೆಯನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ಹಿರಿಯ ಶಾಸಕರು ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.

ತಾಲೂಕು ಆಡಳಿತ ಹಳಿಯಾಳದ ವತಿಯಿಂದ ಪಟ್ಟಣದಲ್ಲಿ ಭಾನುವಾರ ತಾಲೂಕಾಡಳಿತ ಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಳಿಯಾಳ ತಾಲೂಕು ಬಹುಭಾಷಿಕರು ಮತ್ತು ವಿವಿಧ ಸಂಸ್ಕೃತಿಯ ಜನರು ಸೌಹಾರ್ದತೆಯಿಂದ ಬಾಳುತ್ತಿರುವ ಹೆಮ್ಮೆಯ ಕ್ಷೇತ್ರವಾಗಿದೆ. ಇಲ್ಲಿನ ಜನರು ಭಾಷೆ, ಧರ್ಮಗಳ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕನ್ನಡದ ಒಗ್ಗಟ್ಟನ್ನು ಪ್ರದರ್ಶಿಸುತ್ತಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ನಮ್ಮ ದೈನಂದಿನ ವ್ಯವಹಾರಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಹಳಿಯಾಳ ತಹಸೀಲ್ದಾರ್ ಫಿರೋಜಷಾ ಸೋಮನಕಟ್ಟಿಯವರು ಧ್ವಜಾರೋಹಣ ನೆರವೇರಿಸಿದರು. ತಾಪಂ ಇಒ ವಿಲಾಸರಾಜ್ ಪ್ರಸನ್ನ್, ಬಿಇಒ ಪ್ರಮೋದ ಮಹಾಲೆ, ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು, ಕಸಾಪ ತಾಲೂಕು ಅಧ್ಯಕ್ಷೆ ಸುಮಂಗಲಾ ಅಂಗಡಿ, ಜಿಪಂ ಮಾಜಿ ಅಧ್ಯಕ್ಷ ಕೃಷ್ಣ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ದೇಮಾಣಿ ಶಿರೋಜಿ, ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಪುರಸಭಾ ಮಾಜಿ ಜನಪ್ರತಿನಿಧಿಗಳು ಇದ್ದರು.ಇಂಗ್ಲಿಷ್‌ ಭಾಷೆಗೆ ದಾಸರಾಗದಿರಿ

ಶಿರಸಿ: ಇಂಗ್ಲಿಷ್ ಭಾಷೆಗೆ ದಾಸನಾಗದೆ ಕನ್ನಡ ಭಾಷೆಗೆ ದಾಸರಾಗಿ. ನಮ್ಮ ದಿನನಿತ್ಯದ ವ್ಯವಹಾರಿಕ ಸಂಪರ್ಕದಲ್ಲಿ ಕನ್ನಡ ಭಾಷೆಯನ್ನು ಸದಾ ಬಳಸಿ. ಕನ್ನಡ ನಾಡಿನ ಸಂಸ್ಕೃತಿ, ಇತಿಹಾಸ ಸಾಹಿತ್ಯ, ಕಲೆ ಬೇರೆ ಯಾವ ದೇಶದಲ್ಲಿಯೂ ಇಲ್ಲ. ಅದನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸಿ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕರೆ ನೀಡಿದರು.ಅವರು ನಗರದ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ನಗರಸಭೆಯ ಆಶ್ರಯದಲ್ಲಿ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉದ್ಯೋಗಕ್ಕಾಗಿ ಎಲ್ಲ ಭಾಷೆಗಳನ್ನು ಕಲಿಯಿರಿ. ವಿದೇಶದಲ್ಲಿದ್ದರು ತಮ್ಮ ತಮ್ಮ ಮನೆಗಳಲ್ಲಿ ಕನ್ನಡ ಭಾಷೆ, ಕನ್ನಡದ ಸಿರಿವಂತಿಕೆ ಮತ್ತು ಕನ್ನಡದ ಹಬ್ಬಗಳ ವಿಶೇಷತೆ ಹಾಗೂ ಪ್ರದಾಯದ ಕುರಿತು ನಿಮ್ಮ ಮಕ್ಕಳಿಗೆ ತಿಳಿಸಿ ಎಂದರು.

ನಾವು ಕದಂಬರ ನಾಡಿನವರು. ಕದಂಬರ ನಾಡಿನಲ್ಲಿ ಹುಟ್ಟಿದ್ದೇವೆ. ಕದಂಬರು ಕನ್ನಡಕ್ಕೇ ನೀಡಿದ ಅಪಾರ ಕೊಡುಗೆಗಳನ್ನು ಸ್ಮರಿಸಿಕೊಂಡು ನಾವೆಲ್ಲರೂ ಕನ್ನಡ ನಾಡನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ವೇದಿಕೆಯಲ್ಲಿ ಬೇಡರ ವೇಷದ ಕುಣಿತವನ್ನು ರೋಶನ್ ಛಲವಾದಿ ಪ್ರಸ್ತುತಪಡಿಸಿ ನೆರೆದಿದ್ದ ಎಲ್ಲರನ್ನು ರಂಜಿಸಿದರು. ಈ ಸಂದರ್ಭದಲ್ಲಿ ಎಸಿ ಚಂದ್ರಶೇಖರ್ ಆರ್.ಜಿ., ಡಿವೈಎಸ್ಪಿ ಗೀತಾ ಪಾಟೀಲ್, ಗೀತಾ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ್ ಗೌಡ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿ.ಪಿ. ಸತೀಶ್, ನಗರಸಭೆ ಪೌರಾಯುಕ್ತ ಪ್ರಕಾಶ್ ಚನ್ನಪ್ಪನವರ್, ತಾಪಂ ಇಒ ಚನ್ನಬಸಪ್ಪ ಹಾವಣಗಿ, ಸುಮಾ ಉಗ್ರಣಕರ್, ಬಸವರಾಜ್ ಬಳ್ಳಾರಿ, ಬಸವರಾಜ್ ಬಂಡೇರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕಿರಣಕುಮಾರ್ ನಾಯ್ಕ್, ಮಹಾದೇವ ಛಲವಾದಿ, ಸಿಡಿಪಿಒ ನಂದಕುಮಾರ, ಡಿಡಿಪಿಐ ಡಿ.ಆರ್. ನಾಯ್ಕ್, ವಿವಿಧ ಕನ್ನಡಪರ ಸಂಘಟನೆಗಳು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತಹಸೀಲ್ದಾರ್ ಪಟ್ಟರಾಜಗೌಡ ಅವರು ಸ್ವಾಗತಿಸಿದರು. ಶ್ರೀಧರ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಪ್ರಮೀಳಾ ವಂದಿಸಿದರು.