ಕನ್ನಡ ಬರೀ ಭಾಷೆಯಲ್ಲ, ಸಂಸ್ಕೃತಿ: ಹರಿಪ್ರಕಾಶ ಕೋಣೆಮನೆ

| Published : Oct 04 2024, 01:02 AM IST

ಕನ್ನಡ ಬರೀ ಭಾಷೆಯಲ್ಲ, ಸಂಸ್ಕೃತಿ: ಹರಿಪ್ರಕಾಶ ಕೋಣೆಮನೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾಷೆಯನ್ನು ಶಾಸ್ತ್ರೀಯವಾಗಿ ಕಲಿತ ವಿದ್ಯಾರ್ಥಿಗಳಿಗೆ ಹಾಗೂ ಕಲಿಸುವ ಉಪನ್ಯಾಸಕರಿಗೆ ಮುಂಬರುವ ದಿನಗಳಲ್ಲಿ ಬೇಡಿಕೆ ಬರಲಿದೆ.

ಯಲ್ಲಾಪುರ: ಕನ್ನಡವೆಂಬುದು ಕೇವಲ ಭಾಷೆಯಾಗಿರದೇ ಅದು ಸಂಸ್ಕೃತಿಯೇ ಆಗಿದೆ. ಯಾವ ಭಾಷೆಯಲ್ಲಿ ಕೂಡಿಕೊಳ್ಳುವಿಕೆ ಇರುತ್ತದೆಯೋ ಆ ಭಾಷೆ ಬೆಳೆಯುತ್ತದೆ. ಅದಕ್ಕಾಗಿ ಭಾಷಾ ದ್ವೇಷಕ್ಕಿಂತ ಭಾಷಾ ಪ್ರೀತಿಯನ್ನು ಮೂಡಿಸಿಕೊಳ್ಳುವ ಅಗತ್ಯವಿದೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ತಿಳಿಸಿದರು.ಅ. ೨ರಂದು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾ ಕನ್ನಡ ಉಪನ್ಯಾಸಕರ ಸಂಘ ಆಯೋಜಿಸಿದ್ದ ಪಠ್ಯ ವಿಷಯಾಧಾರಿತ ಕಾರ್ಯಾಗಾರ ಉದ್ಘಾಟಿಸಿ ಉದ್ಘಾಟಿಸಿ ಮಾತನಾಡಿ, ಭಾಷೆಯನ್ನು ಶಾಸ್ತ್ರೀಯವಾಗಿ ಕಲಿತ ವಿದ್ಯಾರ್ಥಿಗಳಿಗೆ ಹಾಗೂ ಕಲಿಸುವ ಉಪನ್ಯಾಸಕರಿಗೆ ಮುಂಬರುವ ದಿನಗಳಲ್ಲಿ ಬೇಡಿಕೆ ಬರಲಿದೆ ಎಂದರು.ವಿಶ್ರಾಂತ ಪ್ರಾಚಾರ್ಯ ನಿತ್ಯಾನಂದ ಹೆಗಡೆ ಮಾತನಾಡಿ, ಕನ್ನಡ ಭಾಷೆ ಬಗೆಗಿನ ಪ್ರೀತಿ, ವಿಸ್ತಾರವಾದ ಅಧ್ಯಯನಗಳು ಕನ್ನಡ ಉಪನ್ಯಾಸಕರ ಲಕ್ಷಣವಾಗಿರಬೇಕು. ಒಂದು ಪಠ್ಯವನ್ನು ವಿದ್ಯಾರ್ಥಿಗಳಿಗೆ ಸಂವಹನ ಮಾಡುವಾಗ ತತ್ಸಮಾನ ಪಠ್ಯದ ವಿಮರ್ಶೆ ಮಾಡುವ ರೂಢಿ ಇಟ್ಟುಕೊಳ್ಳಬೇಕು ಎಂದರು. ಜಿಲ್ಲಾ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಬಿ. ರಾಮರಥ ಮಾತನಾಡಿ, ಎಲ್ಲೇ ಇದ್ದರೂ ಕನ್ನಡದ ಸೊಲ್ಲು ನಮ್ಮನ್ನು ಸೆಳೆಯುತ್ತಿರಬೇಕು. ಉಪನ್ಯಾಸಕರು ಶ್ರದ್ಧೆ, ಪ್ರಾಮಾಣಿಕ ಶ್ರಮದಿಂದ ಕನ್ನಡ ಪ್ರೀತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕೆಂದರು.ಪದವಿಪೂರ್ವ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಯ ಸ್ವರೂಪದ ಕುರಿತಾಗಿ ಹುಲೆಕಲ್ ಕಾಲೇಜಿನ ಕನ್ನಡ ಉಪನ್ಯಾಸಕ ಮೋಹನ್ ಶೇರೂಗಾರ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಎ.ಬಿ. ರಾಮರಥ, ಅಧ್ಯಕ್ಷರಾಗಿ ಮಹೇಶ್ ನಾಯಕ, ಉಪಾಧ್ಯಕ್ಷರಾಗಿ ದತ್ತಾತ್ರೇಯ ಗಾಂವ್ಕರ್ ಹಾಗೂ ಮೇಘನಾ ನಾಯಕ್, ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಹೆಗಡೆ ಅವರು ಸರ್ವಾನುಮತದಿಂದ ಆಯ್ಕೆಗೊಂಡರು. ಕಾರ್ಯಾಗಾರದಲ್ಲಿ ನಿವೃತ್ತ ಕನ್ನಡ ಉಪನ್ಯಾಸಕರನ್ನು ಸನ್ಮಾನಿಸಲಾಯಿತಲ್ಲದೇ, ದ್ವಿತೀಯ ವರ್ಷದ ಪದವಿಪೂರ್ವ ಪರೀಕ್ಷೆಯ ಕನ್ನಡ ವಿಷಯದಲ್ಲಿ ಶೇ. ೧೦೦ ಅಂಕ ಗಳಿಸಿದ ೧೭ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ರವೀಂದ್ರ ಗಾಂವ್ಕರ್ ನಿರ್ವಹಿಸಿದರು. ರಾಜೀವ್ ಹಾಗೂ ಶ್ರಾವ್ಯಾ ಭಟ್ಟ ಪ್ರಾರ್ಥಿಸಿದರು. ಮಹೇಶ್ ಭಾಗವತ್ ಅತಿಥಿಗಳನ್ನು ಪರಿಚಯಿಸಿದರು. ಮಹೇಶ್ ನಾಯಕ ವಂದಿಸಿದರು.