ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಖ್ಯಾತ ಕನ್ನಡ ನಿರೂಪಕಿ ನಟಿ ಅಪರ್ಣ ಅವರನ್ನು ಸ್ಮರಿಸಿದರೆ ಕನ್ನಡವನ್ನು ಗೌರವಿಸಿದಂತೆ ಎಂದು ಶ್ರೀಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್. ರವೀಂದ್ರ ತಿಳಿಸಿದರು.ಪಟ್ಟಣದ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಖ್ಯಾತ ನಿರೂಪಕಿ ಹಾಗೂ ನಟಿ ಅಪರ್ಣ ಅವರಿಗೆ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿ, ಅಪರ್ಣ ಅವರು ಕೇವಲ ನಿರೂಪಕಿಯಲ್ಲ. ಕನ್ನಡವನ್ನು ಆಸ್ವಾದಿಸುವ ಅನೇಕ ಕನ್ನಡ ಮನಸುಗಳ ಅನುರಣಿಸುವ ಧ್ವನಿಯಾಗಿದ್ದರು ಎಂದರು.
ಕನ್ನಡದ ಶ್ರೇಷ್ಠತೆಯನ್ನು ಕೇವಲ ನುಡಿಗಳಲ್ಲದೇ ಅಂತರಾಳದಲ್ಲಿ ಅಂತರ್ಗತವಾಗಿಸಿಕೊಂಡ ಎಂದೂ ಮರೆಯಲಾಗದ ಅನರ್ಘ್ಯ ಕೊಡುಗೆ ಅಪರ್ಣ. ಕರ್ನಾಟಕದ ಮನರಂಜನಾ ಉದ್ಯಮದಲ್ಲಿ ಅನುಸರಣೆಗೆ ಹಾಗೂ ಅನುಕರಣೆಗೆ ಮಾದರಿಯಾಗಿದ್ದರು ಎಂದು ಸ್ಮರಿಸಿದರು.ಅಪರ್ಣ ಅವರ ಕೊಡುಗೆಗಳು ರೇಡಿಯೊ, ದೂರದರ್ಶನ, ಚಲನಚಿತ್ರ ಸೇರಿದಂತೆ ಹತ್ತು ಹಲವು ವೇದಿಕೆಗಳಲ್ಲಿ ಪಸರಿಸಿದೆ. ರಾಜ್ಯಾದ್ಯಂತ ಬಸ್, ರೈಲು ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ ಹಲವು ಘೋಷಣೆಗಳ ಹಿಂದೆ ಮಾರ್ದನಿಸುವ ಸ್ತ್ರೀ ಧ್ವನಿ ಅಪರ್ಣ ಎಂಬ ಮೇರು ವ್ಯಕ್ತಿತ್ವದ್ದು. ಅವರು ತಮ್ಮ ಅಪಾರ ಅಭಿಮಾನಿಗಳು ಮತ್ತು ಕನ್ನಡ ಸಮುದಾಯದ ಹೃದಯದಲ್ಲಿ ಶ್ರೇಷ್ಠತೆಯ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಹಲವು ಮಜಲುಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಧೀಮಂತೆ ಎಂದು ಸಂತಾಪ ವ್ಯಕ್ತಪಡಿಸಿದರು.
ಸಂತಾಪ ಸಭೆಯಲ್ಲಿ ಅಧ್ಯಾಪಕರು ಮತ್ತು ಸಿಬ್ಬಂದಿ ತಮ್ಮ ನೆನಪುಗಳನ್ನು ಹಂಚಿಕೊಂಡು ಅಪರ್ಣ ಅವರ ಗಮನಾರ್ಹ ವೃತ್ತಿಜೀವನ ಮತ್ತು ಸ್ಫೂರ್ತಿದಾಯಕ ಜೀವನಕ್ಕೆ ಗೌರವ ಸಲ್ಲಿಸಿದರು. ಸಭೆಯಲ್ಲಿ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳೊಡಗೂಡಿ ಕೆಲ ನಿಮಿಷ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.ಬಿ.ಎ.ಮಧುಕುಮಾರ್‌ಗೆ ಶ್ರದ್ದಾಂಜಲಿ
ಭಾರತೀನಗರ:ಅಪಘಾತದಿಂದ ಮೃತಪಟ್ಟ ಕೃಷಿಕೂಲಿಕಾರ ಸಂಘದ ರಾಜ್ಯ ಸಮಿತಿ ಸದಸ್ಯ ಹಾಗೂ ಜಿಲ್ಲಾ ಸಹಕಾರ್ಯದರ್ಶಿ ಮತ್ತು ಯುವ ಪತ್ರಕರ್ತ ಬಿ.ಎ.ಮಧುಕುಮಾರ್ ಅವರಿಗೆ ಶ್ರದ್ಧಾಂಜಲಿ ಸಭೆ ಸಲ್ಲಿಸಲಾಯಿತು.ಕೃಷಿ ಕೂಲಿಕಾರರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ, ಚಿಕ್ಕವಯಸ್ಸಿನಲ್ಲೇ ತಂದೆ-ತಾಯಿ ಅವರನ್ನು ಕಳೆದುಕೊಂಡು ವಿದ್ಯಾಭ್ಯಾಸವನ್ನು ಸಹ ಕಷ್ಟದಿಂದಲೇ ಪಡೆದು ಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದರು. ಮಧು ಸಮಾಜದಲ್ಲಿ ನೊಂದವರ ಪರವಾಗಿ ಮನೆನಿವೇಶ, ಹಕ್ಕುಪತ್ರ, ರೇಷನ್‌ಕಾರ್ಡ್, ವೃದ್ದಾಪ್ಯ ವೇತನ, ಅಂಗವಿಕಲರ ವೇತನ ಸಂಬಂಧ ಪಟ್ಟಂತೆ ಫಲಾನುಭವಿಗಳಿಗೆ ಕೊಡಿಸಲು ಹೋರಾಟದ ಹಾದಿಯಲ್ಲಿ ಸಾಗುತ್ತಿದ್ದರು. ಇವರ ನಿಧನ ತುಂಬ ನೋವು ತಂದಿದೆ. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಕೋರಿದರು.ಈ ವೇಳೆ ಕೃಷಿಕೂಲಿ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮೇಶ್, ಮಳವಳ್ಳಿ ತಾಲೂಕು ಅಧ್ಯಕ್ಷ ಶಿವಮಲವಯ್ಯ, ಸಿಪಿಐಎಂ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಜನವಾದಿ ಮಹಿಳಾ ಸಂಘಟನೆ ಶೋಭಾ, ದಲಿತ ಸಂಘರ್ಷ ಸಮಿತಿಯ ಸದಸ್ಯ ಶಿವಲಿಂಗಯ್ಯ, ಟಿ.ಎಚ್.ಆನಂದ್, ಕಪೀನಿಗೌಡ, ನಾಗಮ್ಮ, ಶುಭಾವತಿ, ಕೆಆರ್‌ಪೇಟೆ ತಾಲೂಕು ಅಧ್ಯಕ್ಷ ಗಿರೀಶ್, ಎನ್.ಸುರೇಂದ್ರ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರ್ ಸೇರಿದಂತೆ ಹಲವರಿದ್ದರು.