ಭಾಷೆ ಕಲೆ ಸಾಹಿತ್ಯ ಸಮೃದ್ಧವಾಗಿರುವ ಕನ್ನಡ ನಾಡಿನಲ್ಲಿ ಹುಟ್ಟಿರುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕು ಎಂದು ಬಿ. ಜಿ. ಅನಂತಶಯನ ಹೇಳಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ ಸಮೃದ್ಧವಾಗಿರುವ ಕನ್ನಡನಾಡಿನಲ್ಲಿ ಹುಟ್ಟಿರುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕು ಎಂದು ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಅಭಿಪ್ರಾಯಪಟ್ಟರು.

ಶುಕ್ರವಾರದಂದು ಇಲ್ಲಿನ ಮಹಿಳಾ ಸಮಾಜದಲ್ಲಿ ಜಿಲ್ಲಾ ಕನ್ನಡ ಸಿರಿ ಸ್ನೇಹ ಬಳಗ ಹಾಗು ವಿವಿಧ ಸಂಘ–ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಶತಕಂಠ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

150 ವರ್ಷ ಪೂರೈಸಿದ ಬಕಿಮ್‌ಚಂದ್ರ ಚಟರ್ಜಿ ರಚಿಸಿರುವ "ವಂದೇ ಮಾತರಂ ", ವಿಶ್ವಮಾನವ ಕುವೆಂಪು ರಚಿಸಿದ "ಜಯ ಭಾರತ ಜನನಿಯ ತನುಜಾತೆ " ಉಯಿಲುಗೋಳ ನಾರಾಯಣರಾಯರು ರಚಿಸಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು " ಗೀತೆಗಳಿಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಶತಕಂಠ ಗಾಯನದ ಮೂಲಕ ಗೌರವ ಸಲ್ಲಿಸಲಾಯಿತು.

ಅಕ್ಷರಗಳು ಮತ್ತು ಪದಗಳಿಗೆ ಜೀವ ತುಂಬುವವರು ಹಾಡುಗಾರರು. ಹೀಗಾಗಿ ಹಾಡಿನ ಮೂಲಕ ವಂದೇ ಮಾತರಂ, ಜಯ ಭಾರತ ಜನನಿಯ ತನುಜಾತೆ ಮತ್ತು ಉದಯವಾಗಲಿ ನಮ್ಮ ಚಲುವ ಕನ್ನಡನಾಡು ಗೀತೆಗಳನ್ನು ಹಾಡುವ ಮೂಲಕ ಇಲ್ಲಿನ ಗಾಯಕರು ಹಿರಿಯ ಚೇತನಗಳಿಗೆ ಗೌರವ ಸಲ್ಲಿಸಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ನೇಹ ಬಳಗದ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ವಹಿಸಿದ್ದರು.

ವೇದಿಕೆಯಲ್ಲಿ ಬಳಗದ ತಾಲೂಕು ಅಧ್ಯಕ್ಷ ಎಚ್.ಜೆ.ಜವರ, ಮಹಿಳಾ ಸಮಾಜದ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾ ಕೋಶಾಧ್ಯಕ್ಷ ಎಸ್.ಎ.ಮುರುಳೀಧರ್ ಮತ್ತು ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷರು ಇದ್ದರು.