ಕನ್ನಡಕ್ಕೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಮತ್ತು ಶ್ರೀಮಂತ ಪರಂಪರೆ ಇದೆ. ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಬದುಕಿನ ಗುರುತು.
ಕುಂದಗೋಳ:
ಕನ್ನಡ ಭಾಷೆ ಭಾರತದ ಅತ್ಯಂತ ಶ್ರೀಮಂತ ಭಾಷೆಗಳಲ್ಲಿ ಒಂದಾಗಿದ್ದು, ಕನ್ನಡಿಗರ ಅಸ್ಮಿತೆ ಹಾಗೂ ಸಂಸ್ಕೃತಿಯ ಜೀವನಾಡಿಯಾಗಿದೆ ಎಂದು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪ ಸಂಚಾಲಕ ವೀರಣ್ಣ ಒಡ್ಡೀನ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ "ಹಚ್ಚೇವು ಕನ್ನಡದ ದೀಪ " ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಕ್ಕೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಮತ್ತು ಶ್ರೀಮಂತ ಪರಂಪರೆ ಇದೆ. ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಬದುಕಿನ ಗುರುತು. ಆದರೆ, ಜಾಗತೀಕರಣ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಮತ್ತು ಪರಭಾಷಾ ವ್ಯಾಮೋಹದಿಂದ ಕನ್ನಡಿಗರಲ್ಲಿ ಮಾತೃಭಾಷೆಯ ಮೇಲಿನ ಒಲವು ಕಡಿಮೆಯಾಗುತ್ತಿರುವುದು ವಿಷಾದನೀಯ. ಜಾಗತೀಕರಣ ಅನಿವಾರ್ಯವಾದರೂ ಸ್ಥಳೀಯ ಭಾಷೆ, ಸಂಪ್ರದಾಯ, ಕಲೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಮರೆಯಬಾರದು ಎಂದರು.ಕರ್ನಾಟಕ ವಿವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ವಿದ್ಯಾರ್ಥಿಗಳು ಕನ್ನಡದ ಸಾಂಸ್ಕೃತಿಕ ಹಿರಿಮೆಯನ್ನು ಕಾಪಾಡಬೇಕು. ಕನ್ನಡದ ಬಗ್ಗೆ ತಾತ್ಸಾರ ಮನೋಭಾವ ಬೆಳೆಸಿಕೊಳ್ಳದೆ, ಸ್ಪರ್ಧಾತ್ಮಕ ಯುಗಕ್ಕೆ ಅಗತ್ಯವಾದ ಸ್ಪರ್ಧಾ ಮನೋಭಾವ ಮತ್ತು ಸಂವಹನ ಕೌಶಲ ಬೆಳೆಸಿಕೊಂಡು ನಾಡು-ಸಮಾಜದ ಸೇವೆಗೆ ಸಿದ್ಧರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಎಸ್. ಶಿರಿಯಪ್ಪಗೌಡರ ಮಾತನಾಡಿದರು. ಹರ್ಲಾಪುರದ ಸಿವೈಸಿಡಿ ಕಲಾ ತಂಡದ ಶಂಭಯ್ಯ ಹಿರೇಮಠ ಮತ್ತು ಈಶ್ವರ ಅರಳಿ ನಾಡು-ನುಡಿಯ ಅಭಿಮಾನ ಮೂಡಿಸುವ ಗೀತೆಗಳನ್ನು ಪ್ರಸ್ತುತಪಡಿಸಿದರು.ಡಾ. ವಿ.ಸಿ. ಪಿಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಜಿನದತ್ತ ಹಡಗಲಿ, ಡಾ. ಗೀತಾ ಹಿರೇಮಠ, ಎಸ್.ಆರ್. ಮಟ್ಟಿ, ಡಾ. ಮುಳಗುಂದ, ಡಾ. ಎಸ್.ವಿ. ವಿಭೂತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಡಾ. ಎಸ್.ವಿ. ವಿಭೂತಿ ಸ್ವಾಗತಿಸಿದರು. ಡಾ. ವಿಜಯಕುಮಾರ ಎಂ. ನಿರೂಪಿಸಿ, ವಂದಿಸಿದರು.