ಕನ್ನಡ ಅತ್ಯಂತ ಪ್ರಾಚೀನ ಭಾಷೆ

| Published : Nov 06 2024, 11:54 PM IST / Updated: Nov 06 2024, 11:55 PM IST

ಸಾರಾಂಶ

ಸಾವಿರಾರು ಭಾಷೆಗಳಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನಮಾನ

ಶಿರಹಟ್ಟಿ: ೨ಸಾವಿರ ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಕನ್ನಡ ಭಾಷೆಯೇ ಅತ್ಯಂತ ಪ್ರಾಚೀನ ಭಾಷೆ. ತಮಿಳಿಗರು ತಮ್ಮ ಭಾಷೆ ಅತ್ಯಂತ ಪ್ರಾಚೀನ ಭಾಷೆ ಎಂದು ಪ್ರತಿಪಾದಿಸಿದರೂ ಭಾಷಾ ತಜ್ಞರ ಅಭಿಪ್ರಾಯದಂತೆ ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆಯಾಗಿದೆ ಎಂದು ಶಿಕ್ಷಕ ಎಚ್.ಎ. ಪಾಟೀಲ ಹೇಳಿದರು.

ತಾಲೂಕು ಕಸಾಪ ಘಟಕದಿಂದ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ತಾಲೂಕಿನ ರಣತೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕನ್ನಡ ಅತ್ಯಂತ ಪ್ರಾಚೀನ ಭಾಷೆ. ಕನ್ನಡ ಲಿಪಿಗಳ ರಾಣಿ ಎಂದು ಕರೆಯುವರು. ಸಾವಿರಾರು ಭಾಷೆಗಳಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನಮಾನವಿದೆ. ಆಧುನಿಕತೆಯ ಸೋಗಿನಲ್ಲಿ ಅನ್ಯ ಭಾಷೆಗಳ ಮೇಲೆ ವ್ಯಾಮೋಹ ಹೆಚ್ಚಾಗಿದೆ. ಇದರಿಂದ ಕನ್ನಡಕ್ಕೆ ಗಂಡಾಂತರವಿದೆ. ಆದ್ದರಿಂದ ನಾವೆಲ್ಲ ಕನ್ನಡ ಉಳಿಸಿ ಬೆಳೆಸಿ ರಕ್ಷಿಸಬೇಕೆಂದು ಕರೆ ನೀಡಿದರು.

ಭಾರತದ ಅತ್ಯಂತ ಪ್ರಭಾವಶಾಲಿ ಭಾಷೆಗಳಲ್ಲಿ ಕನ್ನಡ ಒಂದು ಪ್ರಚಂಡ ಭಾಷೆಯಾಗಿದೆ. ನಮ್ಮ ಪರಂಪರೆ ಕಲಿಯಲು ಮಾತೃಭಾಷೆ ಅಸ್ಮಿತೆ ಉಳಿಸಲು ನಾವು ಅದನ್ನು ಉಳಿಸಿಕೊಂಡು ಹೋಗಬೇಕಿದೆ. ಇಲ್ಲವಾದರೆ ನಮ್ಮನ್ನು ನಾವೇ ಆತ್ಮಹತ್ಯೆ ಮಾಡಿಕೊಂಡಂತಾಗುತ್ತದೆ ಎಂದರು.

ಕನ್ನಡ ಭಾಷೆಯು ಅತ್ಯಂತ ಶ್ರೇಷ್ಠ ಭಾಷೆಯಾಗಿದ್ದು, ವಿಶ್ವದ ಯಾವುದೇ ಭಾಷೆಗಳಿಗಿಂತ ಕನ್ನಡ ಭಾಷೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಭಾವನೆ ವ್ಯಕ್ತಪಡಿಸಲು ಸಾಧ್ಯವಿದೆ. ಇಂತಹ ಕನ್ನಡ ನಾಡಿನಲ್ಲಿ ಜನ್ಮ ಪಡೆಯುವ ಜತೆಯಲ್ಲಿ ಜೀವಿಸುವ ಹಕ್ಕು ಪಡೆದಿರುವುದು ಪುಣ್ಯ. ಕನ್ನಡ ಭಾಷೆಯಲ್ಲಿ ಮಾತನಾಡುವುದೇ ಹೆಮ್ಮೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ನವೀನ್‌ಕುಮಾರ್ ಅಳವಂಡಿ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ ಹಾಗೂ ಕನ್ನಡ ಸಾಹಿತ್ಯದ ಪರಿಚಯ ಮಕ್ಕಳಿಗೆ ಆರಂಭಿಕ ಹಂತದಲ್ಲಿ ಸಿಗಬೇಕು. ಕನ್ನಡ ಭಾಷೆ ಬಗೆಗಿನ ತಿರುಳನ್ನು ಮೊದಲು ನಾವೆಲ್ಲರೂ ಅರಿಯಬೇಕಾದ ಅವಶ್ಯಕತೆಯಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಪ್ರಪಂಚದಲ್ಲಿ ಅತ್ಯಂತ ಸರಳ ಹಾಗೂ ಸುಂದರ ಭಾಷೆ ಎನಿಸಿಕೊಂಡಿದೆ. ಕನ್ನಡ ಅಳಿವು ಉಳಿವಿಗಾಗಿ ಹೋರಾಡಿದ ಧೀಮಂತರ ಆದರ್ಶ ಹಾಗೂ ಜೀವನ ಚರಿತ್ರೆ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಉಣಬಡಿಸುವ ಕೆಲಸ ಆಗಬೇಕಿದೆ ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ನಮಗೆ ಸಾಕಷ್ಟು ಕೊಡುಗೆ ನೀಡಿದೆ. ವಿಶ್ವದ ಯಾವುದೇ ಭಾಷೆಯಾಗಿದ್ದರೂ ಆಡು ಭಾಷೆ ಪ್ರಚಲಿತದಲ್ಲಿದ್ದರೆ ಭಾಷೆ ಉಳಿಯಲು ಸಾಧ್ಯ. ದೇಶದಲ್ಲಿ ಸಾವಿರಕ್ಕೂ ಅಧಿಕ ಭಾಷೆಗಳಿದ್ದು, ನೂರಾರು ಭಾಷೆಗಳು ಲಿಖಿತ ರೂಪದಲ್ಲಿವೆ. ಕನ್ನಡ ಭಾಷೆಯು ವಿಶ್ವದ ಶ್ರೇಷ್ಠ ಭಾಷೆಗಳಲ್ಲಿ ಒಂದಾಗಿದ್ದು, ಅತ್ಯಂತ ಶ್ರೇಷ್ಟ ಸಾಹಿತ್ಯದಿಂದ ಕೂಡಿದೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆ ಉಳಿಸಿ ಬೆಳೆಸುವ ಕಾಯಕದಲ್ಲಿ ತೊಡಗಬೇಕು ಎಂದರು.

ಮುಖ್ಯೋಪಾಧ್ಯಾಯ ಗಂಗಾನಾಯಕ್ ಎಂ. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪಿ.ವಿ. ಹಿರೇಮಠ, ಕಾರ್ಯದರ್ಶಿ ಸತೀಶ್ ದೇಶಪಾಂಡೆ, ಉಪನ್ಯಾಸಕ ಕೊಟ್ರಯ್ಯ ಹೊಂಬಾಳ್ಮಠ, ನಿವೃತ್ತ ಶಿಕ್ಷಕ ಸಿ.ಎಂ. ಕದಡಿ ಸೇರಿ ಅನೇಕರು ಇದ್ದರು.