ಕನ್ನಡ ಜ್ಯೋತಿ ರಥ ಯಾತ್ರೆ 20 ರಂದು ಜಿಲ್ಲೆಗೆ ಪ್ರವೇಶ

| Published : Sep 13 2024, 01:39 AM IST

ಕನ್ನಡ ಜ್ಯೋತಿ ರಥ ಯಾತ್ರೆ 20 ರಂದು ಜಿಲ್ಲೆಗೆ ಪ್ರವೇಶ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಮ್ಮಿ ಕೊಂಡಿರುವ ಕರ್ನಾಟಕ ಸಂಭ್ರಮ 50 ಕಾರ್ಯಕ್ರಮದ ಅಂಗವಾಗಿ ಕನ್ನಡ ಜ್ಯೋತಿ ರಥ ಯಾತ್ರೆ ಇದೇ ಸೆ. 20 ರಂದು ನಮ್ಮ ಜಿಲ್ಲೆಗೆ ಪ್ರವೇಶ ಮಾಡಲಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದ್ದಾರೆ.

5 ಕ್ಷೇತ್ರಗಳಲ್ಲಿ ಸಂಚರಿಸುವ ಯಾತ್ರೆ । ಕರ್ನಾಟಕ ಸಂಭ್ರಮಕ್ಕೆ ಆಯೋಜಿಸಿರುವ ಕಾರ್ಯಕ್ರಮ: ಡಿಸಿ ಮೀನಾ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಮ್ಮಿ ಕೊಂಡಿರುವ ಕರ್ನಾಟಕ ಸಂಭ್ರಮ 50 ಕಾರ್ಯಕ್ರಮದ ಅಂಗವಾಗಿ ಕನ್ನಡ ಜ್ಯೋತಿ ರಥ ಯಾತ್ರೆ ಇದೇ ಸೆ. 20 ರಂದು ನಮ್ಮ ಜಿಲ್ಲೆಗೆ ಪ್ರವೇಶ ಮಾಡಲಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದ್ದಾರೆ.

ಕರ್ನಾಟಕ ಸಂಭ್ರಮ 50 ರ ಅಂಗವಾಗಿ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥ ಯಾತ್ರೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೆ. 20 ರಂದು ಬೇಲೂರು ಮಾರ್ಗವಾಗಿ ಆಗಮಿಸುವ ರಥವನ್ನು ಗಡಿ ಭಾಗದಲ್ಲಿ ಸ್ವಾಗತಿಸಿ ಹಿರೇಮಗಳೂರಿನಲ್ಲಿ ಬರ ಮಾಡಿಕೊಳ್ಳಲಾಗುವುದು ಎಂದ ಅವರು, 21 ರಂದು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬೆಳಿಗ್ಗೆ 9ಕ್ಕೆ ವಿವಿಧ ಕಲಾ ತಂಡಗಳು, ಕಲಾವಿದರು, ಶಾಸಕರು, ವಿವಿಧ ಜನ ಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಕನ್ನಡ ಪರ ಸಂಘಟನೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಸಾಂಸ್ಕೃತಿಕ ಸಂಘಗಳ ಪದಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸೇರಿ ಕನ್ನಡ ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಜಿಲ್ಲಾ ಪಂಚಾಯಿತಿವರೆಗೆ ಕರೆತಂದು ನಂತರ ಕಡೂರು ತಾಲೂಕಿಗೆ ಕಳುಹಿಸಲಾಗುವುದು ಎಂದರು. ಸೆ. 22 ಕಡೂರು, 23 ಎನ್‌.ಆರ್‌.ಪುರ, 25 ಕೊಪ್ಪ, 26 ಮೂಡಿಗೆರೆ ಒಟ್ಟು 5 ವಿಧಾನ ಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದು, 27 ರಂದು ಮೂಡಿಗೆರೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ನಿರ್ಗಮಿಸುವ ಈ ರಥ ಯಾತ್ರೆ ಸಂಚರಿಸುವ ತಾಲೂಕುಗಳಲ್ಲಿ, ಹಾದು ಹೋಗುವ ವಿವಿಧ ಗ್ರಾಮ ಪಂಚಾಯಿತಿಗಳು ಹಾಗೂ ಆಯಾಯ ಗ್ರಾಮದಲ್ಲಿ ವಿಶೇಷವಾಗಿ ಬರ ಮಾಡಿಕೊಂಡು ಬೀಳ್ಕೊಡುವುದು ಆಯಾಯ ತಾಲೂಕು ತಹಸೀಲ್ದಾರ್, ತಾಪಂ ಇ.ಒ , ಸಂಬಂಧಪಟ್ಟ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿ ಆ ಭಾಗದ ಶಾಸಕರು ಜನ ಪ್ರತಿನಿಧಿಗಳು ಸಂಘ ಸಂಸ್ಥೆ, ಕನ್ನಡ ಪರ ಸಂಘಟನೆಗಳು, ಕಸಾಪ ಸಾರ್ವಜನಿಕರು ಸೇರಿ ಬಹಳ ಕಾರ್ಯಕ್ರಮ ಯಶಸ್ವಿಗೊಳಿಸಲು ಸೂಚಿಸಿದರು.

ಈ ಕನ್ನಡ ಜ್ಯೋತಿ ರಥ ಯಾತ್ರೆ ರಾಜ್ಯಾದ್ಯಂತ ಸಂಚರಿಸಿ ನವೆಂಬರ್ 1 ರಂದು ಬೆಂಗಳೂರು ತಲುಪಲಿದೆ. ಹೆಸರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರತಿಯೊಬ್ಬರು ಪಾಲ್ಗೊಂಡು ವಿಜೃಂಭಣೆಯಿಂದ ಆಚರಿಸಲು ಎಲ್ಲ ಸಿದ್ಧತೆ ಮಾಡುವಂತೆ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಜವಾಬ್ದಾರಿ ನೀಡಿ ಸಮಿತಿಗಳನ್ನು ನೇಮಿಸಲಾಗಿದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಿ. ರಮೇಶ್‌ ಕಾರ್ಯಕ್ರಮದ ರೂಪುರೇಷೆಗಳ ಮಾಹಿತಿ ಸಭೆಗೆ ನೀಡಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎಚ್.ಎಸ್. ಕೀರ್ತನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿಗಳಾದ ದಲ್ಜಿತ್ ಕುಮಾರ್, ಡಾ. ಕಾಂತರಾಜ್, ಕಸಾಪ ಅಧ್ಯಕ್ಷ ಅಜ್ಜಂಪುರ ಸೂರಿ ಶ್ರೀನಿವಾಸ್ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. 12 ಕೆಸಿಕೆಎಂ 1ಕರ್ನಾಟಕ ಸಂಭ್ರಮ 50 ರ ಅಂಗವಾಗಿ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥ ಯಾತ್ರೆ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಮೀನಾ ನಾಗರಾಜ್‌ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು.