ಕಂಪ್ಲಿಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯ ಕಂಪು

| Published : Nov 21 2023, 12:45 AM IST

ಕಂಪ್ಲಿಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯ ಕಂಪು
Share this Article
  • FB
  • TW
  • Linkdin
  • Email

ಸಾರಾಂಶ

ಎಮ್ಮಿಗನೂರು ಗ್ರಾಮದಿಂದ ಆರಂಭಗೊಂಡ ಜ್ಯೋತಿ ರಥಯಾತ್ರೆ ಮೆರವಣಿಗೆ ನೆಲ್ಲುಡಿ, ನೆಲ್ಲುಡಿ ಕೋಟಾಲ್ ಮಾರ್ಗವಾಗಿ ಪಟ್ಟಣಕ್ಕೆ ಆಗಮಿಸಿತು. ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಆಡಳಿತ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ವತಿಯಿಂದ ರಥಕ್ಕೆ ಅದ್ಧೂರಿ ಸ್ವಾಗತ ಕೋರಲಾಯಿತಲ್ಲದೆ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಶಿವರಾಜ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಕಂಪ್ಲಿ

ಪಟ್ಟಣಕ್ಕೆ ಸೋಮವಾರ ಆಗಮಿಸಿದ ಕರ್ನಾಟಕ- 50ರ ಸಂಭ್ರಮದ ಜ್ಯೋತಿ ರಥಯಾತ್ರೆಗೆ ವಿವಿಧ ಇಲಾಖೆಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ತಾಲೂಕಿನ ಎಮ್ಮಿಗನೂರು ಗ್ರಾಮದಿಂದ ಆರಂಭಗೊಂಡ ಜ್ಯೋತಿ ರಥಯಾತ್ರೆ ಮರವಣಿಗೆ ನೆಲ್ಲುಡಿ, ನೆಲ್ಲುಡಿ ಕೋಟಾಲ್ ಮಾರ್ಗವಾಗಿ ಪಟ್ಟಣಕ್ಕೆ ಆಗಮಿಸಿತು. ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಆಡಳಿತ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ವತಿಯಿಂದ ರಥಕ್ಕೆ ಅದ್ಧೂರಿ ಸ್ವಾಗತ ಕೋರಲಾಯಿತಲ್ಲದೆ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಶಿವರಾಜ್ ಚಾಲನೆ ನೀಡಿದರು.

ಡೊಳ್ಳು ಕುಣಿತ, ಹಗಲು ವೇಷಗಾರರು, ತಾಷ ರಾಮ್ ಡೋಲ್ ಸೇರಿದಂತೆ ವಿವಿಧ ರೀತಿಯ ಮಂಗಳವಾದ್ಯಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರು, ವಚನಕಾರರು, ದಾರ್ಶನಿಕರು, ಮಹಾನ್ ನಾಯಕರ ವೇಷಭೂಷಣಗಳನ್ನು ತೊಟ್ಟ ಮಕ್ಕಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದರು. ಪಟ್ಟಣದ ಎಲ್ಲೆಡೆ ಕನ್ನಡಪರ ಘೋಷವಾಕ್ಯಗಳು ಮೊಳಗಿದವಲ್ಲದೆ, ಕನ್ನಡ ಜ್ಯೋತಿ ರಥಯಾತ್ರೆ ಕಂಪ್ಲಿಯಲ್ಲಿ ಕನ್ನಡದ ಕಂಪನ್ನು ಸೂಸಿತು.

ಈ ಸಂದರ್ಭದಲ್ಲಿ ತಾಪಂ ಇಒ ಶ್ರೀಕುಮಾರ್, ಎಡಿ ಕೆ.ಎಸ್. ಮಲ್ಲನಗೌಡ, ಪುರಸಭೆ ಮುಖ್ಯ ಅಧಿಕಾರಿ ಕೆ.ಎಸ್. ದುರ್ಗಣ್ಣ, ಉಪತಹಸೀಲ್ದಾರ್ ರವೀಂದ್ರ ಕುಮಾರ್, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರಾದ ಕೆ.ಎಂ. ಹೇಮಯ್ಯ ಸ್ವಾಮಿ, ಬಿ.ವಿ. ಗೌಡ, ಸಿ.ಆರ್. ಹನುಮಂತ, ಡಾ. ಎ.ಸಿ. ದಾನಪ್ಪ, ಷಣ್ಮುಖಪ್ಪ ಚಿತ್ರಗಾರ್, ಬಿ. ಅಂಬಣ್ಣ, ಕರೆಕಲ್ ಮನೋಹರ, ಅಂಬಿಗರ ಮಂಜುನಾಥ್, ಎಸ್.ಡಿ. ಬಸವರಾಜ್, ಕೆ. ರಮೇಶ್, ಬಡಿಗೇರ್ ಜಿಲಾನ್ ಸಾಬ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಶಾಲಾ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.