ಲಿಟ್‌ ಫೆಸ್ಟ್‌ ಸಾಹಿತ್ಯ ಜಾತ್ರೆಯಲ್ಲಿ ಕನ್ನಡದ ಕರಲವ ‘ಚಿಣ್ಣರ ಅಂಗಳ’!

| Published : Jan 21 2024, 01:34 AM IST

ಲಿಟ್‌ ಫೆಸ್ಟ್‌ ಸಾಹಿತ್ಯ ಜಾತ್ರೆಯಲ್ಲಿ ಕನ್ನಡದ ಕರಲವ ‘ಚಿಣ್ಣರ ಅಂಗಳ’!
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಕಳ ಜೇಸಿ ಆಂಗ್ಲ ಮಾಧ್ಯಮ ಶಾಲಾ ಕನ್ನಡ ಶಿಕ್ಷಕಿ, ಯೂಟ್ಯೂಬ್‌ ಮೂಲಕ ಆಟವಾಡುತ್ತಾ ಚಿಣ್ಣರನ್ನು ಮೋಡಿಮಾಡುವ ವಂದನಾ ರೈ ತನ್ನದೇ ಶೈಲಿಯಲ್ಲಿ ಕುಣಿದು ಕುಪ್ಪಳಿಸುತ್ತಾ ಮಕ್ಕಳೊಂದಿಗೆ ಬೆರೆತು ಕಲಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನಲ್ಲಿ ನಡೆಯುತ್ತಿರುವ 6ನೇ ಲಿಟ್‌ ಫೆಸ್ಟ್‌-2024ರ ಎರಡನೇ ದಿನ ಶನಿವಾರ ಗಮನ ಸೆಳೆದದ್ದು ಹರಟೆ ಕಟ್ಟೆಯಲ್ಲಿ ನಡೆದ ಮೊದಲ ಕಾರ್ಯಕ್ರಮ ಚಿಣ್ಣರ ಅಂಗಳ. ಲಿಟ್‌ ಫೆಸ್ಟ್‌ ಸಾಹಿತ್ಯಿಕವಾಗಿ ನಡೆಯುತ್ತಿದ್ದರೆ, ಅದಕ್ಕೆ ಪೂರಕವಾಗಿ ಕನ್ನಡ ಮಾಧ್ಯಮ ಶಾಲೆಗಳ ಉಳಿವಿನ ದಿಶೆಯಲ್ಲಿ ಕನ್ನಡ ಭಾಷೆ ಬಗ್ಗೆ ಎಳವೆಯಲ್ಲೇ ಮಕ್ಕಳಿಗೆ ಪ್ರೀತಿ, ಅಭಿಮಾನ ಮೂಡಿಸುವ ಕಾರ್ಯಕ್ರಮವಾಗಿ ಇದು ಹೊಸ ಮೇಲ್ಪಂಕ್ತಿ ಹಾಕಿಕೊಟ್ಟಿತು.

ಕಾರ್ಕಳ ಜೇಸಿ ಆಂಗ್ಲ ಮಾಧ್ಯಮ ಶಾಲಾ ಕನ್ನಡ ಶಿಕ್ಷಕಿ, ಯೂಟ್ಯೂಬ್‌ ಮೂಲಕ ಆಟವಾಡುತ್ತಾ ಚಿಣ್ಣರನ್ನು ಮೋಡಿಮಾಡುವ ವಂದನಾ ರೈ ತನ್ನದೇ ಶೈಲಿಯಲ್ಲಿ ಕುಣಿದು ಕುಪ್ಪಳಿಸುತ್ತಾ ಮಕ್ಕಳೊಂದಿಗೆ ಬೆರೆತು ಕಲಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನ್ನಡ ಮಾಧ್ಯಮ ಶಾಲೆಯ ಪುಟಾಣಿಗಳು ವಂದನಾ ರೈ ಅವರೊಂದಿಗೆ ಚಿನ್ನಾಟ ಆಡಿದರು. ನಲಿ-ಕಲಿ ಪರಿಕಲ್ಪನೆಯನ್ನು ಸಾಕಾರಗೊಳಿಸಿದರು. ಪುಟಾಣಿಗಳು ನಲಿಯುತ್ತಾ ಕಲಿತರೆ, ಬೇಗ ಅರ್ಥ ಮಾಡಿಕೊಳ್ಳುತ್ತಾರೆ. ಹಾಗಾಗಿ ತಾನೇ ರಚಿಸಿದ ಅನೇಕ ಹಾಡುಗಳ ಮೂಲಕ ಮಕ್ಕಳೊಂದಿಗೆ ಒಂದಾಗಿ ಬೆರೆತರು. ಬೆಳಗ್ಗಿನಿಂದ ಮಧ್ಯಾಹ್ನ ವರೆಗಿನ ಅವಧಿಯಲ್ಲಿ ಈ ಕಾರ್ಯಕ್ರಮ ಪೂರ್ತಿ ಮಕ್ಕಳದ್ದೇ ಕರಲವ ಕೇಳಿಬಂತು. ಮಕ್ಕಳ ಜತೆಗೆ ಶಿಕ್ಷಕರು ಹಾಗೂ ಪೋಷಕರೂ ಹೆಜ್ಜೆ ಹಾಕಿದರು. ಈ ಮೂಲಕ ಕನ್ನಡದ ಕಂಪನ್ನು ಮತ್ತೆ ಪಸರಿಸುವ ಕಾಯಕಕ್ಕೆ ವಂದನಾ ನಾಂದಿ ಹಾಡಿದರು. ಇವರ ಜತೆ ಉಪನ್ಯಾಸಕಿ ವಿದ್ಯಾ ಶೇಡಿಗುಮ್ಮೆ ಸಮನ್ವಯಕಾರರಾಗಿದ್ದರು.

ಸೃಜನಶೀಲತೆಯ ಕ್ಲೇ ವರ್ಕ್‌ಶಾಪ್‌

ಲಿಟ್‌ ಫೆಸ್ಟ್‌-2024ರಲ್ಲಿ ಮಕ್ಕಳ ಸೃಜನಶೀಲ ಚಟುವಟಿಕೆಗೆ ವೇದಿಕೆ ಒದಗಿಸಿದ್ದು ಕ್ಲೇ ವರ್ಕ್‌ ಶಾಪ್‌. ಅಂದರೆ ಮಣ್ಣಿನಿಂದ ನಾನಾ ಕಲೆಗಳನ್ನು ಚಿತ್ರಿಸುವ ಕಾರ್ಯಾಗಾರ.

ಲಿಟ್‌ ಫೆಸ್ಟ್‌ನ ಹೊರ ಆವರಣದಲ್ಲಿ ಗೋಕರ್ಣದ ರವಿ ಗುನಗ ಹಾಗೂ ಅವರ ತಂಡ ಮಡ್ ಆರ್ಟ್‌ನ್ನು ಮಕ್ಕಳಿಗೆ ಪರಿಚಯಿಸುವ ಕೆಲಸ ಮಾಡುತ್ತಿದೆ. ಲಿಟ್‌ ಫೆಸ್ಟ್‌ಗೆ ಆಗಮಿಸುವ ವಿದ್ಯಾರ್ಥಿಗಳು ಮಾತ್ರವಲ್ಲ ಹಿರಿಯರು, ಪೋಷಕರು ಕೂಡ ಈ ಕ್ಲೇ ವರ್ಕ್‌ ಶಾಪ್‌ ನೋಡಿ ತಲೆದೂಗುತ್ತಿದ್ದಾರೆ. ಮಣ್ಣಿನಿಂದ ವಿವಿಧ ಮಾದರಿಯ ಕಲಾಕೃತಿಗಳನ್ನು ಈ ತಂಡ ರೂಪಿಸುತ್ತಿದೆ. ಕಲಾಕೃತಿಗಳಿಗೆ ಆಕರ್ಷಕವಾಗಿ ಬಣ್ಣ ಬಳಿದು ಅವುಗಳನ್ನು ಮಾರಾಟ ಮಾಡಲಾಗುತ್ತಿದೆ. ಲಿಟ್‌ ಫೆಸ್ಟ್‌ನಲ್ಲಿ ತುಳು ಭಾಷಾ ಪ್ರೇಮ!

ಎಲ್ಲ ಭಾಷೆಗಳಿಗೂ ಒತ್ತು ನೀಡುವ ಮೂಲಕ ಅರ್ಥಪೂರ್ಣ ನಾಡುಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಭಾರತ್ ಫೌಂಡೇಷನ್‌ ಹಾಗೂ ಮಿಥಿಕ್ ಸೊಸೈಟಿಯ ಆಶಯದಂತೆ ಕರಾವಳಿಯ ತುಳು ಭಾಷಾ ಪ್ರೇಮವನ್ನು ಸಾರಲು ಪ್ರತ್ಯೇಕ ವೇದಿಕೆಯನ್ನು ಮಾಡಿಕೊಡಲಾಗಿದೆ.

ಮಂಗಳೂರಿನ ಜೈ ತುಳುನಾಡು ಸಂಘಟನೆ ಅಧ್ಯಕ್ಷ ನಿರಂಜನ ರೈ ನೇತೃತ್ವದಲ್ಲಿ ಫಲಕದಲ್ಲಿ ತುಳು ಲಿಪಿಯನ್ನು ಪರಿಚಯಿಸುವ ಮೂಲಕ ತುಳು ಭಾಷೆಗೆ ವಿಶೇಷ ಮನ್ನಣೆಯನ್ನು ನೀಡುವ ಕಾರ್ಯ ನಡೆಯುತ್ತಿದೆ. ಈ ಸಂಘಟನೆ ತುಳು ಭಾಷೆಗಾಗಿ ಪ್ರತ್ಯೇಕ ಆ್ಯಪ್‌, ಲಿಪ್ಯಂತರ, ತುಳು ಚಾರ್ಟ್‌, ಕಲಿಕಾ ಪುಸ್ತಿಕೆ ಮುಂತಾದ ಸಾಧನೆಗಳನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ. ತುಳು ಬರೆಯುವುದನ್ನು ಕಲಿಸಲು ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದು ಲಿಪಿ ಶಿಕ್ಷಕಿ ಗೀತಾ ಲಕ್ಷ್ಮೇಶ್‌ ತಿಳಿಸುತ್ತಾರೆ.

ಪುಸ್ತಕ ಮಳಿಗೆಯಲ್ಲೂ ರಾಮ ಹವಾ!

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಯ ಸಡಗರಕ್ಕೆ ಪೂರಕ ಎಂಬಂತೆ ಲಿಟ್‌ ಫೆಸ್ಟ್‌ ಪುಸ್ತಕ ಮಳಿಗೆಯಲ್ಲೂ ರಾಮ ಹವಾ ಕಂಡುಬಂದಿದೆ.

ಅಯೋಧ್ಯಾ ಪಬ್ಲಿಕೇಷನ್ ಹೆಸರಿನಲ್ಲಿ ಪುಸ್ತಕದ ಸ್ಟಾಲ್‌ ಇದ್ದು, ಅದರಲ್ಲಿ ಅಯೋಧ್ಯೆ ಶ್ರೀರಾಮನಿಗೆ ಸಂಬಂಧಿಸಿದ ಎಲ್ಲ ರೀತಿಯ ಪುಸ್ತಕಗಳನ್ನು ಇರಿಸಲಾಗಿದೆ. ರಾಷ್ಟ್ರೋತ್ಥಾನ ಸಾಹಿತ್ಯ, ಸ್ವಪ್ನಾ ಬುಕ್‌ ಸ್ಟಾಲ್‌, ನವ ಕರ್ನಾಟಕ ಪಬ್ಲಿಕೇಷನ್‌, ದೇಶೀಯ ಗೋ ಉತ್ಪನ್ನ ಮಳಿಗೆಗಳೂ ಇಲ್ಲಿವೆ.