ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ: ಡಾ.ಕೆ.ಜಿ.ಕಾಂತರಾಜ್

| Published : Nov 02 2024, 01:25 AM IST

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ: ಡಾ.ಕೆ.ಜಿ.ಕಾಂತರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಕನ್ನಡ ಭಾಷೆ, ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಒಂದು ಮಹತ್ವವಿದೆ ಎಂದು ಉಪವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ಹೇಳಿದ್ದಾರೆ.

ತರೀಕೆರೆಯಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಕನ್ನಡ ಭಾಷೆ, ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಒಂದು ಮಹತ್ವವಿದೆ ಎಂದು ಉಪವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ಹೇಳಿದ್ದಾರೆ. ಶುಕ್ರವಾರ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ತರೀಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆಯುವ ಮೂಲಕ ನಾಡಿನ ಗೌರವ ಹೆಚ್ಚಿಸಿದೆ. ಕನ್ನಡ ರಾಜ್ಯೋತ್ಸವ ಪ್ರತಿಯೊಬ್ಬರ ಮನಸ್ನನ್ನು ಉಲ್ಲಾಸಿತಗೊಳಿಸುತ್ತದೆ. ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಮತ್ತು ವಿಜೃಂಭಣೆಯಿಂದ ಎಲ್ಲಡೆ ಆಚರಿಸಲಾಗುತ್ತದೆ. ನಿರಂತರವಾಗಿ ಕನ್ನಡ ಭಾಷೆ ಬಳಸಿ ಬೆಳೆಸಬೇಕು ಎಂದು ಹೇಳಿದರು.

ಶಾಸಕ ಜಿ.ಎಚ್.ಶ್ರೀನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕ ರಾಜ್ಯವನ್ನು ಒಗ್ಗೂಡಿಸಿದ ಮಹನೀಯರನ್ನು ಸ್ಮರಿಸಿ ಕೊಳ್ಳಬೇಕು. ಮೈಸೂರು ರಾಜ್ಯಕ್ಕೆ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರು ಕರ್ನಾಟಕ ಎಂದು ಪುನರ್ ನಾಮಕರಣ ಮಾಡಿದರು. ಎಲ್ಲಾ ಕಡೆ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದು ಹೇಳಿದರು.ತರೀಕೆರೆ ಪಟ್ಟಣದಲ್ಲಿ 7 ವರೆ ಕೋಟಿ ಗಳಲ್ಲಿ ಪುರಸಭಾ ಕಚೇರಿ ನೂತನ ಕಟ್ಟಡ ನಿರ್ಮಿಸಲಾಗುವುದು. ಪಟ್ಟಣದಲ್ಲಿ 24X7 ಕುಡಿಯುವ ನೀರು ಸರಬರಾಜು ಯೋಜನೆ ಜಾರಿಗೆ ತರಲಾಗುವುದು. ಬಯಲು ರಂಗ ಮಂದಿರದಲ್ಲಿ ಒಂದುವರೆ ಸಾವಿರ ಜನರು ಕೂರಬಹುದಾದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಹೇಳಿದರು.ಅಜ್ಜಂಪುರದಲ್ಲೂ ನೂತನ ಬಸ್ ಸ್ಟ್ಯಾಂಡ್, ಅಗ್ನಿಶಾಮಕ ದಳ ಕಚೇರಿ ನಿರ್ಮಿಸಲಾಗುವುದು, ಜನರಿಗೆ ನಿವೇಶನ ಮತ್ತು ಮನೆ ಹಕ್ಕು ಪತ್ರಗಳನ್ನು ವಿತರಿಸಬೇಕು. ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ವಸಂತಕುಮಾರ್ ಮಾತನಾಡಿ ಕನ್ನಡ ರಾಜ್ಯೋತ್ಸವ ಎಂಬುದು ಪ್ರತಿ ಮನೆ ಮನೆಗಳಲ್ಲಿ ನಿತ್ಯ ಬಳಸಿ ಬೆಳೆಸುವ ಮೂಲಕ ನಿತ್ಯೋತ್ಸವವಾಗಬೇಕು. ಎಲ್ಲರಲ್ಲಿಯೂ ಕನ್ನಡ ಪ್ರೇಮ ಜಾಗೃತಗೊಳಿಸಬೇಕು. ಕನ್ನಡ ನಮ್ಮ ಉಸಿರಾಗಲಿ, ಕನ್ನಡಾಂಬೆ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಹೇಳಿದರು.

ಪುರಸಭೆ ಉಪಾಧ್ಯಕ್ಷೆ ಗಿರಿಜ ಪ್ರಕಾಶ್ ವರ್ಮ ಮಾತನಾಡಿ ಕನ್ನಡ ಭಾಷೆ ಚಂದ, ಕನ್ನಡ ನಾಡು ಚೆಂದ, ಕನ್ನಡ ನುಡಿ ಚಂದ, ಕನ್ನಡ ನಾಡು ನುಡಿಗೆ ತನ್ನದೇ ಆದ ಶ್ರೀಮಂತಿಕೆ ಇದೆ. ಕನ್ನಡ ನಮ್ಮ ಉಸಿರಾಗಬೇಕು ಎಂದು ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಮಾತನಾಡಿ ನಾಡು ನುಡಿ ಬಗ್ಗೆ ಹೋರಾಟ ಮಾಡಿದ ಮಹನೀಯರನ್ನು ನೆನಪಿಸಿ ಕೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ತು 100ವರ್ಷಗಳ ಇತಿಹಾಸ ಹೊಂದಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ಕನ್ನಡವನ್ನು ಬೆಳೆಸಬೇಕು ಎಂದ ಅವರು ಕವನ ವಾಚಿಸಿದರು.

ಸಾಧಕರಿಗೆ ಸನ್ಮಾನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತಹಸೀಲ್ದಾರ್ ವಿಶ್ವಜೀತ ಮೇಹತಾ, ಪೋಲೀಸ್ ಉಪಾಧೀಕ್ಷಕ ಹಾಲಮೂರ್ತಿರಾವ್, ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ದೇವೇಂದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮತ್ತಿತರರು ಭಾಗವಹಿಸಿದ್ದರು.

1ಕೆಟಿಆರ್.ಕೆ.2ಃ ತರೀಕೆರೆಯಲ್ಲಿ ತಾಪಂ ಪುರಸಭೆ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ಜಿ. ಕಾಂತರಾಜ್ ಧ್ವಜಾರೋಹಣ ನೆರವೇರಿಸಿದರು. ಶಾಸಕ ಜೆ.ಎಚ್.ಶ್ರೀನಿವಾಸ್, ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಗಿರಿಜ ಪ್ರಕಾಶ್ ವರ್ಮ, ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ತಹಸೀಲ್ದಾರ್ ವಿಶ್ವಜೀತ ಮೇಹತಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ. ದೇವೇಂದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮತ್ತಿತರರು ಇದ್ದರು.