ಸಾರಾಂಶ
- ಮಂತ್ರಾಲಯದಲ್ಲಿ ಅಂತಾರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಶತಮಾನಗಳಷ್ಟು ಪುರಾತನ ಹಿನ್ನೆಲೆಯಿರುವ ನಮ್ಮ ಪ್ರಾಚೀನ ಭಾಷೆ ಕನ್ನಡದ ಶಾಸನಗಳ ಕುರುಹುಗಳು ದೇಶದ ಬಹುತೇಕ ರಾಜ್ಯಗಳಲ್ಲಿ ಪತ್ತೆಯಾಗಿವೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧ್ಯಕ್ಷ ಶ್ರೀ ಸುಬುಧೇಂದ್ರ ತೀರ್ಥರು ನುಡಿದರು.
ಆಂಧ್ರ ಪ್ರದೇಶದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಗುರುರಾಜ ಸಭಾಂಗಣದಲ್ಲಿ ಶುಕ್ರವಾರ ಚಿಕ್ಕಮಗಳೂರು ಜಿಲ್ಲೆ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಗೋವಾದ ಅಂತಾರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ತು ಪ್ರಥಮ ಸಮ್ಮೇಳನ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.ಸಾಹಿತ್ಯ ಕ್ಷೇತ್ರಕ್ಕೆ ಕರ್ನಾಟಕ, ಆಂಧ್ರ ಸೇರಿದಂತೆ ಇತರೆ ರಾಜ್ಯಗಳ ಅನೇಕ ರಾಜ ಮಹಾರಾಜರು ಅರಸರು ಅಪಾರ ಕೊಡುಗೆ ನೀಡಿದ್ದಾರೆ. ಗಡಿನಾಡು ಬಳ್ಳಾರಿ ಹಾಗೂ ಮಂತ್ರಾಲಯದ ಸುತ್ತಮುತ್ತಲು ಕನ್ನಡ ಅತಿ ಹೆಚ್ಚು ಪ್ರೀತಿ ಪಾತ್ರವಾಗಿ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಮೂಲತಃ ತುಂಗಭದ್ರ ನದಿ ಕರ್ನಾಟಕದಿಂದ ಆಂಧ್ರಪ್ರದೇಶದ ಕಡೆ ಸಾಗಿದಂತೆ, ಕನ್ನಡ ಭಾಷಾಭಿಮಾನ ಆಂಧ್ರದಲ್ಲೂ ನೆಲೆಯೂರಲು ಸಾಧ್ಯವಾಗಿದೆ ಎಂದು ಹೇಳಿದರು.ಇಂದಿಗೂ ಆಂಧ್ರಪ್ರದೇಶದ ರುದ್ರ ಭೂಮಿಯಲ್ಲಿ ಕನ್ನಡಕ್ಕೆ ಸಂಬಂಧಪಟ್ಟ ಶಾಸನಗಳು ದೊರೆತಿವೆ. ಅದರಂತೆ ಕೇರಳ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕನ್ನಡದ ಭಾಷೆ ಒಳಗೊಂಡ ಕುರುಹುಗಳು ಸಿಕ್ಕಿರುವುದು ಗಮನಿಸಿದರೆ ಕನ್ನಡ ಪ್ರೀತಿ ಇಡೀ ದೇಶಾದ್ಯಂತ ಹಬ್ಬಿರುವುದು ವ್ಯಕ್ತವಾಗಿದೆ ಎಂದು ತಿಳಿಸಿದರು.
ಇಂದಿಗೂ ಆಂಧ್ರಪ್ರದೇಶದ ಅನೇಕ ಜಿಲ್ಲೆಗಳಲ್ಲಿ ಸರ್ಕಾರಿ ಹುದ್ದೆ ಸೇರಿದಂತೆ ಜನಪ್ರತಿನಿಧಿಗಳಾದ ಕನ್ನಡಿಗರು ತಮ್ಮದೇ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೆ ಆಂಧ್ರದ ಮುಖ್ಯಮಂತ್ರಿಗಳ ಕಾರ್ಯಾಲಯಗಳಲ್ಲಿ ಕನ್ನಡಿಗರು ಕೆಲಸ ನಿರ್ವಹಿಸಿ ಕೊಂಡು ಕನ್ನಡದ ಪ್ರೀತಿಯನ್ನು ಎಲ್ಲೆಡೆ ಬೆಳೆಸುತ್ತಿದ್ದಾರೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಶ್ರೀ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಶ್ರೀ ಮಠದ ಗುರು ರಾಘವೇಂದ್ರ ಸ್ವಾಮಿಗಳು ತಮಿಳುನಾಡಿನಲ್ಲಿ ಜನಿಸಿದವರು. ಕನ್ನಡವನ್ನು ಮಾತೃ ಭಾಷೆಯಾಗಿ ಅಳವಡಿಸಿಕೊಂಡು ''''''''ಇಂದು ಎನಗೆ ಗೋವಿಂದ'''''''' ಎಂಬ ಕೃತಿಯನ್ನು ಕನ್ನಡದಲ್ಲಿ ರಚಿಸಿದ್ದರು. ಇದಾದ ಬಳಿಕ ತಮ್ಮ ಕಾರ್ಯ ವ್ಯಾಪ್ತಿಯನ್ನು ಆಂಧ್ರಪ್ರದೇಶದ ಮಣ್ಣಿನಲ್ಲಿ ನೆಲೆಕಂಡವರು ಎಂದು ಹೇಳಿದರು.
ರಾಷ್ಟ್ರದ ಹಲವಾರು ರಾಜ್ಯಗಳಲ್ಲಿ ಆಯಾ ಮಾತೃಭಾಷೆಗಳಿವೆ, ಅವುಗಳು ಕನ್ನಡಿಗರಿಗೆ ಚಿಕ್ಕಮ್ಮ ದೊಡ್ಡಮ್ಮನಂತೆ. ಕನ್ನಡ ತಾಯಿಭಾಷೆಯಾಗಿದ್ದು, ಹೆಚ್ಚಿನ ಬಾಂಧವ್ಯವನ್ನು ಕನ್ನಡಕ್ಕೆ ಕನ್ನಡಿಗರು ಕೊಡಬೇಕು ಎಂದು ತಿಳಿಸಿದರು.ಚಿಕ್ಕಮಗಳೂರು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಪಂಚರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಒಂದು ದೊಡ್ಡ ಮೈಲಿಗಲ್ಲು ಸೃಷ್ಟಿಸಿದೆ. ನಾಡು ಕಟ್ಟುವ ಕಾಯಕದಲ್ಲಿ ಕನ್ನಡಿಗರು ಕಾಯಕಲ್ಪದಡಿ, ಹೊಸ ಚಿಂತನೆ ಯಡಿ ವಿನೂತನವಾಗಿ ಮಾಡಿ ನಾಡಿನ ಭಾಷೆಯನ್ನು ಗಗನದೆತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಗೋವಾ ಸಮುದ್ರದ ಮಧ್ಯದ ಹಡಗಿನಲ್ಲಿ ರಾಜ್ಯಮಟ್ಟದ ಸಮ್ಮೇಳನ ಹಮ್ಮಿಕೊಳ್ಳುವ ಉದ್ದೇಶವಿದ್ದು, ಇದೊಂದು ಟೀಕಾಕಾರರಿಗೆ ಕನ್ನಡ ಭಾಷೆ ಕಟ್ಟುವ ಮೂಲಕ ಸರಿಯಾದ ಉತ್ತರ ನೀಡಲಾಗಿದೆ ಎಂದು ತಿಳಿಸಿದರು.ಕಸಾಪ ಪ್ರಥಮ ಕನ್ನಡ ಸಿರಿ ಪ್ರಶಸ್ತಿ ಚಿಕ್ಕಮಗಳೂರು ಜಿಲ್ಲೆಯಿಂದ ಆರಂಭಗೊಂಡು ಗಡಿ ದಾಟಿ ಆಂಧ್ರದಲ್ಲಿ ಕಾರ್ಯಕ್ರಮ ನಡೆಸಿ ಪ್ರಶಸ್ತಿ ವಿತರಿಸುವ ಕಾರ್ಯ ಮಾಡಲಾಗಿದೆ ಎಂದರು.
ಸಮ್ಮೇಳನ ಅಧ್ಯಕ್ಷ ಡಾ. ಪ್ರದೀಪ್ ಕುಮಾರ್ ಹೆಬ್ರಿ ಮಾತನಾಡಿ, ಗಡಿನಾಡ ಕನ್ನಡ ಶಾಲೆಗಳು ಸಂಘಟನೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕರ್ನಾಟಕ ಸರ್ಕಾರದಿಂದ ವಿಶೇಷ ನೆರವು ಮತ್ತು ಆದ್ಯತೆ ನೀಡಬೇಕು. ಕಲಾವಿದರು, ಸಂಘಟಕರು ಹಾಗೂ ಶಿಕ್ಷಣ ಮಾರ್ಗದರ್ಶಿಗಳಿಗೆ ಗೌರವ ದೊರೆಯಬೇಕು ಎಂದು ಹೇಳಿದರು.ಕನ್ನಡಿಗರು ಮಾತೃಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಬದುಕುತ್ತಿರುವುದು ಅವರ ಕನ್ನಡದ ಪ್ರೀತಿ ಹಾಗೂ ಕನ್ನಡದ ಶಕ್ತಿಗೆ ಸಾಕ್ಷಿಯಾಗಿದೆ. ಅವರ ಹೋರಾಟಕ್ಕೆ ನಾವೆಲ್ಲರೂ ಧ್ವನಿ ಆಗಬೇಕು ಆದ್ದರಿಂದ ಸರ್ಕಾರ ಆ ಬೇಡಿಕೆಗಳನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ರಾಜ್ಯ ಗೌರವ ಕಾರ್ಯದರ್ಶಿ ಡಾ. ಬಿ.ಎಂ ಪಟೇಲ್ ಪಾಂಡು, ತೆಲಂಗಾಣ ಘಟಕ ಅಧ್ಯಕ್ಷ ಡಾ. ಗುಡಗುಂಟಿ ವಿಠ್ಠಲ್ ಜೋಶಿ, ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ದಯಾನಂದ್, ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ನಗರಾಧ್ಯಕ್ಷ ಸಚಿನ್ ಸಿಂಗ್, ಕಸಾಪ ಮುಖಂಡರಾದ ಜಿ.ಟಿ. ಸುಬ್ರಹ್ಮಣ್ಯ, ಗಣೇಶ್ ಹೆಗಡೆ, ಕಿರಣ್ ಕುಮಾರ್, ಪಟೇಲ್ ರವಿಚಂದ್ರನ್, ಎಸ್. ಪರಮೇಶ್, ಎಂ. ಎನ್. ಕಾಂತರಾಜು, ಶಕುಂತಲಮ್ಮ, ಗಾಯಿತ್ರಿ ರಾಜಣ್ಣ ಉಪಸ್ಥಿತರಿದ್ದರು.22 ಕೆಸಿಕೆಎಂ 1ಆಂಧ್ರ ಪ್ರದೇಶದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಗುರುರಾಜ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಂತಾರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪೀಠಾಧ್ಯಕ್ಷರಾದ ಶ್ರೀ ಸುಬುಧೇಂದ್ರ ತೀರ್ಥರು ಉದ್ಘಾಟಿಸಿದರು. ಡಾ. ಮಹೇಶ್ ಜೋಶಿ, ಡಾ. ಪ್ರದೀಪ್ ಕುಮಾರ್ ಹೆಬ್ರಿ, ಡಾ.ಬಿ.ಎಂ. ಪಟೇಲ್ ಪಾಂಡು ಇದ್ದರು.