ಸಾರಾಂಶ
ಸಂಡೂರು: ಕನ್ನಡ ಭಾಷೆಯ ಕೇವಲ ಸಂವಹನದ ಸಾಧನವಲ್ಲ. ಅದು ನಮ್ಮ ಅಸ್ತಿತ್ವದ ಪ್ರತಿಬಿಂಬ. ಇಂದಿನ ತಂತ್ರಜ್ಞಾನ ಯುಗದಲ್ಲೂ ಕನ್ನಡವನ್ನು ಜೀವಂತವಾಗಿಡುವುದು ನಮ್ಮೆಲ್ಲರ ಕರ್ತವ್ಯ ಎಂದು ಕಸಾಪ ರಾಜ್ಯ ಘಟಕದ ನಿಕಟಪೂರ್ವ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಬಿಕೆಜಿ ಸಮೂಹ ಸಂಸ್ಥೆಗಳಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.ಕನ್ನಡ ಸಾಹಿತ್ಯದ ಬೆಳವಣಿಗೆ ಕುರಿತು ಮಾತನಾಡಿದ ಅವರು, ಪಂಪ, ರನ್ನ, ಪೊನ್ನು ಮುಂತಾದ ಕವಿಗಳು ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಭದ್ರ ಬುನಾದಿಯನ್ನು ಹಾಕಿದರು. ಕನ್ನಡ ಸಾಹಿತ್ಯದ ಹೆಮ್ಮೆ ವಚನ ಸಾಹಿತ್ಯ. ವಚನ ಸಾಹಿತ್ಯವು ಮಾನವೀಯತೆ, ಸಮಾನತೆ, ಸ್ತ್ರೀಯರಿಗೆ ಗೌರವ ಕಲ್ಪಿಸಿತು. ಬಸವಣ್ಣನವರು ವಚನ ಚಳವಳಿಯ ನೇತೃತ್ವ ವಹಿಸಿದ್ದರು. ಪುರಂದರ ದಾಸ ಮುಂತಾದ ದಾಸ ಶ್ರೇಷ್ಠರು ತಮ್ಮ ದಾಸ ಸಾಹಿತ್ಯದ ಮೂಲಕ ದುಡಿಮೆ ಹಾಗೂ ಭಕ್ತಿಯ ಮಹತ್ವವನ್ನು ತಿಳಿಸಿ, ಅವುಗಳ ಮೂಲಕ ಉದ್ಧಾರವಾಗುವ ಮಾರ್ಗವನ್ನು ಸಾರಿದರು ಎಂದರು.
ಇಂತಹ ಅಂಶಗಳನ್ನು ಎಲ್ಲರೂ ತಿಳಿಯಬೇಕು. ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಸಂರಕ್ಷಿಸಲು, ಬೆಳೆಸಲು ಶ್ರಮಿಸಿದವರನ್ನು ಹಾಗೂ ನಾಡಿನ ಏಕೀಕರಣಕ್ಕಾಗಿ ದುಡಿದ ಮಹನೀಯರಿಗೆ ನಾವು ನಮಿಸಿ, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಾಡಿನ ಅಭಿವೃದ್ಧಿಗೆ ಶ್ರಮಿಸೋಣ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಘಟಕದ ಅಧ್ಯಕ್ಷ ಬಿ.ನಾಗನಗೌಡ ಮಾತನಾಡಿ, ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿಜಯನಗರ ಸಾಮ್ರಾಜ್ಯ, ಸಾಲು ಮರದ ತಿಮ್ಮಕ್ಕನ ಯಶೋಗಾಥೆಯ ರೂಪಕಗಳು, ವೀರಗಾಸೆ, ಕಂಸಾಳೆ, ಗೊರವಯ್ಯನ ಕುಣಿತ, ಯಕ್ಷಗಾನ, ಕರಗ ಕುಣಿತ, ಡೊಳ್ಳು ಕುಣಿತ, ಕೀಲು ಕುದುರೆ ಕುಣಿತ, ಕಾಂತಾರ ಚಿತ್ರದ ನೃತ್ಯ ಮುಂತಾದವುಗಳು ನೋಡುಗರಿಂದ ಚಪ್ಪಾಳೆ ಗಿಟ್ಟಿಸಿದವು.ಬಿಕೆಜಿ ಸಮೂಹ ಸಂಸ್ಥೆಗಳ ಸಂಸ್ಥಾಪಕಿ ಬಿ. ಕಮಲಮ್ಮ, ಪ್ರಾಚಾರ್ಯ ಕೆ.ವಿ. ಮೋಹನ್ ರಾವ್, ಉಪ ಪ್ರಾಚಾರ್ಯ ಸಂತೋಷ್ ಜಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಕೆಜಿ ಸಮೂಹ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳ ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಡೂರಿನ ಬಿಕೆಜಿ ಸಮೂಹ ಸಂಸ್ಥೆಗಳ ಆವರಣದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿಜೇತರಾದ ಬಿಕೆಜಿ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.;Resize=(128,128))
;Resize=(128,128))