ಕನ್ನಡ ಭಾಷೆ ವಿಶ್ವ ಭಾಷೆಗಳ ರಾಣಿ: ಜ. ಸದಾಶಿವಾನಂದ ಶ್ರೀಗಳು

| Published : Nov 22 2024, 01:17 AM IST

ಕನ್ನಡ ಭಾಷೆ ವಿಶ್ವ ಭಾಷೆಗಳ ರಾಣಿ: ಜ. ಸದಾಶಿವಾನಂದ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಷರಗಳನ್ನು ದುಂಡಾಗಿ ಬರೆಯುವ ವಿಧಾನ ಯಾವುದಾದರೂ ಭಾಷೆಯಲ್ಲಿದ್ದರೆ ಅದು ಕನ್ನಡದಲ್ಲಿ ಮಾತ್ರ. ಇಂತಹ ಭಾಷೆ ಹಲವು ಕಾರಣಗಳಿಂದಾಗಿ ಅಳಿವಿನ ಅಂಚಿನಲ್ಲಿದೆ

ಗದಗ: ಭಾರತದ ಎಲ್ಲ ಭಾಷೆ, ಲಿಪಿಗಳನ್ನು ಅಧ್ಯಯನ ಮಾಡಿದ ಭಾಷಾ ತಜ್ಞ ಆಚಾರ್ಯ ವಿನೋಭಾ ಭಾವೆ ಅವರು ಕನ್ನಡ ಭಾಷೆ ವಿಶ್ವ ಭಾಷೆಗಳ ರಾಣಿ ಎಂದು ಬಣ್ಣಿಸಿದ್ದಾರೆ. ಕನ್ನಡ ಭಾಷೆಯ ಹಿರಿಮೆ ಗರಿಮೆ ಬಹು ದೊಡ್ಡದು ಎಂದು ಶಿವಾನಂದ ಬೃಹನ್ಮಠದ ಜ. ಸದಾಶಿವಾನಂದ ಸ್ವಾಮಿಗಳು ಹೇಳಿದರು.

ನಗರದ ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್ ಹಾಗೂ ಅಪ್ಪುರಾಜ್ ಇವೆಂಟ್ಸ್ ಆಶ್ರಯದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ-2024 ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಧಕ ಮಹನೀಯರಿಗೆ ಕನ್ನಡರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅಕ್ಷರಗಳನ್ನು ದುಂಡಾಗಿ ಬರೆಯುವ ವಿಧಾನ ಯಾವುದಾದರೂ ಭಾಷೆಯಲ್ಲಿದ್ದರೆ ಅದು ಕನ್ನಡದಲ್ಲಿ ಮಾತ್ರ. ಇಂತಹ ಭಾಷೆ ಹಲವು ಕಾರಣಗಳಿಂದಾಗಿ ಅಳಿವಿನ ಅಂಚಿನಲ್ಲಿದೆ. ಪರಿಶುದ್ಧ ಕನ್ನಡ ಮಾತನಾಡುವುದು, ಬರೆಯುವುದು ಕಷ್ಟವಾಗುತ್ತಿದೆ. ಇದ್ದ ಸರ್ಕಾರಿ ಕನ್ನಡ ಶಾಲೆಗಳ ಬಾಗಿಲು ಮುಚ್ಚಿಕೊಂಡು ಕನ್ನಡ ನಾಡಿನಲ್ಲಿ ಕನ್ನಡ ಹೊರತು ಅನ್ಯಭಾಷೆಗಳ ಶಾಲೆಗಳು ತೆರೆದುಕೊಳ್ಳುತ್ತಿವೆ.

ಜ್ಞಾನಾರ್ಜನೆಗೆ ಇತರ ಭಾಷೆಗಳು ಅಗತ್ಯ. ಆದರೆ ಅವೇ ಮುಖ್ಯವಾಗಬಾರದು. ಕನ್ನಡ ಭಾಷೆಗೆ ಆದ್ಯತೆ ದೊರೆಯಬೇಕು. ಸುಂದರ, ಮಧುರ, ಮಂಜುಳವಾದ ಕನ್ನಡ ಭಾಷೆ ಇನ್ನಷ್ಟು ಸಮೃದ್ಧಗೊಳ್ಳಬೇಕು. ಕನ್ನಡ ಔಪಚಾರಿಕ ಭಾಷೆಯಾಗಿ ನೇಪಥ್ಯಕ್ಕೆ ಉಳಿದಿದೆ ಎಂದರು.

ಭಾಷೆ ಸಂಸ್ಕೃತಿಯ ವಾಹಕ. ಒಂದು ಭಾಷೆ ನಿಧಾನವಾಗಿ ನಾಶಗೊಳ್ಳುವುದಾದರೆ ಅದು ಸಂಸ್ಕೃತಿಯನ್ನೇ ನಾಶಗೊಳಿಸಿದಂತೆ. ಆದ್ದರಿಂದ ಕನ್ನಡಿಗರಾದ ನಾವು ಶುದ್ಧ ಕನ್ನಡ ಮಾತನಾಡಬೇಕು. ಶುದ್ಧವಾಗಿ ಕನ್ನಡ ಬರೆಯಬೇಕಾಗಿರುವುದು ಎಂದಿಗಿಂತ ಇಂದು ಅವಶ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ ಜ.ಪಂಚಾಚಾರ್ಯ ಮಾಂಗಲ್ಯ ಮಂದಿರದ ಗೌರವಾಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಮಾತನಾಡಿ, ಈ ಸಂಸ್ಥೆಯು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಸಂಯೋಜಿಸಿ ಜನಮುಖಿ, ಸಮಾಜಮುಖಿ ಕಾರ್ಯ ಮಾಡುತ್ತಿದೆ. ಈ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಿವೆ ಎಂದರು.

ಈ ವೇಳೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಜಿ.ಬಿ. ಬಿಡಿನಹಾಳ, ಭೂದಾನಿ ಕೊಪ್ಪಳದ (ಕುಣಿಕೇರಿ) ಹುಚ್ಚಮ್ಮ, ಶಿರಹಟ್ಟಿಯ ರಿಯಾಜ್‌ಅಹ್ಮದ್ ಡಾಲಾಯತ್, ಸಮಾಜ ಸೇವಕ ಡಾ. ಆರ್.ಜೆ. ರಶೀದ್, ಬಾಲಪ್ರತಿಭೆ ಹಾವೇರಿ (ಆಡೂರ) ಅನುಷಾ ಹಿರೇಮಠ ಅವರಿಗೆ ಕನ್ನಡ ರತ್ನ ಪ್ರಶಸ್ತಿಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.

ಗಣ್ಯರಾದ ತಾತನಗೌಡ ಪಾಟೀಲ, ಶಿವಯ್ಯ ನಾಲತ್ವಾಡಮಠ, ರಾಜು ಗುಡಿಮನಿ, ಅಕ್ಬರಸಾಬ್‌ ಬಬರ್ಚಿ, ರಾಜು ಕುರಡಗಿ, ಎಸ್.ಎಚ್. ಶಿವನಗೌಡ್ರ, ಬಸವರಾಜ ತಿರ್ಲಾಪುರ, ಸಂತೋಷ ತೋಟಗಂಟಿಮಠ, ವಿಜಯಕುಮಾರ ಹಿರೇಮಠ, ಇರ್ಫಾನ ಡಂಬಳ ಇದ್ದರು.

ಅಪ್ಪುರಾಜ ಭದ್ರಕಾಳಮ್ಮನಮಠ ಸ್ವಾಗತಿಸಿದರು. ನಾಶೀರ್ ಚಿಕೇನಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಆರ್.ಜೆ. ರಶೀದ್ ಕಾರ್ಯಕ್ರಮ ನಿರೂಪಿಸಿದರು. ಶಿವಯೋಗಿ ಟೆಂಗಿನಕಾಯಿ ವಂದಿಸಿದರು.