ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಅಂದು ಕನ್ನಡ ನಾಡು ಅನ್ಯಭಾಷಾ ಪ್ರಾಂತ್ಯಗಳ ಹಿಡಿತಕ್ಕೆ ಸಿಲುಕಿ ಪರಭಾಷೆಗಳ ಪ್ರಭಾವಕ್ಕೊಳಗಾಗಿ ಹರಿದು ಹಂಚಿ ಹೋಗಿದ್ದ ಸಂದರ್ಭದಲ್ಲಿ ಕನ್ನಡ ನಾಡು ನುಡಿಯ ಸಂರಕ್ಷಣೆ, ಕನ್ನಡ ಪುಸ್ತಕಗಳ ಪ್ರಕಟಿಸುವುದು, ಜನಮಾನಸದಲ್ಲಿ ಕನ್ನಡ ಹಿರಿಮೆ ಗರಿಮೆ ತಿಳಿಸಿ, ಕನ್ನಡ ಜಾಗೃತಿಯನ್ನುಂಟು ಮಾಡುವ ಉದ್ದೇಶದೊಂದಿಗೆ ೧೯೧೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದೆ ಎಂದು ರಬಕವಿ ಶ್ರೀಘಟ್ಟಗಿ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಚೇರಮನ್ ಬಿ.ಎಂ. ಮಟ್ಟಿಕಲ್ಲಿ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಜಿಲ್ಲಾ ಘಟಕ ಬಾಗಲಕೋಟೆ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ರಬಕವಿ-ಬನಹಟ್ಟಿ ವಲಯಗಳು:ತೇರದಾಳ, ಮಹಾಲಿಂಗಪುರ ಇವರು ರಬಕವಿಯ ಶ್ರೀಘಟ್ಟಗಿ ಬಸವೇಶ್ವರ ದೇವಸ್ಥಾನ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ೧೧೧ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ ವಿಷಯವಾಗಿ ಮಾತನಾಡಿ, ಕಸಾಪ ಅನುಸರಿಸುತ್ತಿರುವ ಧ್ಯೇಯಧೋರಣೆಗಳು ಕನ್ನಡ ನಾಡು ನುಡಿಗಾಗಿ ಕಾರ್ಯಕ್ರಮಗಳ ಆಯೋಜನೆ, ಕನ್ನಡ ಸಾಹಿತ್ಯ ಸಮ್ಮೇಳನಗಳು ಇನ್ನೂ ಹೆಚ್ಚು ಅರ್ಥವತ್ತಾಗಿ ನಡೆಯುವಂತೆ ಮಾಡುವ ಅಗತ್ಯವಿದೆ. ಕನ್ನಡ ಭಾಷೆ ನಗರಗಳಿಗಿಂತ ಹೆಚ್ಚಾಗಿ ಗ್ರಾಮೀಣ ಜನರಿಂದ ಉಳಿದುಕೊಂಡಿದೆ ಎಂದು ಹೇಳಿದರು.
ರಬಕವಿ ವರ್ತಕ ಬಸವರಾಜ ಬಿಲವಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ರಬಕವಿ-ಬನಹಟ್ಟಿ ತಾಲೂಕು ಘಟಕದ ಮ.ಕೃ. ಮೇಗಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ವಿಶಿಷ್ಟ ಕಾರ್ಯಕ್ರಮ ನಡೆಸಲಾಗುತ್ತಿದೆ. ಮೇ ೧೧ರಂದು ಪುಸ್ತಕಾವಲೋಕನ ೪೧ ಕಾರ್ಯಕ್ರಮ ರಬಕವಿಯಲ್ಲಿ ನಡೆಯಲಿದೆ ಎಂದರು.ಜಿಲ್ಲಾ ಬಸವಶ್ರೀ ಪ್ರಶಸ್ತಿ ಪುರಸ್ಕೃತರಾದ ಮಲ್ಲೇಶಪ್ಪ ಶಿ. ಕುಚನೂರ, ರಬಕವಿ ಸೋಮಶೇಖರ ದು. ಕೊಟ್ರಶೆಟ್ಟಿ, ಕಾಯಕಯೋಗಿ ಪ್ರಶಸ್ತಿ ಪುರಸ್ಕೃತ ಸಂತೋಷ ಆಲಗೂರ ಅವರನ್ನು ಸನ್ಮಾನಿಸಲಾಯಿತು.
ಸಾಮಾಜಿಕ ಕಾರ್ಯಕರ್ತ ಪರಪ್ಪ ರಾಮಪ್ಪ ಪೂಜಾರಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದರು. ಅರ್ಥಶಾಸ್ತ್ರ ನಿವೃತ್ತ ಉಪನ್ಯಾಸಕ ಎಂ.ಎಸ್. ಬದಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಸಾಪ ತಾಲೂಕು ಪ್ರತಿನಿಧಿ, ಹಿರಿಯ ಕಲಾವಿದ ಶ್ರೀಶೈಲ ಪಟ್ಟಣಶೆಟ್ಟಿ ಲಾವಣಿಗೀತೆ ಹಾಡಿದರು. ಮಹಾಲಿಂಗಪುರ ವಲಯ ಕಸಾಪ ಅಧ್ಯಕ್ಷ ಬಸವರಾಜ ಮೇಟಿ ಸ್ವಾಗತಿಸಿದರು. ವಿನೋದ ಸಾಹಿತಿ ಮೃತ್ಯುಂಜಯ ರಾಮದುರ್ಗ ನಿರೂಪಿಸಿದರು. ಶಿಕ್ಷಕ ಎಂ.ಎಸ್.ಗಡೆನ್ನವರ ವಂದಿಸಿದರು.
ಜಿ.ಎಸ್. ವಡಗಾಂವಿ, ಬಸವರಾಜ ಬುಟ್ಟಣ್ಣವರ, ಎಸ್.ಎಸ್. ಕಮತಗಿ, ಶಿವಾನಂದ ಬಾಗಲಕೋಟಮಠ, ಕಲಾವಿದ ಈರಪ್ಪ ಮನ್ಮಿ, ಮಲ್ಲಪ್ಪ ಗಣಿ, ಡಿ.ಬಿ. ಜಾಯಗೊಂಡ, ಶಶಿಕಾಂತ ಶಿರಗಾಂವಿ, ಈರಣ್ಣ ಗುಗ್ಗರಿ, ಈರಣ್ಣ ಗಣಮುಖಿ, ಶರತ್ ಜಂಬಗಿ, ತಾಲೂಕು ಕಸಾಪ ಪದಾಧಿಕಾರಿಗಳು, ಸಾಹಿತ್ಯಾಸಕ್ತರು, ಅಜೀವ ಸದಸ್ಯರು, ಕಲಾವಿದರು ಭಾಗವಹಿಸಿದ್ದರು.